Site icon Vistara News

Keremane Shambhu Hegde: ಫೆ.3ರಿಂದ 7ರವರೆಗೆ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ

Keremane Shambhu Hegde National Dance Festival gunavante

ಕಾರವಾರ: ಹೊನ್ನಾವರ ತಾಲೂಕಿನ ಗುಣವಂತೆಯಲ್ಲಿ ಕೆರೆಮನೆ ಶಂಭು ಹೆಗಡೆ (Keremane Shambhu Hegde) ರಾಷ್ಟ್ರೀಯ ನಾಟ್ಯೋತ್ಸವವು ಫೆ. 3ರಿಂದ 7ರವರೆಗೆ ನಡೆಯಲಿದೆ ಎಂದು ಮಂಡಳಿಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದರು.

ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ (ಜ.೨೫ ) ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದ ಅವರು, ನಾಟ್ಯೋತ್ಸವದ ಮೊದಲ ದಿನ ಫೆ. 3 ರಂದು ಸಂಜೆ 4.30ಕ್ಕೆ ಚಿತ್ರಾಪುರ ಮಠಾಧೀಶ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಇಲಾಖೆಯ ಸಚಿವ ವಿ.ಸುನೀಲ ಕುಮಾರ ಉದ್ಘಾಟಿಸುವರು ಎಂದು ತಿಳಿಸಿದರು.

ಚಲನಚಿತ್ರ ಹಾಗೂ ರಂಗಭೂಮಿ ಹಿರಿಯ ಕಲಾವಿದ ಅನಂತ ನಾಗ್ ಅವರಿಗೆ ‘ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ-2021’ ಅನ್ನು ಪ್ರದಾನ ಮಾಡಲಾಗುವುದು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಪ್ರಶಸ್ತಿ ಪ್ರದಾನ ಮಾಡುವರು. ಮಂಡಳಿ ವತಿಯಿಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಲಾವಿದ ಡಾ. ಎಂ.ಪ್ರಭಾಕರ ಜೋಶಿ ಇವರಿಗೆ ವಿಶೇಷ ಸನ್ಮಾನ ಮಾಡಲಾಗುವುದು ಎಂದು ತಿಳಿಸಿದರು.

ವಿಸ್ತಾರ ನ್ಯೂಸ್‌ ಸಿಇಒ, ಪ್ರಧಾನ ಸಂಪಾದಕ ಪತ್ರಕರ್ತ ಹರಿಪ್ರಕಾಶ ಕೋಣೆಮನೆ, ನಟ ಅನಂತ ಭಟ್ಟ ಹುಳಗೋಳ, ಬರಹಗಾರ ಎಂ.ಕೆ.ಭಾಸ್ಕರ ರಾವ್, ಶಾಸಕ ಸುನೀಲ ನಾಯ್ಕ, ಪತ್ರಕರ್ತ ಬಿ.ಗಣಪತಿ, ಉಡುಪಿ ಶಾಸಕ ರಘುಪತಿ ಭಟ್, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ ಕೊಡಗಿ, ಡಿಸಿ ಪ್ರಭುಲಿಂಗ ಕವಳಿಕಟ್ಟಿ, ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ, ಬರಹಗಾರ ರೋಹಿತ್ ಚಕ್ರತೀರ್ಥ, ಸಾಂಸ್ಕೃತಿಕ ಚಿಂತಕ ನಾರಾಯಣ ಯಾಜಿ, ಮಾಜಿ ಶಾಸಕ ಮಂಕಾಳ ವೈದ್ಯ, ಸಾಹಿತಿ ರೋಹಿದಾಸ ಮತ್ತಿತರರು ಈ ಐದು ದಿನಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು ಎಂದು ತಿಳಿಸಿದರು.

ಇದನ್ನೂ ಓದಿ | Nuclear War : ಭಾರತ-ಪಾಕ್ ಮಧ್ಯೆ ಅಣ್ವಸ್ತ್ರ ಬಳಕೆ ಸ್ವಲ್ಪದರಲ್ಲೇ ತಪ್ಪಿತಾ? ಅಮೆರಿಕದ ಮಾಜಿ ಸಚಿವ ಹೇಳೋದೇನು?

ಯಕ್ಷಗಾನ ಕಲಾವಿದ ತಿಮ್ಮಪ್ಪ ಹೆಗಡೆ ಶಿರಳಗಿ ಇವರಿಗೆ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನ, ಯಕ್ಷರಂಗ ಮಾಸಪತ್ರಿಕೆ, ಚಲನಚಿತ್ರ ನಟ ನೀರ್ನಳ್ಳಿ ರಾಮಕೃಷ್ಣ ಮತ್ತಿತರರಿಗೆ ಸನ್ಮಾನ, ವೆಂಕಟ್ರಮಣ ಹೆಗಡೆ ಇವರಿಗೆ ಶ್ರೀಮಯ ಕಲಾ ಪೋಷಕ ಪ್ರಶಸ್ತಿ ಪ್ರದಾನವಿದೆ. ಗುಣವಂತೆಯ ಭಂಡಾರಿ ಮಿತ್ರ ವೃಂದದವರಿಂದ ಪಂಚವಾದ್ಯ ಸಮ್ಮೇಳ-ಮಂಗಳವಾದ್ಯ, ಕೇರಳ ತಂಡದ ಕಿರಾತಾರ್ಜುನೀಯ ಕಥಕ್ಕಳಿ, ಓಡಿಸ್ಸಿ ನೃತ್ಯ, ಲಯ ಲಾವಣ್ಯ, ಶ್ರೀ ಕೃಷ್ಣ ಕಾರುಣ್ಯ ಯಕ್ಷಗಾನ, ನಾಟಕ, ಗಝಲ್ ಗಾಯನ, ನಾಟ್ಯ ಪ್ರಕಾರದ ರೂಪಕ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಬಾನ್ಸುರಿ ವಾದನ, ತಬಲ ವಾದನ, ಶಾಲಾ ಮಕ್ಕಳಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತಿತರ ಕಾರ್ಯಕ್ರಮಗಳು ಈ ದಿನಗಳಲ್ಲಿ ನಡೆಯಲಿವೆ ಎಂದು ತಿಳಿಸಿದರು. ಫೆ. 7ರಂದು ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಹಿರಿಯ ಪತ್ರಕರ್ತ ಜಿ.ಯು. ಭಟ್ಟ ಅಧ್ಯಕ್ಷತೆ ವಹಿಸುವರು.

ನಾಟ್ಯೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮೀ ನಾರಾಯಣ ಕಾಶಿ ಮಾತನಾಡಿ, ವಿವಿಧ ಕಲಾ ಪ್ರಕಾರ ಪ್ರದರ್ಶನದ ಜೊತೆಗೆ ಅನೇಕ ಸಾಧಕರನ್ನು ಸನ್ಮಾನಿಸುವ ಕಾರ್ಯ ರಾಷ್ಟ್ರೀಯ ನಾಟ್ಯೋತ್ಸವದ ಮೂಲಕ ನಡೆಯುತ್ತಿದೆ ಎಂದು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಕೆ.ಜಿ.ಹೆಗಡೆ ಉಪಸ್ಥಿತರಿದ್ದರು.

ಇದನ್ನೂ ಓದಿ | Ayodhya Ram Mandir : ರಾಮ-ಸೀತೆಯ ಮೂರ್ತಿ ನಿರ್ಮಾಣಕ್ಕೆ ನೇಪಾಳದಿಂದ ಬರಲಿವೆ ಶಿಲೆಗಳು!

Exit mobile version