Site icon Vistara News

CPI(M) | ಬಾಗೇಪಲ್ಲಿಯಲ್ಲಿ ಚುನಾವಣೆ ರಣಕಹಳೆ ಮೊಳಗಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್

CPI(M)

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಒಂದೆಡೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಬೃಹತ್‌ ಸಮಾವೇಶಗಳ ಮೂಲಕ ಕಸರತ್ತು ನಡೆಸುತ್ತಿದ್ದರೆ,‌ ಇತ್ತ ಜಿಲ್ಲೆಯ ಗಡಿನಾಡಿನಲ್ಲಿ ಸಿಪಿಐ(ಎಂ)(CPI(M))ರಾಜಕೀಯ ಸಮಾವೇಶದ ಮೂಲಕ ಸದ್ದು ಮಾಡಿದೆ. ಕೆಂಪುವೀರರ ಕೋಟೆ ಬಾಗೇಪಲ್ಲಿಯಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್‌, ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ.

ಕೋಮುವಾದಿ ಶಕ್ತಿಗಳ ಬೆಳವಣಿಗೆ ಕರ್ನಾಟಕಕ್ಕೆ ಮಾರಕ
ಸಮಾವೇಶದಲ್ಲಿ ಮಾತನಾಡಿದ ಕೇರಳ ಸಿಎಂ ಪಿಣರಾಯಿ ವಿಜಯನ್‌, ಈ ಹಿಂದೆ ರಾಜ್ಯ ಪ್ರಗತಿಪರ ಚಳವಳಿ ತವರುಭೂಮಿಯಾಗಿತ್ತು. ಜಾತಿ ವ್ಯವಸ್ಥೆ, ಅಸಮಾನತೆ, ದಲಿತರ ಶೋಷಣೆ ವಿರುದ್ಧ ಪ್ರಗತಿಪರ ಶಕ್ತಿಗಳು ಹೋರಾಡಿದ ಇತಿಹಾಸ ಇಲ್ಲಿದೆ. ಆದರೆ, ಆರ್‌ಎಸ್‌ಎಸ್‌ ಬೆಳವಣಿಗೆ ಇದಕ್ಕೆಲ್ಲ ಹಿನ್ನಡೆ ತಂದಿದೆ. ಕೋಮುವಾದಿ ಶಕ್ತಿಗಳ ಬೆಳವಣಿಗೆ ಕರ್ನಾಟಕಕ್ಕೆ ಮಾರಕವಾಗಿದ್ದು, ಅವರು ಜನರ ಅಭಿವ್ಯಕ್ತಿ ಶಕ್ತಿಯನ್ನೇ ಕಿತ್ತುಕೊಂಡಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಇದನ್ನೂ ಓದಿ | ಭಾರತ್‌ ಜೋಡೊ ಹೊಸ್ತಿಲಲ್ಲೆ ಅಪಸ್ವರ: ಡಿಕೆಶಿ ಹೇಳಿಕೆಗೆ ಮೂಲ ಕಾಂಗ್ರೆಸಿಗರಿಂದಲೇ ವಿರೋಧ

ಕೋಮುವಾದಿಗಳಿಂದ ಗೌರಿ ಲಂಕೇಶ್‌ರಂತಹ ಸಾಹಿತಿಗಳು ಕೊಲೆಯಾದರು. ಕೆ.ಎಸ್.ಭಗವಾನ್ ಸಂಘವಾರದ ಕಿರುಕುಳಕ್ಕೆ ಒಳಪಟ್ಡಿದ್ದಾರೆ, ಪ್ರೊ.ಯು.ಆರ್ ಅನಂತಮೂರ್ತಿ ಸಂಘಪರಿವಾರದಿಂದ ನೋವನ್ನು ಅನುಭವಿಸಿದ್ದಾರೆ. ಇವರಿಗೆ ಪಾಕಿಸ್ತಾನಕ್ಕೆ ಟಿಕೆಟ್‌ ಕೊಟ್ಟು ಕಳುಹಿಸಿದ ಇತಿಹಾಸ ಮರೆಯುವ ಹಾಗಿಲ್ಲ. ಉತ್ತರ ಭಾರತದಲ್ಲಿ ಕೋಮು ಗಲಭೆಗಳು ಅತಿಯಾಗಿವೆ, ಪಠ್ಯಪುಸ್ತಕಗಳನ್ನು ಕೇಸರೀಕರಣ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ಬಿಜೆಪಿಯವರ ಕರಾಳ ಮುಖ ತೋರಿಸುತ್ತಿದೆ. ಹಿಜಾಬ್ ಹೆಸರಿನಲ್ಲಿ ಗಲಾಟೆಯ ಹುನ್ನಾರ ಇದರ ಭಾಗವಾಗಿದೆ ಎಂದರು.

ಭಾರತದ ಅಲ್ಪಸಂಖ್ಯಾತರ ಮೇಲೆ ಅಧಿಕಾರ ದುರ್ಬಳಕೆ ಆಗುತ್ತಿದೆ. ಹಿಂದು ಸಂಘಟನೆಗಳು ಕೋಮುವಾದಿಗಳ ಫ್ಯಾಕ್ಟರಿಗಳು ಆಗುತ್ತಿವೆ. ಲವ್ ಜಿಹಾದ್‌ ಅಪವಾದ ಪ್ರಚಾರಗಳು ಸಂಘ ಪರಿವಾರದ ಪ್ರಮುಖ ಭಾಗಗಳಾಗಿವೆ. ಹೀಗಾಗಿ ಕೋಮುವಾದದ ವಿರುದ್ಧ ಹೋರಾಟ ಮಾಡದೇ ಹೋದಲ್ಲಿ ಅಪಾಯ ತಪ್ಪಿದ್ದಲ್ಲ ಎಂದ ಅವರು, ಸಂಘಪರಿವಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಧ್ವಂಸಗೊಳಿಸುತ್ತಿದೆ. ಸಂಕುಚಿತ ರಾಷ್ಟ್ರವಾದ ಪಾಲನೆ ನಡೆಯುತ್ತಿದ್ದು, ರಾಷ್ಟ್ರ ಪ್ರೇಮ ಎಂದರೆ ಹಿಂದುತ್ವ ಪ್ರೇಮ ಎಂಬ ಕಲ್ಪನೆ ಮೂಡಿಸಲಾಗುತ್ತಿದ್ದು, ರಾಷ್ಟ್ರೀಯತೆಯನ್ನು ಕೆಲವು ವ್ಯಕ್ತಿಗಳು ಬಂಡವಾಳ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಸ್ವಾತಂತ್ರ ಹೋರಾಟದ ಮೊದಲಲ್ಲಿ ಕೊನೆಯಲ್ಲಿ ಸಂಘ ಪರಿವಾರದವರು ಇರಲಿಲ್ಲ. ಆದಿವಾಸಿಗಳು, ಮಹಿಳೆಯರು, ದಲಿತ ಹೋರಾಟಗಾರರು ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಯುಕ್ತಿವಾದಿಗಳು ಕೊಲ್ಲಲ್ಪಡುತ್ತಿದ್ದು, ಅವರನ್ನು ದೇಶದ್ರೋಹಗಳೆಂದು ಬಿಂಬಿಸಲಾಗುತ್ತಿದೆ. ಕೋಮುವಾದ ಮುಂದೆ ಇಟ್ಟುಕೊಂಡು ಕಾರ್ಪೊರೇಟ್ ಉದ್ಯಮಿಗಳನ್ನು ಬೆಳೆಸುತ್ತಿದ್ದಾರೆ. ಹೀಗಾಗಿ ದೇಶದಲ್ಲಿ ಅಸಮಾನತೆ ಅತಿ ವೇಗವಾಗಿ ಬೆಳೆಯುತ್ತಿದೆ. ಪ್ರಸ್ತುತ ಭಾರತದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಪೋಲಿಸ್ ಇಲಾಖೆಯಲ್ಲಿ ಹತ್ತು ಲಕ್ಷ ಹುದ್ದೆಗಳು ಖಾಲಿ ಇವೆ, ರೈಲ್ವೆ ಇಲಾಖೆಯಲ್ಲಿ ಮೂರು ಲಕ್ಷ ಹುದ್ದೆಗಳು ಖಾಲಿ ಇವೆ. ಖಾಸಗೀಕರಣ ದೇಶದಲ್ಲಿ ಮನೆ ಮಾಡಿದೆ, ಜೂನ್-ಜುಲೈನಲ್ಲಿ 80 ಲಕ್ಷ ಹುದ್ದೆಗಳು ಕಡಿತಗೊಂಡಿವೆ ಎಂದು ಹೇಳಿದರು.

ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ನಿಧನದ ನಂತರ ಮೊದಲ ಬೃಹತ್‌ ಸಮಾವೇಶ
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದಲ್ಲಿ ಇಡೀ ರಾಜ್ಯದಲ್ಲೇ ಎರಡು ಬಾರಿ ಸಿಪಿಐ (ಎಂ)ನಿಂದ ಗೆದ್ದು ಬೀಗಿ ಕೆಂಪುಬಾವುಟ ಹಾರಿಸಿದ್ದ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ನಿಧನದ ನಂತರ ಮೊದಲ ಬಾರಿಗೆ ಬಾಗೇಪಲ್ಲಿಯಲ್ಲಿ ರಾಜ್ಯಮಟ್ಟದ ಸಿಪಿಐ(ಎಂ) ರಾಜಕೀಯ ಸಮಾವೇಶ ನಡೆದಿರುವುದು ವಿಶೇಷವಾಗಿದೆ. ಸಿಪಿಐ(ಎಂ)ನಿಂದ ಪ್ರಬಲ ಅಭ್ಯರ್ಥಿ ಸ್ಪರ್ಧೆ ಮಾಡಿದರೆ ಕಾಂಗ್ರೆಸ್ ಅಭ್ಯರ್ಥಿ ಎಸ್.ಎನ್.ಸುಬ್ಬಾರೆಡ್ಡಿಗೆ ತೀವ್ರ ಪೈಪೋಟಿ ಏರ್ಪಡಲಿದೆ.

ಇದನ್ನೂ ಓದಿ | Harapanahalli | ಈಜಾಡಲು ಹೋಗಿ ಕೆರೆ ನೀರಿನಲ್ಲಿ‌ ಮುಳುಗಿ ಇಬ್ಬರು ಯುವಕರು ಸಾವು

Exit mobile version