ಬಾಗಲಕೋಟೆ: ಕೆರೂರು ಗಲಭೆ ಪ್ರಕರಣ ಖಂಡಿಸಿ ರಬಕವಿ-ಬನಹಟ್ಟಿ ಪಟ್ಟಣದಲ್ಲಿ ಹಿಂದು ಕಾರ್ಯಕರ್ತರು ಬೈಕ್ ರ‍್ಯಾಲಿ ಮೂಲಕ ಪ್ರತಿಭಟಿಸಿದರು. ರಬಕವಿಯಲ್ಲಿನ ಮಹಾಲಿಂಗಪುರ ನಾಕಾದಿಂದ ಬನಹಟ್ಟಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ‍್ಯಾಲಿಯಲ್ಲಿ ತೆರಳಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.
ಕೆರೂರುರಿನಲ್ಲಿ ಜುಲೈ 6ರಂದು ನಡೆದಿದ್ದ ಗಲಭೆಯಲ್ಲಿ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಕಟ್ಟಿಮನಿ, ಸಹೋದರ ಲಕ್ಷ್ಮಣ್ ಕಟ್ಟಿಮನಿ, ಯಮನೂರು ಚುಂಗಿನ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಹೀಗಾಗಿ ಕೆರೂರು ಗಲಭೆಯಲ್ಲಿ ಹಿಂದುಗಳ ಮೇಲೆ ಹಲ್ಲೆಯಾಗಿರುವುದನ್ನು ಖಂಡಿಸಿ ವಿವಿಧ ಹಿಂದುಪರ ಸಂಘಟನೆಗಳು ಬುಧವಾರ ಬಾಗಲಕೋಟೆ ಬಂದ್ ನಡೆಸಿದ್ದರು. ಈ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಈ ಪ್ರತಿಭಟನೆ ಬಗ್ಗೆ ಸಚಿವ ಪ್ರಭು ಚವ್ಹಾಣ್ ಪ್ರತಿಕ್ರಿಯಿಸಿ, ನಮ್ಮ ಸರ್ಕಾರ ಎಲ್ಲರಿಗೂ ರಕ್ಷಣೆ ಕೊಡುತ್ತದೆ. ಹಿಂದು ಅಷ್ಟೇ ಅಲ್ಲ, ಕರ್ನಾಟಕದ 6 ಕೋಟಿ ಜನರ ರಕ್ಷಣೆಯೂ ನಮ್ಮ ಆದ್ಯತೆ. ಎಲ್ಲರಿಗೂ ರಕ್ಷಣೆ ಮಾಡಬೇಕೆಂಬುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ತಪ್ಪಿತಸ್ಥರ ವಿರುದ್ಧ ಖಂಡಿತವಾಗಿಯೂ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಕೆರೂರು ಗಲಭೆ ಪ್ರಕರಣ ಖಂಡಿಸಿ ಜುಲೈ 11ರಂದು ಬೃಹತ್ ಪ್ರತಿಭಟನೆಗೆ ಕರೆ