Site icon Vistara News

KFCC Election | ಭಾ. ಮಾ. ಹರೀಶ್‌ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ, ಸಾ. ರಾ ಸೋಲು

ba_ma_harish

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (KFCC) ಅಧ್ಯಕ್ಷರಾಗಿ ನಿರ್ಮಾಪಕ ಭಾ. ಮಾ. ಹರೀಶ್‌ ಆಯ್ಕೆಯಾಗಿದ್ದಾರೆ. ಹಿರಿಯ ನಿರ್ಮಾಪಕ ಮತ್ತು ಕನ್ನಡ ಪರ ಹೋರಾಟಗಾರ ಸಾ. ರಾ. ಗೋವಿಂದು ಅವರನ್ನು ಸೋಲಿಸಿ ಅಧ್ಯಕ್ಷ ಸ್ಥಾನ ಪಡೆದುಕೊಂಡಿದ್ದಾರೆ.

ಶನಿವಾರ ನಡೆದ ವಾಣಿಜ್ಯ ಮಂಡಳಿ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಭಾ.ಮಾ. ಹರೀಶ್‌ ಹಾಗೂ ಸಾ. ರಾ. ಗೋವಿಂದು ನಡುವೆ ಪೈಪೋಟಿ ಏರ್ಪಟ್ಟಿತ್ತು. ಒಟ್ಟು 1,176 ಮತಗಳು ಚಲಾವಣೆಗೊಂಡಿದ್ದವು. 796 ನಿರ್ಮಾಪಕರು, 301 ವಿತರಕರು, 679 ಪ್ರದರ್ಶಕರು ಮತದಾನದಲ್ಲಿ ಪಾಲ್ಗೊಂಡಿದ್ದರು. ಭಾ. ಮಾ. ಹರೀಶ್‌ 781 ಮತಗಳನ್ನು ಪಡೆದುಕೊಂಡರೆ, ಗೋವಿಂದು 378 ಮತಗಳಿಗೆ ತೃಪ್ತರಾದರು.

ಇದನ್ನೂ ಓದಿ | BookMyShow : ಅತ್ಯಧಿಕ ಟಿಕೆಟ್‌ ಸೇಲ್‌ ಹೆಗ್ಗಳಿಕೆಗೆ ಪಾತ್ರವಾದ ಕೆಜಿಎಫ್‌-2

ಸಾ. ರಾ. ಗೋವಿಂದು ಅನೇಕ ದಶಕಗಳಿಂದಲೂ ಚಲನಚಿತ್ರ ಕ್ಷೇತ್ರದಲ್ಲಿ ಗುರುತಿಸಿಕೊಂಡವರು ಹಾಗೂ ಕನ್ನಡ ಪರ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದವರು. ಗೋಕಾಕ್‌ ಚಳವಳಿಯಂತಹ ಹೋರಾಟದಲ್ಲೂ ಮುನ್ನೆಲೆಯಲ್ಲಿದ್ದ ಗೋವಿಂದು, ಕೊರೊನಾ ಸಮಯದಲ್ಲಿ ಕಲಾವಿದರಿಗೆ ಸಾಕಷ್ಟು ಸಹಾಯ ಮಾಡಿರುವುದರಿಂದ ಸಾ. ರಾ. ಗೋವಿಂದು ಗೆಲ್ಲುವುದು ಸುಲಭ ಎಂಬ ಮಾತುಗಳು ವಾಣಿಜ್ಯ ಮಂಡಳಿ ವಲಯದಲ್ಲಿ ಕೇಳಿಬಂದಿದ್ದವು. ಆದರೆ ಭಾ. ಮಾ . ಹರೀಶ್‌ ತಂಡ ಇದೆಲ್ಲವನ್ನೂ ಸುಳ್ಳಾಗಿಸಿ ಗೆಲುವಿನ ನಗೆ ಬೀರಿದೆ.

ಉಪಾಧ್ಯಕ್ಷರಾಗಿ ನಿರ್ಮಾಪಕರ ವಲಯದಿಂದ ಜೈ ಜಗದೀಶ್‌, ವಿತರಕರ ವಲಯದಿಂದ ಶಿಲ್ಪಾ ಶ್ರೀನಿವಾಸ್‌ (ಶ್ರೀನಿವಾಸ್‌ ಎಸ್.ಸಿ.) ಆಯ್ಕೆಯಾದರು. ಗೌರವ ಕಾರ್ಯದರ್ಶಿಯಾಗಿ ನಿರ್ಮಾಪಕ ವಲಯದಿಂದ ಸುಂದರ್‌ ರಾಜ್‌, ವಿತರಕರ ವಲಯದಿಂದ ಕೆಸಿಎನ್‌ ಕುಮಾರ್‌, ಪ್ರದರ್ಶಕರ ವಲಯದಿಂದ ಎಲ್‌. ಸಿ. ಕುಶಾಲ್‌ ನೇಮಕವಾದರು.

ಮಂಡಳಿಯ ಮಾಜಿ ಅಧ್ಯಕ್ಷ ಥಾಮಸ್‌ ಡಿಸೋಜ ಚುನಾವಣಾಧಿಕಾರಿಯಾಗಿ ಮತದಾನ ಪ್ರಕ್ರಿಯೆ ನಡೆಸಿದ್ದರು. ಬ್ಯಾಲೆಟ್‌ ಪೇಪರ್‌ನಲ್ಲಿಯೇ ನಡೆದಿದ್ದ ಮತದಾನದಲ್ಲಿ ರಾಘವೇಂದ್ರ ರಾಜ್‌ಕುಮಾರ್‌, ಜಯಮಾಲ, ಲೀಲಾವತಿ ಸೇರಿದಂತೆ ಹಲವು ಹಿರಿಯ ಕಲಾವಿದರೂ ಪಾಲ್ಗೊಂಡಿದ್ದರು. ಈ ಹಿಂದಿನ ಬಾರಿ ಪ್ರದರ್ಶಕ ವಲಯಕ್ಕೆ ಮಂಡಳಿ ಅಧ್ಯಕ್ಷ ಸ್ಥಾನ ಮೀಸಲಿದ್ದರೆ, ಈ ಬಾರಿ ನಿರ್ಮಾಪಕರ ವಲಯಕ್ಕೆ ನಿಗದಿಯಾಗಿತ್ತು.

ಇದನ್ನೂ ಓದಿ | ಶಿರಸಿಯಲ್ಲಿ ಶಿವಣ್ಣ: 25 ವರ್ಷ ಬಳಿಕ ನಮ್ಮೂರ ಮಂದಾರ ಹೂವೇ ನೆನಪು

Exit mobile version