ನವ ದೆಹಲಿ/ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಅವರ ಮಾಲೀಕತ್ವದ ನ್ಯಾಷನಲ್ ಎಜುಕೇಶನ್ ಫೌಂಡೇಷನ್‌ನ ಕಚೇರಿಗಳಿಗೆ ಸೋಮವಾರ ನಡೆದ ಸಿಬಿಐ ದಾಳಿಯನ್ನು ಕಾಂಗ್ರೆಸ್ ಖಂಡಿಸಿದೆ.
ಕಾಂಗ್ರೆಸ್ ನಾಯಕರನ್ನು ಮಟ್ಟ ಹಾಕಲು ಬಿಜೆಪಿ ಐಟಿ, ಇ.ಡಿ., ಸಿಬಿಐಯಂಥ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆರೋಪಿಸಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ನ್ಯಾಷನಲ್ ಎಜುಕೇಶನ್ ಫೌಂಡೇಶನ್ ಪ್ರಧಾನ ಕಚೇರಿ ಮತ್ತು ಇತರ ಕಚೇರಿಗಳಿಗೆ ಸಿಬಿಐ ಅಧಿಕಾರಿಗಳು ಸೋಮವಾರ ಬೆಳಗ್ಗೆ ದಾಳಿ ನಡೆಸಿದ್ದರು. ಡಿ.ಕೆ.ಶಿ ಪುತ್ರಿ ಸೌಂದರ್ಯ ಅವರು ಫೌಂಡೇಷನ್‌ನ ಕಾರ್ಯದರ್ಶಿಯಾಗಿದ್ದಾರೆ. ಡಿಕೆಶಿ ಅವರು ಬೆಳಗಾವಿ ಅಧಿವೇಶನದಲ್ಲಿರುವ ಸಂದರ್ಭದಲ್ಲೇ ದಾಳಿ ನಡೆದಿರುವುದು ಕುತೂಹಲ ಕೆರಳಿಸಿದೆ.
ಈ ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು, ʻʻಬಿಜೆಪಿಯವರು ಐಟಿ, ಇ.ಡಿ., ಸಿಬಿಐ ಮೊದಲಾದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅದೆಷ್ಟೋ ಜನರನ್ನು ಈ ಇಲಾಖೆಗಳ ಮೂಲಕ ಹೆದರಿಸಿ ಬೆದರಿಸಿ ಜೀವ ಹಿಂಡುತ್ತಿದ್ದಾರೆ. ಕಾಂಗ್ರೆಸ್ ನವರನ್ನು ಇದರಲ್ಲಿ ಸಿಕ್ಕಿಹಾಕಿಸಲು ಬಿಜೆಪಿ ಸಾಕಷ್ಟು ಕಟ್ಟಪಟ್ಟಿದೆʼʼ ಎಂದು ಹೇಳಿದರು. ʻʻನಾವು ಇಂಥ ತಂತ್ರಗಳಿಗೆ ಹೆದರುತ್ತೇವೆ ಎಂದು ಬಿಜೆಪಿಯವರು ತಿಳಿದುಕೊಂಡಿದ್ದಾರೆ. ಆದರೆ ನಾವು ಯಾವುದೇ ಕಾರಣಕ್ಕೂ ಬಿಜೆಪಿಯವರಿಗೆ ಹೆದರುವುದಿಲ್ಲʼʼ ಎಂದು ಅವರು ಸ್ಪಷ್ಪಪಡಿಸಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಕೆಂಡ ಕಾರಿದ ಅವರು, ʻʻಮೋದಿ ಮತ್ತು ಬಿಜೆಪಿಯವರಿಗೆ ರೈತರ ಮೇಲೆ ಪ್ರೀತಿ ಇಲ್ಲ. ಅವರಿಗೆ ಯುವಜನತೆ ಮೇಲೆ ವಿಶ್ವಾಸ ಇಲ್ಲ. ಇನ್ನು ಕೂಡ ದೇಶದಲ್ಲಿ ನಿರುದ್ಯೋಗ ತಾಂಡವ ಆಡುತ್ತಿದೆ. ಇದರ ಬಗ್ಗೆ ಗಮನವಿಲ್ಲʼʼ ಎಂದರು.
ಸಲೀಂ ಅಹಮದ್ ಆಕ್ರೋಶ
ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅವರು, ಡಿ.ಕೆ ಶಿವಕುಮಾರ್ ಅವರ ಶಿಕ್ಷಣ ಸಂಸ್ಥೆ ಗಳ ಮೇಲೆ ಸಿಬಿಐ ದಾಳಿ ಮಾಡುವ ಮೂಲಕ ಬಿಜೆಪಿ ನಿರಂತರವಾಗಿ ತನಿಖಾ ಸಂಸ್ಥೆ ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ಮತ್ತೆ ಪ್ರೂವ್ ಮಾಡಿದೆ ಎಂದರು.
ʻʻನಾವು ಇಲ್ಲಿ ಅಧಿವೇಶನದಲ್ಲಿ ಬಾಗವಹಿಸಲು ಬಂದಿದ್ದೇವೆ. ಇಂತಾ ಸಂಧರ್ಭದಲ್ಲಿ ಈ ದಾಳಿ ಆಗಿದೆ. ಬಿಜೆಪಿಯ ಯಾವುದೇ ಮುಖಂಡರ ಮೇಲೆ ಇಂತಹ ದಾಳಿಗಳಾಗಿಲ್ಲ. ಹಾಗಿರುವಾಗ ಇದೊಂದು ರಾಜಕೀಯ ಷಡ್ಯಂತ್ರ ಎಂದೇ ಹೇಳಬೇಕಾಗುತ್ತದೆʼʼ ಎಂದು ಹೇಳಿದರು ಸಲೀಂ ಅಹಮದ್.
ರಾಜಕೀಯಪ್ರೇರಿತ ಅಲ್ಲ ಎಂದ ಆರಗ ಜ್ಞಾನೇಂದ್ರ
ಡಿ.ಕೆ. ಶಿವಕುಮಾರ್ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ನಡೆದಿರುವ ದಾಳಿ ರಾಜಕೀಯಪ್ರೇರಿತ ಅಲ್ಲ ಎಂದು ಗೃಹ ಸಚಿವ ಆರಗಜ್ಞಾನೇಂದ್ರ ಹೇಳಿದ್ದಾರೆ. ಸಿಬಿಐ ಮೊದಲಾದ ತನಿಖಾ ಸಂಸ್ಥೆಗಳು ಸ್ವತಂತ್ರವಾಗಿ ತನಿಖೆ ನಡೆಸುತ್ತಿದ್ದು, ಅವುಗಳ ಅಗತ್ಯಕ್ಕೆ ತಕ್ಕಂತೆ ದಾಳಿ ನಡೆದಿರಬಹುದು ಎಂದರು.
ಇದನ್ನೂ ಓದಿ | DK Shivakumar | ಡಿಕೆಶಿ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ: ಶಿವಕುಮಾರ್ ಹೇಳಿದ್ದೇನು?