Site icon Vistara News

Kempegowda statue | ಆಕರ್ಷಕ ಪ್ರವಾಸಿ ತಾಣವಾಗುತ್ತಿರುವ ಕೆಂಪೇಗೌಡರ ಪ್ರತಿಮೆ, ನಿತ್ಯ ಸಾವಿರಾರು ಜನರ ಆಗಮನ

Kempegowda statue

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲೋಕಾರ್ಪಣೆಗೊಂಡ ಬೆನ್ನಲ್ಲೇ ಆಕರ್ಷಕ ಪ್ರವಾಸಿ ತಾಣವಾಗಿ ಕೆಂಪೇಗೌಡರ ಕಂಚಿನ ಪ್ರತಿಮೆ (Kempegowda statue) ಇರುವ ಸ್ಥಳ ಬದಲಾವಣೆಯಾಗುತ್ತಿದೆ. ಪ್ರತಿಮೆಯನ್ನು ವೀಕ್ಷಿಸಲು ಹೆಚ್ಚಿನ ಜನರು ಬರುತ್ತಿದ್ದು, ಪ್ರವಾಸಿಗರಿಗೆ ಸೂಕ್ತ‌ ಸೌಲಭ್ಯ ಕಲ್ಪಿಸುವ ಸಂಬಂಧ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಸದ್ಯಕ್ಕೆ 23 ಎಕರೆ ಪ್ರದೇಶದಲ್ಲಿ ನಾಡಪ್ರಭು ಕೆಂಪೇಗೌಡ ಥೀಮ್ ಪಾರ್ಕ್ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಇಂಡಿಯನ್‌ ಆಯಿಲ್ ಪೆಟ್ರೋಲ್‌ ಬಂಕ್ ಕಡೆಯಿಂದ ಪ್ರವಾಸಿಗರು ಪ್ರತಿಮೆಯನ್ನು ತಲುಪಿ ವೀಕ್ಷಿಸಲು ಅನುಕೂಲ ಮಾಡಿಕೊಡಲು‌ ಅಧಿಕಾರಿಗಳಿಗೆ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೂಚಿಸಿದರು.

ಇದನ್ನೂ ಓದಿ | Modi in bengaluru | ಇನ್ನೂ ಬಹಳಷ್ಟಿದೆ 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆಯ ವೈಶಿಷ್ಟ್ಯ!

ಇದರ ಜತೆಗೆ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ಗರಿಷ್ಠ 80 ವಾಹನಗಳಿಗೆ ಪಾರ್ಕಿಂಗ್ ಅವಕಾಶ ಕಲ್ಪಿಸಲಾಗುವುದು. ಈ ಅನುಕೂಲವು ಒಂದು ವಾರದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಪ್ರತಿಮೆ ವೀಕ್ಷಣೆಗೆ ಬರುವ ಪ್ರವಾಸಿಗರ ವಾಹನಗಳು ಗರಿಷ್ಠ ಅರ್ಧ ಗಂಟೆ ನಿಲ್ಲಿಸಲು ಅವಕಾಶ ನೀಡಲಾಗುವುದು ಎಂದವರು ತಿಳಿಸಿದರು.

ನ.11ರಂದು ಪ್ರಧಾನಿ ನರೇಂದ್ರ ಮೋದಿ ಅವರು 108 ಅಡಿ ಎತ್ತರದ ಈ ಕಂಚಿನ ಪ್ರತಿಮೆ ಉದ್ಘಾಟಿಸಿದ ನಂತರ ಪ್ರತಿ ನಿತ್ಯ ಮಧ್ಯರಾತ್ರಿ ೧ ಗಂಟೆಯಾದರೂ ಸಹಸ್ರಾರು ಆಸಕ್ತರು ತಂಡೋಪತಂಡವಾಗಿ ಪ್ರತಿಮೆ ವೀಕ್ಷಣೆಗೆ ಆಗಮಿಸುತ್ತಲೇ ಇದ್ದಾರೆ. ಬಂದವರಿಗೆ ನಿರಾಸೆ ಆಗಬಾರದು ಎನ್ನುವುದು ಸರ್ಕಾರದ ಬಯಕೆಯಾಗಿದೆ. ಪ್ರತಿಮೆಯು ಮತ್ತಷ್ಟು ಆಕರ್ಷಕವಾಗಿ ಕಂಗೊಳಿಸುವಂತೆ ಮಾಡಲು ರಾತ್ರಿ ವೇಳೆ ಬೆಳಕಿನ ಅಲಂಕಾರಕ್ಕೂ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಥೀಮ್ ಪಾರ್ಕ್ ಕಾಮಗಾರಿ ಮುಗಿದ ಮೇಲೆ ಪ್ರತಿಮೆ ವೀಕ್ಷಣೆಗೆ ಮತ್ತಷ್ಟು ವ್ಯವಸ್ಥಿತ ಸೌಲಭ್ಯ ಮಾಡಲಾಗುವುದು. ಅಲ್ಲಿಯವರೆಗೆ ಇದು ತಾತ್ಕಾಲಿಕ ವ್ಯವಸ್ಥೆ ಆಗಿರುತ್ತದೆ. ಪ್ರತಿಮೆ ವೀಕ್ಷಣೆ ಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ನುಡಿದರು.

ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಧಿಕಾರಿಗಳು, ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ವಿನಯ್ ದೀಪ್ ಇದ್ದರು.

ಇದನ್ನೂ ಓದಿ | Modi In Bengaluru | ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ ಕ್ಷಣದ ವಿಶೇಷ ಫೋಟೋಗಳು ಇಲ್ಲಿವೆ

Exit mobile version