ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಮ್ಮ ಹೆಮ್ಮೆಯ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರಗತಿ ಪ್ರತಿಮೆಯನ್ನು (Kempegowda Statue) ರಾಜ್ಯದ ಅಭಿವೃದ್ಧಿಗೆ ಪ್ರೇರಣೆಯಾಗುವ ದೃಷ್ಟಿಯಿಂದ ನಿರ್ಮಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸಭಾ ವೇದಿಕೆ ಕಾರ್ಯಕ್ರಮದ ಸಿದ್ಧತೆಗಳನ್ನು ಬುಧವಾರ ಪರಿಶೀಲನೆ ನಡೆಸಿ ಮಾತನಾಡಿದರು.
ಇದನ್ನೂ ಓದಿ | Modi In Bengaluru | ಬೆಂಗಳೂರಿನಲ್ಲಿ ಮೋದಿ ಕಾರ್ಯಕ್ರಮಗಳ ಸಂಪೂರ್ಣ ವಿವರ ಇಲ್ಲಿದೆ
ಶಿಲ್ಪಿ ರಾಮ್ ಸುತಾರಾರನ್ನು ಅಭಿನಂದಿಸಿರುವ ಪ್ರಧಾನಿ
ಕೆಂಪೇಗೌಡರ ಪ್ರಗತಿ ಪ್ರತಿಮೆಯನ್ನು ನಿರ್ಮಿಸಿದ ರಾಮ್ ಸುತಾರಾ ಶ್ರೇಷ್ಠ ಶಿಲ್ಪಿಯಾಗಿದ್ದಾರೆ. ಗುಜರಾತ್‌ನಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಮೂರ್ತಿ ಹಾಗೂ ಅಂಬೇಡ್ಕರ್ ಅವರ ಅತಿ ಎತ್ತರದ ಮೂರ್ತಿಯನ್ನು ನಿರ್ಮಿಸಿದ ಖ್ಯಾತಿ ಅವರದ್ದು. ನ.11ರಂದು ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಮ್ ಸುತಾರಾಗೆ ಅಭಿನಂದನೆ ಸಲ್ಲಿಸಲಿದ್ದಾರೆ. ಅವರ ಕೈಚಳಕದಿಂದ ಇಷ್ಟು ಬೃಹತ್ ಮೂರ್ತಿ ಮೈದಳೆದಿದೆ. ಸಮಸ್ತ ಕನ್ನಡ ನಾಡಿನ ಜನತೆಯ ಪರವಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದರು.
ನರೇಂದ್ರ ಮೋದಿ ಅವರು ಶುಕ್ರವಾರ ಬೆಳಗ್ಗೆ 9 ಗಂಟೆಗೆ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಶಾಸಕರ ಭವನದ ಆವರಣದಲ್ಲಿರುವ ಕನಕದಾಸರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ. ಬಳಿಕ ವಾಲ್ಮೀಕಿ ಮೂರ್ತಿಗೂ ಪುಷ್ಪಾರ್ಚನೆ ಮಾಡಲಿದ್ದಾರೆ, ಬಳಿಕ ಬೆಂಗಳೂರಿನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದರು.
ವಂದೇ ಭಾರತ್ ಎಕ್ಸ್‌ಪ್ರೆಸ್ ಉದ್ಘಾಟನೆ ಬಳಿಕ ವಿಮಾನ ನಿಲ್ದಾಣಕ್ಕೆ ಆಗಮಿಸಿ 2ನೇ ಟರ್ಮಿನಲ್ ಉದ್ಘಾಟಿಸಲಿದ್ದಾರೆ. ಟರ್ಮಿನಲ್-2 ಅಂತಾರಾಷ್ಟ್ರೀಯ ಮತ್ತು ದೇಶೀಯ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಸುಮಾರು 25 ಲಕ್ಷ ಪ್ರಯಾಣಿಕರ ನಿಭಾಯಿಸುವ ಸಾಮರ್ಥ್ಯವನ್ನು ಟರ್ಮಿನಲ್ ಹೊಂದಿದೆ. ಈಗಿರುವುದು 35 ಲಕ್ಷ ಸಾಮರ್ಥ್ಯವುಳ್ಳದ್ದು, ಇವೆರಡೂ ಸೇರಿದರೆ ದೆಹಲಿಯ ನಂತರ ದೇಶದ 2ನೇ ಅತಿ ದೊಡ್ಡ ಮತ್ತು ಅತಿ ಹೆಚ್ಚು ಪ್ರಯಾಣಿಕರ ನಿರ್ವಹಣೆಯುಳ್ಳ ವಿಮಾನ ನಿಲ್ದಾಣವಾಗಲಿದೆ. ಅದರ ಉದ್ಘಾಟನೆಯ ನಂತರ ಪ್ರಗತಿ ಪ್ರತಿಮೆ ಅನಾವರಣ ಮಾಡಿ ಸಾರ್ವಜನಿಕ ಸಭೆಗೆ ತೆರಳುತ್ತಾರೆ. ಅಲ್ಲಿ ಭಾಷಣ ಮುಗಿಸಿ ಮುಂದಿನ ಪ್ರಯಾಣ ಮಾಡಲಿದ್ದಾರೆ ಎಂದು ವಿವರಿಸಿದರು.
2-3 ದಿನಗಳಲ್ಲಿ ಗುಂಡಿ ಮುಚ್ಚಲಾಗುವುದು
ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಗುಂಡಿಗಳನ್ನು ಮುಚ್ಚುತ್ತಿರುವ ಬಗ್ಗೆ ಕಾಂಗ್ರೆಸ್ ಟೀಕೆಗೆ ಪ್ರತಿಕ್ರಿಯೆ ನೀಡಿ, ಅದು ನಿರಂತರವಾಗಿ ನಡೆಯುತ್ತಿರುವ ಪ್ರಕ್ರಿಯೆ. 3-4 ದಿನಗಳಲ್ಲಿ ಎಲ್ಲ ಗುಂಡಿಗಳನ್ನು ಮುಚ್ಚಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಸಚಿವರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ಆರ್.ಅಶೋಕ್, ಸಿ.ಸಿ. ಪಾಟೀಲ್ ಮತ್ತಿತರರು ಹಾಜರಿದ್ದರು.
ಇದನ್ನೂ ಓದಿ | ನಾಳೆ ಪ್ರಧಾನಿ ಮೋದಿ ಬೆಂಗಳೂರು ಭೇಟಿ | ಈ ಮಾರ್ಗಗಳಲ್ಲಿ ಸಂಚರಿಸಬೇಡಿ