Site icon Vistara News

KGF Babu | ಕಾಂಗ್ರೆಸ್‌ಗೆ 80 ಸೀಟೂ ಸಿಗೋದಿಲ್ಲ ಎಂದ ಕೆಜಿಎಫ್‌ ಬಾಬು; ಕೈ ನಾಯಕರು, ಕಾರ್ಯಕರ್ತರ ಆಕ್ರೋಶ

KGF Babu

ಬೆಂಗಳೂರು: ರೌಡಿ, ಜಾತಿ ಆಧಾರಿತವಾಗಿ ಟಿಕೆಟ್ ಕೊಟ್ಟರೆ ಕಾಂಗ್ರೆಸ್‌ಗೆ 80 ಸ್ಥಾನ ಕೂಡ ಸಿಗುವುದಿಲ್ಲ. ಕಾಂಗ್ರೆಸ್‌ನಿಂದ ನನ್ನನ್ನು ತೆಗೆದರೆ ಪಕ್ಷಕ್ಕೆ 10ರಿಂದ 15 ಸೀಟ್‌ ಕೈ ತಪ್ಪುತ್ತದೆ ಎಂಬ ಕೆಜಿಎಫ್‌ ಬಾಬು (KGF Babu) ಹೇಳಿಕೆಗೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

ಕೆಪಿಸಿಸಿ ಕಚೇರಿಗೆ ಶುಕ್ರವಾರ ಕೆಜಿಎಫ್‌ ಬಾಬು ಆಗಮಿಸಿ, ಕಾಂಗ್ರೆಸ್‌ ಪಕ್ಷದಲ್ಲಿ ತಮಗೆ ಗೌರವ ಸಿಗುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಈ ವೇಳೆ ಕೆಲ ಕಾಂಗ್ರೆಸ್‌ ನಾಯಕರು ಹಾಗೂ ಕೆಜಿಎಫ್‌ ಬಾಬು ನಡುವೆ ಮಾತಿನ ಚಕಮಕಿ ನಡೆದಿದೆ.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿಕ್ಕಪೇಟೆ ಟಿಕೆಟ್‌ ಆಕಾಂಕ್ಷಿ ಕೆಜಿಎಫ್‌ ಬಾಬು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಪಕ್ಷಕ್ಕಾಗಿ ಹಗಲು ರಾತ್ರಿ ಕಷ್ಟ ಪಡುತ್ತಿದ್ದಾರೆ. ಅವರಿಗೆ ಸಹಕಾರ ನೀಡಬೇಕು, ಇದಕ್ಕಾಗಿ ಪಕ್ಷದಲ್ಲಿರುವವರ ಜವಾಬ್ದಾರಿ ಹೆಚ್ಚಾಗಬೇಕು. ಇಲ್ಲದಿದ್ದರೇ ನಾವು ಹೆಚ್ಚು ಸೀಟ್‌ ಗೆಲ್ಲಲು ಕಷ್ಟವಾಗುತ್ತದೆ ಎಂದು ಹೇಳಿದೆ. ಅದನ್ನು ಪೂರ್ಣ ಮಾಡುವಷ್ಟರಲ್ಲಿ ಕೆಲ ಕಾಂಗ್ರೆಸ್‌ ನಾಯಕರು ಜಗಳ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Karnataka Elections | ಮೀಸಲಾತಿ, ನಿಗಮ ಅಧ್ಯಕ್ಷರ ನೇಮಕಕ್ಕೆ ಮೀನಮೇಷ: ಬಿಜೆಪಿ ವಿರುದ್ಧ ಸಿಡಿದು ನಿಂತ್ರಾ ಕಾಡುಗೊಲ್ಲರು?

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಅವರಿಂದ ತಪ್ಪಾಗುತ್ತಿದೆ. ಪಕ್ಷಕ್ಕಾಗಿ ದುಡಿದು ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದೇನೆ. ನಮ್ಮ ಪಕ್ಷಕ್ಕೆ 150 ಸೀಟ್ ಬರಬೇಕು‌ ಎಂದು ಮೊದಲಿನಿಂದ ಹೇಳುತ್ತಿದ್ದೇನೆ. ಕೆಪಿಸಿಸಿಯಲ್ಲಿ ಕಾರ್ಯಕರ್ತರು,‌ ಮಹಿಳೆಯರು, ಯುವಕರು ಬಂದರೆ ಅವರಿಗೆ ಮರ್ಯಾದೆ ಇಲ್ಲ. ನನಗೂ ಇದೇ ರೀತಿ ಮಾಡಿದ್ದಾರೆ. ಕೆಪಿಸಿಸಿ ಕಚೇರಿಯೊಳಗೆ ನನ್ನನ್ನು ಬಿಡದಂತೆ ಪೊಲೀಸರಿಗೆ ಸಲೀಂ ಅಹ್ಮದ್ ಹೇಳಿದ್ದಾರೆ. ಹೀಗಾಗಿ ಪಕ್ಷಕ್ಕೆ ಬರುವವರನ್ನೆಲ್ಲ ಓಡಿಸಿದರೆ ಪಕ್ಷದ ಕಚೇರಿ‌ ಖಾಲಿ ಹೊಡೆಯುತ್ತದೆ, ಹೀಗಾಗಿ ಒಳ್ಳೇ ಇಂಚಾರ್ಜ್ ಬರಬೇಕು ಎಂದು ಸಲೀಂ ಅಹ್ಮದ್‌ರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನದಿಂದ ಬದಲಾಯಿಸಿ ಎಂದು ಹೇಳುವುದು ತಪ್ಪೇ ಎಂದು ಪ್ರಶ್ನಿಸಿದರು.

ನಮ್ಮ ಪಕ್ಷ ಓವರ್‌ ಕಾನ್ಫಿಡೆನ್ಸ್‌ನಿಂದ ಮುಂದೆ ಹೋಗುತ್ತಿದೆ. ಕೆಪಿಸಿಸಿಯ ಸಲೀಂ ಅಹ್ಮದ್ ಯಾರಿಗೂ ಗೌರವ ಕೊಡುವುದಿಲ್ಲ, ನ್ಯಾಯ ಒದಗಿಸುವುದಿಲ್ಲ. ಇದನ್ನು ಸರಿಪಡಿಸಬೇಕು ಎಂದು ಕೇಳಲು ಹೋಗಿದ್ದೆ, ಇದನ್ನು ಹೇಳೋ‌ ಮೊದಲೇ ಚಿಕ್ಕಪೇಟೆ ಕ್ಷೇತ್ರದ ಮಾಜಿ ಶಾಸಕ ಹಾಗೂ ಟಿಕೆಟ್‌ ಆಕಾಂಕ್ಷಿ ಆರ್‌.ವಿ.ದೇವರಾಜ್ ಶಿಷ್ಯ ಮನೋಹರ್ ಹಾಗೂ ಇನ್ನಿಬ್ಬರು ಗಲಾಟೆ ಮಾಡಿದ್ದಾರೆ. ಇವರು ಬೇಕಂತಲೇ ಜಗಳ ಮಾಡಿ, ನನ್ನ ಮಾನ ಮರ್ಯಾದೆ ತೆಗೆದಿದ್ದಾರೆ. ನನ್ನ ಪಕ್ಷಕ್ಕೆ ನಾನು ಬೇಡವಾದರೆ ನಾನೇ ಪಕ್ಷ ಬಿಡುತ್ತೇನೆ ಎಂದು ಹೇಳಿದರು.

ಆರ್.ವಿ.ದೇವರಾಜ್ ಪ್ಲ್ಯಾನ್ ಮಾಡಿ ಇದನ್ನೆಲ್ಲ ಮಾಡಿಸುತ್ತಿದ್ದಾರೆ. ಸಿಸಿಬಿ, ಇಡಿ ರೈಡ್ ಮಾಡಿಸಿದ್ದರು. ರೌಡಿಗಳನ್ನು ನನ್ನ ಹಿಂದೆ ಬಿಟ್ಟಿದ್ದರು. ಈಗ ಅವರ ಆಸೆ ಈಡೇರುತ್ತಿದೆ ಎಂದು ಕಿಡಿಕಾರಿದ ಅವರು, ಮತ್ತೊಮ್ಮೆ ಧೈರ್ಯವಾಗಿ ಹೇಳುತ್ತೇನೆ. ಸಮೀಕ್ಷೆ ಆಧರಿಸಿ ಗೆಲ್ಲುವವರಿಗೆ ಟಿಕೆಟ್‌ ಕೊಟ್ಟರೆ ಮಾತ್ರ ಕಾಂಗ್ರೆಸ್‌ಗೆ 140 ಸೀಟ್‌ ಬರುತ್ತದೆ. ಇಲ್ಲವೆಂದರೆ 80 ಸ್ಥಾನ ಕೂಡ ಬರುವುದಿಲ್ಲ. ಬೇಕಾದರೆ ನನ್ನನ್ನು ಪಾರ್ಟಿಯಿಂದ ಕಿತ್ತು ಹಾಕಲಿ, ನೋವಿನಿಂದ ಪಕ್ಷ ಬಿಡುತ್ತೇನೆ. ಆರ್.ವಿ.ದೇವರಾಜ್‌ಗೆ 7 ಬಾರಿ ಟಿಕೆಟ್‌ ಕೊಟ್ಟಿದ್ದಾರೆ. ಅವರಿಗೆ ಮತ್ತೆ ಟಿಕೆಟ್ ಬೇಕು ಎಂದು ಈ ರೀತಿ ಮಾಡಿಸಿದ್ದಾರೆ. ನಾನು ಪಾರ್ಟಿ ವಿರುದ್ಧ ಮಾತಾಡಿದರೆ ನನಗೆ ಶಿಕ್ಷೆಯಾಗಲಿ, ನನ್ನ ತಪ್ಪಿದ್ದರೆ ಕ್ಷಮೆ ಕೇಳುತ್ತೇನೆ. ಆದರೆ ಗೌರವದಿಂದ ನನ್ನನ್ನು ಪಕ್ಷದಿಂದ ತೆಗೆಯಬೇಕು. ಸರಿಯಾಗಿ ನಡೆಸಿಕೊಳ್ಳದಿದ್ದರೆ ನಾನೇನು ಎಂಬುದನ್ನು ತೋರಿಸುತ್ತೇನೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ನಾನು ರಾಜಕಾರಣಿ ಅಲ್ಲ, ವ್ಯಾಪಾರಿ. ನಾನು ಸತ್ಯವನ್ನೇ ಹೇಳುತ್ತೇನೆ. ಹಿಂದೊಂದು ಮುಂದೊಂದು ಮಾತನಾಡಲ್ಲ, ನಾನು ನಾಟಕ ಮಾಡಲ್ಲ. ನನ್ನಂತಹ ನೇರ ಮಾತಿನವನಿಗೆ ಪಕ್ಷ ಗೌರವ ಕೊಡಬೇಕು. ಪಾರ್ಟಿಯಿಂದಾಗಿ ನಾನು ಬದುಕುತ್ತಿಲ್ಲ. ನಮ್ಮಂತಹವರಿಂದ ಪಾರ್ಟಿ ಇರುವುದು. ಸಲೀಂ ಅಹ್ಮದ್‌ನ ನೋಡಿ ಯಾರೂ ಮತ ಹಾಕಲ್ಲ. ಜಮೀರ್, ಯು.ಟಿ. ಖಾದರ್ ನಿಜವಾದ ಅಲ್ಪಸಂಖ್ಯಾತ ಸಮುದಾಯದ ನಾಯಕರು. ಸಲೀಂ ಅಹ್ಮದ್ ನಮ್ಮ ಮುಸ್ಲಿಂ ಅಲ್ಲ. ಅವಮಾನ ಮಾಡಿ ಪಕ್ಷದಿಂದ ತೆಗೆದರೆ ಕಾಂಗ್ರೆಸ್‌ಗೆ 10 ಸೀಟ್ ನಷ್ಟ ಮಾಡುತ್ತೇನೆ ಎಂದು ಹೇಳಿದರು.

ಸಿಎಂ ಇಬ್ರಾಹಿಂ ನಮ್ಮ ಮನೆಗೆ ಬರುವವರೆಗೂ ನನ್ನ ಶಕ್ತಿ ನನಗೆ ಗೊತ್ತಿರಲಿಲ್ಲ. ಕಾಂಗ್ರೆಸ್ ಮೈನಾರಿಟಿ ಜನರನ್ನು ಉಪಯೋಗಿಸಿಕೊಳ್ಳುತ್ತಾರೆ. ಅವರಿಗೆ ಮತಗಳು ಮಾತ್ರ ಬೇಕು, ಮತ ಸಿಕ್ಕ ನಂತರ ಯಾರೂ ತಿರುಗಿಯೂ ನೋಡುವುದಿಲ್ಲ. ಅದಕ್ಕಾಗಿ ನಾನು ನಾನು ಪಕ್ಷದಿಂದ ಹೊರಬಂದೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದರು. ಅವರು ಈಗಲೂ ಜೆಡಿಎಸ್‌ಗೆ ಆಹ್ವಾನ ನೀಡುತ್ತಿದ್ದಾರೆ. ನಾನು ಪಕ್ಷಕ್ಕೆ ದ್ರೋಹ ಮಾಡಲು ಇಷ್ಟವಿಲ್ಲದೆ ಬರುವುದಿಲ್ಲ ಎಂದು ಹೇಳಿದ್ದೇನೆ ಎಂದರು.

ನನಗೂ ಮತ್ತು ಡಿಕೆಶಿ ಸಾಹೇಬರಿಗೆ ಒಪ್ಪಂದ ಇದೆ. ವ್ಯಾಪಾರದಲ್ಲಿ ನಾವು ಸಂಗಡಿಗರು, ಆದರೆ, ರಾಜಕೀಯದಲ್ಲಿ ಒಪ್ಪಂದ ಮಾಡಿಕೊಂಡಿಲ್ಲ. ಡಿಕೆಶಿ ನನ್ನ ಬ್ಯುಸಿನೆಸ್ ಗುರು. ಆದರೆ, ರಾಜಕೀಯಕ್ಕೆ ನನಗೆ ನಾನೇ ಗುರು. ಡಿಕೆಶಿ‌ ಹಾಕುವ ಭಿಕ್ಷೆ ತಿನ್ನುತ್ತಿದ್ದೇನೆ. ನಾನು ಶಾಸಕನಾಗಲೇಬೇಕು, ಇದೇ ನನ್ನ ಆಸೆ. ಸೊನ್ನೆಯಿಂದ 1700‌ ಕೋಟಿ ರೂಪಾಯಿ ಗಳಿಸಿದ್ದೇನೆ. ನಾನು ದುಡ್ಡಿನ ಅಹಂನಲ್ಲಿ ಮಾತನಾಡುತ್ತಿಲ್ಲ, ನನ್ನಂತಹವನು ಹುಡುಕಿದರೂ ಇಡೀ ಇಂಡಿಯಾದಲ್ಲೇ ಸಿಗುವುದಿಲ್ಲ ಎಂದು ಹೇಳಿದರು.

ನಾನು ವೈಟ್‌ ಮನಿಯಲ್ಲೇ 350 ಕೋಟಿ ಖರ್ಚು ಮಾಡುತ್ತಿದ್ದೇನೆ ಎಂದು ಚಿಟಿಕೆ ಹೊಡೆದು ಆರ್‌.ವಿ. ದೇವರಾಜ್‌ಗೆ ಎಚ್ಚರಿಕೆ ಕೊಟ್ಟ ಕೆಜಿಎಫ್ ಬಾಬು, ಆತ 24 ಗಂಟೆ ಎಣ್ಣೆಯಲ್ಲೇ ಇರ್ತಾರೆ. ಅವರಿಗೆ ಪಾಠ ಕಲಿಸುತ್ತೇನೆ. ಡೆಪಾಸಿಟ್ ಕಳೆದುಕೊಳ್ಳುವಂತೆ ಮಾಡುತ್ತೇನೆ. ನನ್ನ ತಾಯಿ ಕೊನೆಯ ಆಸೆಯಂತೆ ಚಿಕ್ಕಪೇಟೆಯಲ್ಲಿ ಬಡವರಿಗೆ ಮನೆಗಳನ್ನು ಕಟ್ಚಬೇಕು ಎಂಬ ಆಸೆ ಇತ್ತು. ಆದರೆ ಇದಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಕಾಂಗ್ರೆಸ್ ಪಾರ್ಟಿಗೆ ರಾಹುಕಾಲ ಶುರುವಾಗಿದೆ. ಆದರೆ, ನನಗೆ ಒಳ್ಳೆಯ ಕಾಲವೇ ಇದೆ ಎಂದು ಕಿಡಿಕಾರಿದ್ದಾರೆ.

ಕೆಜಿಎಫ್ ಬಾಬು ವಜಾಗೊಳಿಸುವಂತೆ ಪತ್ರ
ಕಾಂಗ್ರೆಸ್‌ ಕಚೇರಿಗೆ ಬಂದು ಪಕ್ಷಕ್ಕೆ ಚ್ಯುತಿ ಬರುವಂತೆ ವರ್ತಿಸಿದ್ದಾರೆ. ಹಾಗಾಗಿ ಕೆಜಿಎಫ್‌ ಬಾಬು ಅವರನ್ನು ಕೂಡಲೇ ಕಾಂಗ್ರೆಸ್‌ ಪಕ್ಷದಿಂದ ವಜಾಗೊಳಿಸಬೇಕು ಎಂದು ಎಸ್. ಮನೋಹರ್‌ ಹಾಗೂ ಕಾಂಗ್ರೆಸ್ ಕಾರ್ಯಕರ್ತರು,
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ | Karnataka Election : ಈ ಸಂಕ್ರಾಂತಿ ನಂತರ ಜೆಡಿಎಸ್‌ ಮೇಲೆ ಆಪರೇಷನ್‌ ಕಾಂಗ್ರೆಸ್‌; ಯಾರು ಎಂದೂ ಗೊತ್ತು: ಎಚ್‌ಡಿಕೆ

Exit mobile version