ಬೆಂಗಳೂರು: ಹಣಕಾಸಿನ ವಿಚಾರದಲ್ಲಿ ಶುರುವಾದ ಮನಸ್ತಾಪ ಕಿಡ್ನ್ಯಾಪ್‌ವರೆಗೂ (Kidnap Case) ಹೋಗಿ ರೌಡಿಶೀಟರ್ ಸೇರಿದಂತೆ ಮೂವರು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರ ಅತಿಥಿಗಳಾಗಿದ್ದಾರೆ. ಅರುಣ್ ಅಲಿಯಾಸ್ ಸುನಾಮಿ, ಕಿರಣ್ ಕುಮಾರ್, ಸೋಮಶೇಖರ್ ಬಂಧಿತ ಆರೋಪಿಗಳಾಗಿದ್ದಾರೆ.
ಸಂದೀಪ್ ಕುಮಾರ್ ಎಂಬಾತ ಕಿರಣ್‌ಗೆ ಹಣ ನೀಡಬೇಕಿತ್ತು. ಆದರೆ ಹಣ ನೀಡದೇ ಸತಾಯಿಸುತ್ತಿದ್ದ. ಹೀಗಾಗಿ ಕಿರಣ್ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದ ಅರುಣ್ ಜತೆಗೆ ಸೇರಿಕೊಂಡು ಕಿಡ್ನ್ಯಾಪ್ ಮಾಡುವ ಪ್ಲ್ಯಾನ್ ಮಾಡಿದ್ದ. ಇದಕ್ಕೆ ಸೋಮಶೇಖರ್ ಸಾಥ್ ನೀಡಿದ್ದ.
ಕಳೆದ ಆಗಸ್ಟ್ 31ರ ಬೆಳಗಿನ ಜಾವ 2:30ರ ವೇಳೆಗೆ ಸಂದೀಪ್ ಮನೆ ಬಳಿ ಬಂದ ಕಿರಣ್, ಫೋನ್ ಮಾಡಿ ಮಾತಾನಾಡಬೇಕು ಹೊರಗೆ ಬಾ ಎಂದು ಕರೆಸಿಕೊಂಡಿದ್ದ. ಹೊರಗೆ ಬಂದವನನ್ನು ಮೂವರು ಸೇರಿ ಕಿಡ್ನ್ಯಾಪ್ ಮಾಡಿದ್ದರು. ತಮಿಳುನಾಡಿನ ಡೆಂಕಣಿಕೋಣೆ ಫಾರಂ ಹೌಸ್‌ನಲ್ಲಿ ಕೂಡಾಕಿ 50 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದೆ ಹೋದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಕಿಡ್ನ್ಯಾಪರ್ಸ್‌ನಿಂದ ತಪ್ಪಿಸಿಕೊಂಡ ಸಂದೀಪ್
ಆರೋಪಿಗಳು ಫಾರಂ ಹೌಸ್‌ನಿಂದ ಮರುದಿನ ಮತ್ತೊಂದು ಜಾಗಕ್ಕೆ ಶಿಫ್ಟ್ ಮಾಡುವ ಪ್ಲ್ಯಾನ್‌ನಲ್ಲಿದ್ದರು. ಈ ವೇಳೆ ಕಿಡ್ನ್ಯಾರ್ಪ್‌ನಿಂದ ಅದ್ಹೇಗೋ ಸಂದೀಪ್ ತಪ್ಪಿಸಿಕೊಂಡಿದ್ದ. ಬಳಿಕ ತಮಿಳುನಾಡಿನ ಪೊಲೀಸರ ಸಹಾಯ ಪಡೆದು ಬೆಂಗಳೂರಿಗೆ ಮರಳಿದ್ದ. ಸಂದೀಪ್ ದೂರಿನ ಮೇರೆಗೆ ನಾಲ್ವರು ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಸಿ.ಕೆ.ಅಚ್ಚುಕಟ್ಟು ಪೊಲೀಸರು ತನಿಖೆ ನಡೆಸಿ ಅರುಣ್, ಕಿರಣ್ ಹಾಗೂ ಸೋಮಶೇಖರ್‌ನನ್ನು ಬಂಧಿಸಿದ್ದಾರೆ. ಜತೆಗೆ ಅಪಹರಣಕ್ಕೆ ಬಳಸಿದ್ದ ಇನೋವಾ ಕಾರನ್ನು ವಶಪಡಿಸಿಕೊಂಡಿದ್ದಾರೆ. ಮತ್ತೊಂದೆಡೆ ಇದೇ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿಗಾಗಿ ಪೊಲೀಸರು ತಲಾಶ್ ನಡೆಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ