Site icon Vistara News

Nandini In Kerala: ಕರ್ನಾಟಕದಲ್ಲಿ ಅಮುಲ್‌ ಬೇಡ, ಅದೇ ರೀತಿ ನಮ್ಮಲ್ಲಿ ನಂದಿನಿ ಬೇಡ; ಹಾಲಿನ ವಿಚಾರಕ್ಕೆ ಕೇರಳ ತಗಾದೆ

Nandini VS Milma In Kerala

Kerala milk federation to oppose sale of Karnataka's Nandini milk in state

ತಿರುವನಂತಪುರಂ: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಗುಜರಾತ್‌ನ ಅಮುಲ್‌ ಸಂಸ್ಥೆಯು ಕರ್ನಾಟಕದ ಕೆಎಂಎಫ್‌ಅನ್ನು (ನಂದಿನಿ) ವಶಪಡಿಸಿಕೊಳ್ಳುತ್ತದೆ, ಅಮುಲ್‌ ಉತ್ಪನ್ನಗಳ ಉತ್ತೇಜನಕ್ಕಾಗಿಯೇ ನಂದಿನಿ ಹಾಲಿನ ಉತ್ಪನ್ನಗಳ ಕೃತಕ ಅಭಾವ ಸೃಷ್ಟಿಸಲಾಗುತ್ತದೆ ಎಂಬ ಆರೋಪಗಳು ದೇಶಾದ್ಯಂತ ಸುದ್ದಿಯಾಗಿದ್ದವು. ನಂದಿನಿ ಹಾಲಿನ ಅಸ್ಮಿತೆಗಾಗಿ ಕರ್ನಾಟಕದಲ್ಲಿ ಹೋರಾಟಗಳೇ ಆರಂಭವಾಗಿದ್ದವು. ಈ ಪ್ರಕರಣ ತಣ್ಣಗಾದ ಬೆನ್ನಲ್ಲೇ, ಕೇರಳದಲ್ಲಿ ಹಾಲಿನ ಅಸ್ಮಿತೆಗಾಗಿ ತಗಾದೆ ಶುರುವಾಗಿದೆ. ಕರ್ನಾಟಕದ ನಂದಿನಿ ಹಾಲಿನ (Nandini In Kerala) ಉತ್ಪನ್ನಗಳ ಮಾರಾಟಕ್ಕೆ ಕೇರಳ ವಿರೋಧ ವ್ಯಕ್ತಪಡಿಸುತ್ತಿದೆ.

ಹೌದು, ಕರ್ನಾಟಕದ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟವನ್ನು ವಿರೋಧಿಸಲು ಕೇರಳ ಕೋಆಪರೇಟಿವ್‌ ಮಿಲ್‌ ಮಾರ್ಕೆಟಿಂಗ್‌ ಫೆಡರೇಷನ್‌ (Milma-ಮಿಲ್ಮ) ತೀರ್ಮಾನಿಸಿದೆ. ಹಾಗೆಯೇ, ಭಾರತೀಯ ರಾಷ್ಟ್ರೀಯ ಸಹಕಾರಿ ಡೇರಿ ಫೇಡರೇಷನ್‌ ನಿರ್ದೇಶಕರ ಮಂಡಳಿ ಸಭೆಯಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಸ್ಥಗಿತಗೊಳಿಸುವ ಕುರಿತು ಪ್ರಸ್ತಾಪಿಸಲು ಕೂಡ ತೀರ್ಮಾನಿಸಲಾಗಿದೆ. ಹಾಗೊಂದು ವೇಳೆ, ಕೇರಳದಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಸ್ಥಗಿತಗೊಂಡರೆ ಕೆಎಂಎಫ್‌ಗೆ ಹಿನ್ನಡೆಯಾಗುತ್ತದೆ ಎಂದೇ ಹೇಳಲಾಗುತ್ತಿದೆ.

“ದೇಶದಲ್ಲಿ ಹಾಲಿನ ಒಕ್ಕೂಟಗಳು ಇದುವರೆಗೆ ಪಾಲಿಸಿಕೊಂಡು ಬರುತ್ತಿದ್ದ ಕೆಲಸ ನಿಯಮಗಳನ್ನು ಮುರಿಯುತ್ತಿವೆ. ಕರ್ನಾಟಕದಲ್ಲಿ ಅಮುಲ್‌ಗೆ ವಿರೋಧ ವ್ಯಕ್ತವಾಗುವ ಮೊದಲೇ ಕೇರಳದಲ್ಲಿ ಮಿಲ್ಮ ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡಲು ತೀರ್ಮಾನಿಸಲಾಗಿತ್ತು. ಕೇರಳದಲ್ಲಿ ಕರ್ನಾಟಕದ ಹಾಲಿನ ಮಳಿಗೆ ಸ್ಥಾಪಿಸಲು ಮೊದಲೇ ವಿರೋಧಿಸಿ ಪತ್ರ ಬರೆದಿದ್ದೆವು. ಕರ್ನಾಟದಲ್ಲಿ ಬ್ಯುಸಿನೆಸ್‌ ಮಾಡಲು ಮುಂದಾದ ಅಮುಲ್‌ ನಿರ್ಧಾರ ಸರಿಯಲ್ಲ. ಹಾಗಂತ, ಅಮುಲ್‌ಗೆ ವಿರೋಧ ವ್ಯಕ್ತಪಡಿಸುವ ಯಾವ ನೈತಿಕತೆಯೂ ನಂದಿನಿಗಿಲ್ಲ” ಎಂದು ಮಿಲ್ಮ ಮಲಬಾರ್‌ ಪ್ರಾದೇಶಿಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಎಸ್.‌ ಮಣಿ ಹೇಳಿದರು.

“ಹಾಲಿನ ಒಕ್ಕೂಟಗಳು ಉದ್ಯಮದ ಜತೆಗೆ ಸಹಕಾರಿ ತತ್ವದ ಮೌಲ್ಯಗಳನ್ನು ಕಾಪಾಡಬೇಕು. ಕೇರಳದ ಮಿಲ್ಮಾ ಸಂಸ್ಥೆಯು ಕರ್ನಾಟಕದ ನಂದಿನಿ ಹಾಗೂ ತಮಿಳುನಾಡಿನ ಆವಿನ್‌ ಸಂಸ್ಥೆಯ ಮೇಲೆ ಅವಲಂಬಿತವಾಗಿತ್ತು. ಕೇರಳದಲ್ಲಿ ಹಬ್ಬಗಳು ಬಂದರೆ ಹಾಲಿನ ಕೊರತೆಯಾಗುತ್ತಿತ್ತು. ಆಗೆಲ್ಲ, ನಂದಿನಿ ಹಾಗೂ ಆವಿನ್‌ ಹಾಲಿನ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆ ಇರುತ್ತಿತ್ತು. ಆದರೆ, ಈಗ ಸಹಕಾರಿ ತತ್ವಗಳನ್ನು ಗಾಳಿಗೆ ತೂರಲಾಗಿದೆ” ಎಂದು ಆರೋಪಿಸಿದರು.

ಇದನ್ನೂ ಓದಿ: ಅಮುಲ್ vs ನಂದಿನಿ ಬೆನ್ನಲ್ಲೇ ತಮಿಳುನಾಡಿನಲ್ಲಿ ಆವಿನ್ vs ಅಮುಲ್! ಕೇಂದ್ರಕ್ಕೆ ಸ್ಟಾಲಿನ್ ಪತ್ರ, ಏನಿದು ವಿವಾದ?

ಕರ್ನಾಟಕದಲ್ಲಿ ನಂದಿನಿ ಹಾಗೂ ಅಮುಲ್‌ ವಿಷಯವು ವಿಧಾನಸಭೆ ಚುನಾವಣೆ ವಿಷಯವೂ ಆಗಿತ್ತು. ಅಮುಲ್‌ನೊಂದಿಗೆ ಕೆಎಂಎಫ್‌ ವಿಲೀನಗೊಳಿಸಲಾಗುತ್ತದೆ ಎಂಬೆಲ್ಲ ಆರೋಪಗಳು ಕೇಳಿಬಂದಿದ್ದವು. ಇದಾದ ಬಳಿಕ ತಮಿಳುನಾಡಿನಲ್ಲಿ ಆವಿನ್‌ ಹಾಗೂ ಅಮುಲ್‌ ಮಧ್ಯೆಯೂ ಸಂಘರ್ಷ ಶುರುವಾಗಿತ್ತು. ಕೃಷ್ಣಗಿರಿ ಜಿಲ್ಲೆಯಲ್ಲಿ ಅಮುಲ್‌ ಶೀತಲೀಕರಣ ಕೇಂದ್ರಗಳು ಹಾಗೂ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಮುಂದಾಗಿದ್ದಕ್ಕೆ ತಮಿಳುನಾಡು ವಿರೋಧ ವ್ಯಕ್ತಪಡಿಸಿತ್ತು. ಕೇಂದ್ರ ಸಹಕಾರಿ ಸಚಿವರೂ ಆದ ಅಮಿತ್‌ ಶಾ ಅವರಿಗೆ ಸಿಎಂ ಎಂ.ಕೆ.ಸ್ಟಾಲಿನ್‌ ಈ ಕುರಿತು ಪತ್ರವನ್ನೂ ಬರೆದಿದ್ದರು.

Exit mobile version