ಬೆಂಗಳೂರು: ಸ್ಯಾಂಡಲ್‌ವುಡ್ ಬಾದ್ ಶಾ, ಕಿಚ್ಚ ಸುದೀಪ್ (Kichcha Sudeep) ಹಾಗೂ ನಿರ್ಮಾಪಕ ಎಂ.ಎನ್. ಕುಮಾರ್ (Film Producer MN Kumar) ನಡುವಿನ ಜಟಾಪಟಿ ಮುಂದುವರಿದಿದ್ದು, ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಅಲ್ಲದೆ, ಈ ನಡುವೆ ಧರಣಿಗೆ ಕುಳಿತಿರುವ ಕುಮಾರ್ ಬೆನ್ನಿಗೆ ಹಲವು ನಿರ್ಮಾಪಕರು ಕುಳಿತಿದ್ದಾರೆ. ಇವರಿಗೆ ಸಾರಾ ಗೋವಿಂದ್ (Sara Govind) ಸೇರಿದಂತೆ 20 ನಿರ್ಮಾಪಕರು ಬೆಂಬಲ ಸೂಚಿಸಿದ್ದಾರೆ. ಈ ನಡುವೆ ಸಾರಾ ಗೋವಿಂದ್ ಮಾತನಾಡಿ, ಕೇಳಿದ ತಕ್ಷಣ ಹಣ ಕೋಡೋಕೆ ಸುದೀಪ್ ಏನು ಚಿಕ್ಕ ಹುಡುಗ ಅಲ್ಲ ಎಂದು ಹೇಳಿದ್ದಾರೆ.
ಫಿಲ್ಮ್ ಛೇಂಬರ್ ಮುಂದೆ ಪ್ರತಿಭಟನೆಗೆ ಕುಳಿತಿರುವ ನಿರ್ಮಾಪಕ ಎಂ.ಎನ್. ಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಸಾರ ಗೋವಿಂದ್, ಒಂದೂವರೆ ತಿಂಗಳಿಂದ ನಾನು ಈ ವಿದ್ಯಮಾನವನ್ನು ಗಮನಿಸುತ್ತಾ ಬಂದಿದ್ದೇನೆ. ಆರೋಗ್ಯ ಸಮಸ್ಯೆಯಿಂದ ಬರಲು ಸಾಧ್ಯವಾಗಿರಲಿಲ್ಲ. ಚಿತ್ರರಂಗ (Film Industry) ನಮ್ಮ ಕುಟುಂಬ ಇದ್ದಂತೆ. ಈ ಸಮಸ್ಯೆ ಬಗೆಹರಿಸಲು ಸಹಕರಿಸುವಂತೆ ಸುದೀಪ್ ಅವರಿಗೆ ನಾನು ಮನವಿ ಮಾಡುತ್ತೇನೆ ಎಂದು ಹೇಳಿದರು.
ನಾನು ಸಾವಿರಾರು ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. “ರನ್ನ” ಸಿನಿಮಾದ (Ranna Movie) ಹಣ ವಿಚಾರವಾಗಿ ನಾನು ಇಬ್ಬರನ್ನೂ ಕರೆಸಿ ಮಾತನಾಡಿದ್ದೆ. ಸುದೀಪ್ ಅವರು ಫೋನ್ ಕರೆ ಮೂಲಕ ಮಾತನಾಡಿದ್ದರು. ಎರಡು ಕೋಟಿ ಮೂವತೈದು ಲಕ್ಷ ರೂಪಾಯಿ ಕೊಟ್ಟಿದ್ದಕ್ಕೆ ನಾನೇ ಸಾಕ್ಷಿ. ಇಂತಹ ಸಮಸ್ಯೆಗಳ ಬಂದಾಗ ಸಂಧಾನ ಸಮಿತಿಯನ್ನು ನೋಡಬೇಕು. ದೊಡ್ಡಣ್ಣ, ಕೆ.ವಿ. ಚಂದ್ರಶೇಖರ್, ರಮೇಶ್ ಯಾದವ್, ಮುನಿರತ್ನ ಎಲ್ಲರೂ ಇದ್ದಾರೆ. ಕುಮಾರ್ ಸಂಧಾನ ಸಮಿತಿಗೆ ಹಣ ಕೊಡಿಸಿ ಅಂತ ಪತ್ರ ಬರೆದಿದ್ದಾರೆ. ಕೇಳಿದ ತಕ್ಷಣ ಹಣ ಕೊಡಲು ಸುದೀಪ್ ಚಿಕ್ಕ ಹುಡುಗ ಅಲ್ಲ ಎಂದು ಸಾರಾ ಗೋವಿಂದ್ ಹೇಳಿದರು.
ಇದನ್ನೂ ಓದಿ: Salaar Movie : ಅಮೆರಿಕದಲ್ಲಿ ದಾಖಲೆ ಬರೆಯಲಿದೆ ಪ್ರಭಾಸ್‌ನ ಸಲಾರ್; ಶುರುವಾಗಿದೆ 1979 ಲೆಕ್ಕಾಚಾರ!
ಕೋರ್ಟ್ ಬೇಡ ಇಲ್ಲೇ ಬಗೆಹರಿಸಿಕೊಳ್ಳಿ; ಸುದೀಪ್‌ಗೆ ಸಲಹೆ
ಕುಮಾರ್ ಹೇಳಿದ ತಕ್ಷಣ ನಾನು ಹಣ ಕೊಡಿಸಲು ಸಾಧ್ಯವಿಲ್ಲ. ಇಂದಿಗೂ ಕಾಲ ಮಿಂಚಿಲ್ಲ. ನೀವೂ ನಮ್ಮ ಹೆಮ್ಮೆ, ಈ ಸಮಸ್ಯೆಯನ್ನು ನೀವೇ ಬಗೆಹರಿಸಿದರೆ ಇನ್ನೂ ಒಳ್ಳೆಯದು. ಕುಮಾರ್ ವಿರುದ್ಧ ಹತ್ತು ಕೋಟಿ ರೂ. ಮಾನನಷ್ಟ ಮೊಕದ್ದಮೆಯನ್ನು ಹೂಡಿದರೆ ಹೇಗೆ? ತೆಲುಗು ನಟ ಪ್ರಕಾಶ್ ರಾಜ್ (Actor Prakash Raj) ಮಾಡಿದ ತಪ್ಪನ್ನು ನೀವೇನು ಮಾಡಿಲ್ಲ. ನೀವೂ ಇಡೀ ರಾಷ್ಟ್ರವೇ ಮೆಚ್ಚುವ ನಟರಾಗಿದ್ದೀರಿ. ಸುದೀಪ್ ಅವರೇ ಐದು ಕೋಟಿ ಹಣವನ್ನು ಕೊಡುತ್ತೇನೆ ಎಂದು ಹೇಳಿದ್ದೀರಿ. ಕೊಡುವುದಿದ್ದರೆ ಕೊಡಿ, ಇಲ್ಲವಾದರೆ ಬೇಡ. ಕುಮಾರ್ ಅವರ ಬಳಿ ನಿಮಗೆ ಹಣ ಕೊಟ್ಟಿರುವ ಬಗ್ಗೆ ದಾಖಲೆಗಳಿವೆ ಅಂತೆ. ಕೋರ್ಟ್‌ಗಿಂತ ಈ ಪ್ರಕರಣವನ್ನು ಇಲ್ಲಿಯೇ ಬಗೆಹರಿಸಿಕೊಳ್ಳಿ ಎಂದು ಸುದೀಪ್‌ಗೆ ಸಾರಾ ಗೋವಿಂದ್ ಸಲಹೆ ನೀಡಿದರು.