Site icon Vistara News

KGF Babu: ವಿರೋಧಿಗಳು ಕೊಡುತ್ತಿರುವ ತೊಂದರೆಯಿಂದ ಇ.ಡಿ. ಅಧಿಕಾರಿಗಳು ಪದೇ ಪದೆ ಕರೆಯುತ್ತಿದ್ದಾರೆ: ಕೆಜಿಎಫ್‌ ಬಾಬು ಬೇಸರ

KGF Babu

KGF Babu gives notice Mosques

‌ನವ ದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದರಿಂದ ನವ ದೆಹಲಿಗೆ ಬಂದಿರುವ ಕೆಜಿಎಫ್‌ ಬಾಬು (KGF Babu) ತೀವ್ರ ಅಸಮಾಧಾನಗೊಂಡಿದ್ದು, ನನ್ನ ವಿರೋಧಿಗಳು ಕೊಡುತ್ತಿರುವ ತೊಂದರೆಯಿಂದ ಇ.ಡಿ. ಅಧಿಕಾರಿಗಳು ಪದೇ ಪದೇ ಕರೆಯುತ್ತಿದ್ದಾರೆ ಎಂದು ಅಲವತ್ತುಕೊಂಡಿದ್ದಾರೆ.‌

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಮುಖಂಡ ಆರ್.ವಿ.ದೇವರಾಜ್ ಬಗ್ಗೆ ನಾನು ಮಾತನಾಡುವುದಿಲ್ಲ. ವಿರೋಧಿಗಳು ಯಾರು ಯಾರು ಎಂದು ನಿಮಗೇ ಗೊತ್ತಿದೆ. ನಾನು ಅಕ್ರಮವಾಗಿ ಹಣ ಸಂಪಾದನೆ ಮಾಡಿಲ್ಲ. ಎಲ್ಲ ವಿವರಗಳನ್ನೂ ಇ.ಡಿ.ಗೆ ಕೊಟ್ಟಿದ್ದೇನೆ ಎಂದು ತಿಳಿಸಿದರು.

ಇ.ಡಿ.ಯವರ ಬಳಿ ಇರುವ ನನ್ನ 4 ಕೆ.ಜಿ. ಚಿನ್ನ, ಡೈಮಂಡ್ ಅನ್ನು ಬಿಡಿಸಿಕೊಳ್ಳಲು ಅರ್ಜಿ ಹಾಕಿದ್ದೇನೆ. ಆದರೂ ನನ್ನನ್ನು ಕರೆಯುತ್ತಿದ್ದಾರೆ. ಚಿಕ್ಕಪೇಟೆ ಜನರಿಗೆ 350 ಕೋಟಿ ರೂಪಾಯಿ ಕೊಡುತ್ತೇನೆ. ಮನೆ ಕಟ್ಟಿಸಿಕೊಡುತ್ತೇನೆ ಎಂದು ಹೇಳಿಕೆ ನೀಡಿದಾಗಿನಿಂದ ಹೀಗೆ ತೊಂದರೆ ಎದುರಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

೨೦೨೨ರಿಂದ ಇ.ಡಿ. ಸಂಕಟ
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಜಿಎಫ್‌ ಬಾಬು ನಿವಾಸ ಹಾಗೂ ಕಚೇರಿಗಳ ಮೇಲೆ 2022ರ ಮೇ ತಿಂಗಳಿನಲ್ಲಿ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದರು. ಒಟ್ಟು ೭ ಕಡೆ ದಾಳಿ ನಡೆಸಿದ್ದ ಇ.ಡಿ., ಸಾಕಷ್ಟು ದಾಖಲೆಗಳನ್ನು ಪರಿಶೀಲನೆ ನಡೆಸಿತ್ತು. ವಸಂತನಗರದಲ್ಲಿ ಕೆಜಿಎಫ್‌ ಬಾಬು ಹೊಂದಿರುವ ನಿವಾಸ ರುಕ್ಸಾನಾ ಪ್ಯಾಲೇಸ್‌ ಸೇರಿದಂತೆ ಉಮ್ರಾ ಡೆವಲಪರ್ಸ್‌ ಮತ್ತು ಉಮ್ರಾ ರಿಯಲ್‌ ಎಸ್ಟೇಟ್‌ ಕಂಪನಿ ಕಚೇರಿಗಳಲ್ಲಿ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿತ್ತು. ಈ ವೇಳೆ ಬಾಬು ಹಾಗೂ ಅವರ ಪತ್ನಿಯರ, ಮಕ್ಕಳ ಬ್ಯಾಂಕ್‌ ಖಾತೆಗಳನ್ನು, ಆಸ್ತಿ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.

ಚಾಮರಾಜಪೇಟೆ ಶಾಸಕ ಜಮೀರ್​ ಅಹಮದ್​ ಖಾನ್​ಗೆ ಮನೆ ಹಾಗೂ ಕಚೇರಿ ಮೇಲೆ ಇ.ಡಿ. ದಾಳಿ ನಡೆದಿದ್ದ ವೇಳೆ ಕೆಜಿಎಫ್‌ ಬಾಬು ಹೆಸರು ಪ್ರಸ್ತಾಪವಾಗಿತ್ತು. ಬಾಬು ಅವರಿಂದ ೩ ಕೋಟಿ ರೂಪಾಯಿ ಸಾಲ ಪಡೆದಿದ್ದಾಗಿ ಜಮೀರ್‌ ಹೇಳಿಕೆ ನೀಡಿದ್ದರು. ಇದು ಕೆಜಿಎಫ್‌ ಬಾಬುಗೆ ತೀವ್ರ ಸಂಕಷ್ಟವನ್ನು ತಂದೊಡ್ಡಿದೆ ಎನ್ನಲಾಗಿದೆ.

ಇದನ್ನೂ ಓದಿ | Modi In Karnataka | ಅನ್ಯ ಸರ್ಕಾರಗಳಿಗೆ ವೋಟ್‌ ಬ್ಯಾಂಕ್‌ ಆದ್ಯತೆ; ನಮಗೆ ಅಭಿವೃದ್ಧಿಯೇ ಆದ್ಯತೆ: ಪ್ರಧಾನಿ ಮೋದಿ

Exit mobile version