ರಾಮನಗರ: ಇಲ್ಲಿನ ಕೆ.ಜಿ. ಹೊಸಹಳ್ಳಿ ಗ್ರಾಮದಲ್ಲಿ ಅಶ್ವತ್ಥ್ (26) ಎಂಬ ಯುವಕನನ್ನು ಹಾಡಹಗಲೇ ಬರ್ಬರ ಹತ್ಯೆ (Murder Case) ಮಾಡಿದ ಪ್ರಕರಣಕ್ಕೆ ಪ್ರತೀಕಾರವಾಗಿ ಅಶ್ವತ್ಥ್‌ನ ಗೆಳೆಯರು ಆರೋಪಿಗಳ ಮನೆಯನ್ನೇ ಸುಟ್ಟು ಹಾಕಿದ್ದಾರೆ.
ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ಅಶ್ವಥ್ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಈ ಮದುವೆಗೆ ಹುಡುಗಿ ಮನೆಯವರ ಕಡೆಯಿಂದ ತೀವ್ರ ವಿರೋಧವಾಗಿತ್ತು. ಕುಟುಂಬಸ್ಥರನ್ನು ವಿರೋಧಿಸಿ ಇಬ್ಬರು ಮದುವೆ ಆಗಿದ್ದರು. ಇದನ್ನೇ ಮುಂದಿಟ್ಟುಕೊಂಡು ಹುಡುಗಿಯ ಸಂಬಂಧಿಕರು ದ್ವೇಷ ಸಾಧಿಸುತ್ತಿದ್ದರು. ಅವರೇ ಅಶ್ವತ್ಥ್‌ನನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿತ್ತು.
ಈ ಘಟನೆಯಿಂದ ಅಂದು ಮದುವೆಗೆ ಸಹಕಾರ ನೀಡಿದ್ದ ಅಶ್ವತ್ಥ್‌ನ ಗೆಳೆಯರು ಕೆರಳಿ ಕೆಂಡವಾಗಿದ್ದು, ತಾವೇ ಮುಂದಾಗಿ ಯುವತಿಯ ಸಂಬಂಧಿಕರೊಬ್ಬರ ಮನೆಯನ್ನು ಸುಟ್ಟು ಹಾಕಿದ್ದಾರೆ.
ಕೆ.ಜಿ ಹೊಸಳ್ಳಿ ಗ್ರಾಮದಲ್ಲಿರುವ ಯುವತಿಯ ದೊಡ್ಡಮ್ಮ ಮಹದೇವಮ್ಮ ಅವರು ಈ ಕೃತ್ಯದ ಹಿಂದಿದ್ದಾರೆ ಎಂದು ಹೇಳಲಾಗಿದ್ದು, ಅವರ ಯುವಕನ ಸ್ನೇಹಿತರು ಬೆಂಕಿ ಹಚ್ಚಿದ್ದಾರೆ.
ಕೊಲೆ ಪ್ರಕರಣ ಬಯಲಿಗೆ ಬರುತ್ತಿದ್ದಂತೆಯೇ ಮಹದೇವಮ್ಮ ಕುಟುಂಬಿಕರು ನಾಪತ್ತೆಯಾಗಿದ್ದರು. ಇದು ಅವರ ಮೇಲಿನ ಸಂಶಯವನ್ನು ಇನ್ನಷ್ಟು ಹೆಚ್ಚಿಸಿತ್ತು. ಯುವಕನ ಕೊಲೆಗೆ ಮಹದೇವಮ್ಮ ಕುಮ್ಮಕ್ಕು ನೀಡಿದ್ದಾರೆ ಎಂಬ ಅನುಮಾನದ ಮೇಲೆ ಮನೆಗೆ ಬೆಂಕಿ ಹಚ್ಚಲಾಗಿದೆ. ಆದರೆ, ಮನೆಯಲ್ಲಿ ಯಾರೂ ಇಲ್ಲದೆ ಇದ್ದುದರಿಂದ ಪ್ರಾಣಾಪಾಯ ಸಂಭವಿಸಿಲ್ಲ.
ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಘಟನೆ ಸಂಬಂಧ 6 ಜನ ಆರೋಪಿಗಳನ್ನು ರಾಮನಗರ ಗ್ರಾಮಾಂತರ ಪೋಲಿಸರು ಬಂಧಿಸಿದ್ದಾರೆ. ಗ್ರಾಮದಲ್ಲಿ 200ಕ್ಕೂ ಹೆಚ್ಚು ಪೋಲಿಸರ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಇದನ್ನೂ ಓದಿ : Wild Animals Attack: ರಾಮನಗರದಲ್ಲಿ ಜನರಿಗೆ ಉಪಟಳ ನೀಡುತ್ತಿದ್ದ ಕರಡಿ ಸೆರೆ; ನಿಟ್ಟುಸಿರು ಬಿಟ್ಟ ಗ್ರಾಮಸ್ಥರು