ಬೆಂಗಳೂರು: ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನ.11ರಂದು ಕೆಂಪೇಗೌಡ ಪ್ರತಿಮೆ(Kempegowda Statue) ಲೋಕಾರ್ಪಣೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಬೃಹತ್ ಸಾರ್ವಜನಿಕ ಸಭೆಗೆ ಸಕಲ ಸಿದ್ಧತೆ ನಡೆಸಲಾಗಿದೆ. ವಿಶಾಲವಾದ ವೇದಿಕೆ, ಗಣ್ಯರು ಹಾಗೂ ಸಾರ್ವಜನಿಕರಿಗೆ ಆಸನ ಸೇರಿ ವಿವಿಧ ವ್ಯವಸ್ಥೆ ಮಾಡಲಾಗಿದೆ.
ಕಾರ್ಯಕ್ರಮಕ್ಕಾಗಿ 80X40 ಅಡಿ ವಿಶಾಲವಾದ ವೇದಿಕೆ ನಿರ್ಮಾಣ ಮಾಡಲಾಗಿದ್ದು, 60X20 ಅಡಿ ಎಲ್‌ಇಡಿ ವಾಲ್ ವೇದಿಕೆ, 2 ಸಾವಿರ ವಿವಿಐಪಿ ಕುರ್ಚಿ, 4 ಸಾವಿರ ವಿಐಪಿ ಕುರ್ಚಿ, 2 ಲಕ್ಷ ಸಾರ್ವಜನಿಕರಿಗೆ ಕುರ್ಚಿ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರ ವೀಕ್ಷಣೆಗೆ 35 ಎಲ್‌ಇಡಿ ವಾಲ್, 35 ಬೃಹದಾಕಾರದ ಫ್ಯಾನ್ ವ್ಯವಸ್ಥೆ, ಭದ್ರತೆಗಾಗಿ 10 ಸಾವಿರಕ್ಕೂ ಹೆಚ್ಚಿನ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ | Modi in Bengaluru | ಬೆಳಗ್ಗೆ 8ರಿಂದಲೇ ಬೆಂಗಳೂರು ರೈಲು ನಿಲ್ದಾಣಕ್ಕೆ ರೈಲು ಬರಲ್ಲ, ಪ್ರಯಾಣಿಕರೂ ಬರುವಂತಿಲ್ಲ
ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಲೋಕಾರ್ಪಣೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಲೋಕಾರ್ಪಣೆ ಸೇರಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ (ನವೆಂಬರ್ 11) ಬೆಂಗಳೂರಿಗೆ ಆಗಮಿಸಲಿದ್ದಾರೆ.
19 ಕಡೆ ವಾಹನ ಪಾರ್ಕಿಂಗ್ ವ್ಯವಸ್ಥೆ
ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತೆಯೊಂದಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸಮಾವೇಶ ನಡೆಯುವ ನಡೆಯುವ ಸ್ಥಳದ ಸಿಗ್ನೇಚರ್ ಬಿಸಿನೆಸ್ ಪಾರ್ಕ್ ಸುತ್ತಮುತ್ತ ಸಾರ್ವಜನಿಕರ ದ್ವಿಚಕ್ರ ವಾಹನ ಹಾಗೂ ಕಾರುಗಳಿಗೆ 19 ಕಡೆ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
2 ಲಕ್ಷ ಜನರಿಗೆ ಊಟದ ವ್ಯವಸ್ಥೆ
ಕಾರ್ಯಕ್ರಮಕ್ಕೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ಮಂಡ್ಯ, ರಾಮನಗರ ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ. ಹಾಗಾಗಿ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ ಸೇರಿ 2 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ವಿಮಾನ ನಿಲ್ದಾಣದ ಹಿಂಭಾಗದ ಕೈಗಾರಿಕಾ ಪ್ರದೇಶದಲ್ಲಿ ಅಡುಗೆ ತಯಾರಿ ಸಿದ್ಧತೆಗೆ 500 ಸಿಬ್ಬಂದಿಯು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ. ಸುಮಾರು ನೂರೈವತ್ತಕ್ಕೂ ಹೆಚ್ಚು ಕೌಂಟರ್‌ಗಳನ್ನು ತೆಗೆದಿದ್ದು, ಊಟ ಬಡಿಸಲು ಯಾವುದೇ ಗೊಂದಲ ಆಗದಂತೆ ಎಲ್ಲ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಪ್ರಸ್ತಾವಿತ ಕಾರ್ಯಕ್ರಮಗಳ ವಿವರ:
ಬೆಳಗ್ಗೆ 10.00: ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮನ
ಬೆಳಗ್ಗೆ 10.30: ರಸ್ತೆ ಮೂಲಕ ವಿಧಾನಸೌಧ ಆವರಣಕ್ಕೆ ಆಗಮನ
- ಶಾಸಕರ ಭವನದ ಬಳಿಯಿರುವ ಕನಕದಾಸ ಪ್ರತಿಮೆಗೆ ಮಾಲಾರ್ಪಣೆ
- ಶಾಸಕರ ಭವನದ ಬಳಿಯಿರುವ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ
ಬೆಳಗ್ಗೆ 10.42: ರಸ್ತೆ ಮೂಲಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ(ಮೆಜೆಸ್ಟಿಕ್) ಆಗಮನ
- ಚೆನ್ನೈಯಿಂದ ಮೈಸೂರಿನವರೆಗೆ ಬೆಂಗಳೂರು ಮೂಲಕ ಹಾದುಹೋಗುವ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ
- ಬೆಂಗಳೂರಿನಿಂದ ಕಾಶಿಗೆ ತೆರಳುವ ಭಾರತ್ ಗೌರವ್ ಕಾಶಿ ದರ್ಶನ್ ರೈಲಿಗೆ ಹಸಿರು ನಿಶಾನೆ
ಬೆಳಗ್ಗೆ 11.20: ಹೆಬ್ಬಾಳದ ಏರ್‌ಫೊರ್ಸ್ ಕಮಾಂಡ್ ಸೆಂಟರ್‌ನಿಂದ ಹೆಲಿಕಾಪ್ಟರ್ ಮೂಲಕ ಪ್ರಯಾಣ
ಬೆಳಗ್ಗೆ 11.50: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೆ ಟರ್ಮಿನಲ್ ಲೋಕಾರ್ಪಣೆ
ಮದ್ಯಾಹ್ನ 12.10: ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಲೋಕಾರ್ಪಣೆ
- ಮಧ್ಯಾಹ್ನ 12.50: ವೇದಿಕೆ ಕಾರ್ಯಕ್ರಮ
- ಅಮೃತ್ 2.0 ಯೋಜನೆಗೆ ಚಾಲನೆ
- ನಾಡಪ್ರಭು ಕೆಂಪೇಗೌಡರ ಕುರಿತು ವಿಡಿಯೋ ಪ್ರಸಾರ
- ಸಿಎಂ ಬಸವರಾಜ ಬೊಮ್ಮಾಯಿ ಭಾಷಣ
- ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಭಾಷಣ
- ಪ್ರಧಾನಿ ನರೇಂದ್ರ ಮೋದಿ ಭಾಷಣ
ಇದನ್ನೂ ಓದಿ | ನಾಳೆ ಪ್ರಧಾನಿ ಮೋದಿ ಬೆಂಗಳೂರು ಭೇಟಿ | ಈ ಮಾರ್ಗಗಳಲ್ಲಿ ಸಂಚರಿಸಬೇಡಿ