ಗದಗ: ಗದಗಿನ ಯುವಕ ಮತ್ತು ಹುಬ್ಬಳ್ಳಿಯ ಹುಡುಗಿ ಪ್ರೀತಿ ಮಾಡಿದ್ದರು. ಮನೆಯವರಿಗೆ ವಿಷಯ ತಿಳಿಸಿದರು. ಹುಡುಗನ ಮನೆಯವರು ಖುಷಿಯಿಂದ ಒಪ್ಪಿಕೊಂಡರು. ನಂತರ ಹುಡುಗಿಯ ಸರದಿ. ಆಕೆ ಮನೆಯಲ್ಲಿ ಹೇಳಿದಾಗ ಒಪ್ಪಲೇ ಇಲ್ಲ. ಕಾಡಿದಳು, ಬೇಡಿದಳು, ಗೋಗರೆದಳು, ಊಹುಂ ಅಷ್ಟಾದರೂ ಮನೆಯವರು ಒಪ್ಪಲೇ ಇಲ್ಲ. ಸರಿ ಎಂದು ಮನೆ ಬಿಟ್ಟು ಬಂದು ಪ್ರೀತಿಸಿದಾತನನ್ನೇ (Love Marriage) ಮದುವೆಯಾದಳು. ಹೊಸ ಜೀವನದ ಕನಸು ಹೊತ್ತಿದ್ದಳು. ಗದಗಿನಲ್ಲಿನ ಮನೆಯಲ್ಲಿದ್ದರು. ಅದ್ಧೂರಿಯಾಗಿ ಆರತಕ್ಷತೆ (Wedding reception) ನಡೆಸುವ ಸಿದ್ಧತೆಯಲ್ಲಿ ಗಂಡನ ಮನೆಯವರಿದ್ದರು. ಆದರೆ, ಬುಧವಾರ (ಜುಲೈ 12) ಅವರಿಗೆ ಆಘಾತ ಕಾದಿತ್ತು. ಹುಡುಗಿ ಮನೆಯವರು ಏಕಾಏಕಿ ನುಗ್ಗಿ ಆಕೆಯನ್ನೇ ಕಿಡ್ನ್ಯಾಪ್ (Daughter kidnap) ಮಾಡಿಕೊಂಡು ಹೋಗಿದ್ದರು. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು, ಕಿಡ್ನ್ಯಾಪ್ ಕೇಸ್ (Kidnap Case) ದಾಖಲಾಗಿತ್ತು. ಕೊನೆಗೆ ಬುಧವಾರ ಆಕೆಯನ್ನು ವಾಪಸ್ ಕರೆತರಲಾಗಿದೆ. ಆದರೆ, ಜಿಲ್ಲಾ ನ್ಯಾಯಾಲಯಕ್ಕೆ ಆಕೆಯನ್ನು ಹಾಜರು ಪಡಿಸಲಾಗಿದೆ. ಈಗ ಆಕೆ ವಾಪಸ್ ಮನೆ ಸೇರುತ್ತಾಳಾ? ಇಲ್ಲವೇ ಅಪ್ಪನ ಮನೆಗೆ ಹೋಗುತ್ತಾಳಾ ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ.
ಏನಿದು ಪ್ರಕರಣ?
ಗದಗ ನಗರದ ಡಿಸಿ ಮಿಲ್ ನಿವಾಸಿ ಅಭಿಷೇಕ ಹಾಗೂ ಹುಬ್ಬಳ್ಳಿ ನಿವಾಸಿ ಐಶ್ವರ್ಯ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇವರು ಎರಡು ವರ್ಷಗಳ ಹಿಂದೆ ಮದುವೆಯೊಂದರಲ್ಲಿ ಪರಿಚಯವಾಗಿದ್ದರು. ಪರಿಚಯವು ಪ್ರೀತಿಗೆ ತಿರುಗಿತ್ತು, ಪರಸ್ಪರ ಕರೆ (Phone Call), ಚಾಟಿಂಗ್ ಎಲ್ಲವೂ ನಡೆದಿತ್ತು. ಪ್ರೀತಿಯ ವಿಷಯವನ್ನು ಇಬ್ಬರು ಮಾತನಾಡಿಕೊಂಡಿದ್ದರು. ಒಬ್ಬರನ್ನೊಬ್ಬರು ಬಿಟ್ಟಿರಲಾದಷ್ಟು ಪ್ರೀತಿಯಲ್ಲಿ ಮುಳುಗಿದರು. ಹೀಗಾಗಿ ಈ ವಿಷಯವನ್ನು ಐಶ್ವರ್ಯ ತನ್ನ ಮನೆಯವರಿಗೆ ಹೇಳಿದಾಗ ವಿರೋಧ ವ್ಯಕ್ತವಾಗಿತ್ತು. ಕೊನೆಗೆ ವಿರೋಧದ ನಡುವೆಯೂ ದೇವಸ್ಥಾನದಲ್ಲಿ ಮದುವೆ (Marriage at temple) ನಡೆದೇಬಿಟ್ಟಿತು.
ನಂತರ 2023ರ ಜೂನ್ 23 ರಂದು ಗದಗಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿಯನ್ನೂ (Marriage Registration) ನೆರವೇರಿಸಲಾಯಿತು. ಗಂಡನ ಮನೆಯಲ್ಲಿ ಐಶ್ವರ್ಯ ಖುಷಿ ಖುಷಿಯಿಂದಲೇ ಇದ್ದಳು. ಆದರೆ, ಬುಧವಾರ ಏಕಾಏಕಿ ಮನೆಗೆ ನುಗ್ಗಿದ ಆಕೆಯ ಪೋಷಕರು ಹುಡುಗನಿಗೆ ಖಾರದ ಪುಡಿ (Chilli powder) ಎರಚಿ ಹಲ್ಲೆ ನಡೆಸಿದ್ದಾರೆ. ಐಶ್ವರ್ಯಳನ್ನು ಹೊತ್ತೊಯ್ದಿದ್ದಾರೆ. ಈ ವೇಳೆ ಅಡ್ಡ ಬಂದ ಗರ್ಭಿಣಿಯಾಗಿದ್ದ ಅಭಿಷೇಕ್ ಸಹೋದರಿ ಮೇಲೆಯೂ ಹಲ್ಲೆ (Pregnant woman assaulted) ನಡೆಸಿದ್ದಾರೆ ಎಂದು ದೂರಲಾಗಿತ್ತು.
ಜುಲೈ 14ರ ಶುಕ್ರವಾರ ಅದ್ಧೂರಿಯಾಗಿ ಆರತಕ್ಷತೆ ಮಾಡುವ ಬಗ್ಗೆ ಅಭಿಷೇಕ್ ಮನೆಯವರು ಪ್ಲ್ಯಾನ್ ಮಾಡಿಕೊಂಡಿದ್ದರು. ಕೊನೆಗೆ ಅಭಿಷೇಕ್ ಮತ್ತವರ ಮನೆಯವರು ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಐಶ್ವರ್ಯಳನ್ನು ಆಕೆಯ ಪೋಷಕರು ಅಪಹರಣ ಮಾಡಿದ್ದಾರೆಂದು ದೂರು ನೀಡಿದ್ದರು.
ಇದನ್ನೂ ಓದಿ: Tomato Price : 30 ಗುಂಟೆ, 3 ತಿಂಗಳು, 7.50 ಲಕ್ಷ ಆದಾಯ; ಬೊಂಬಾಟ್ ಟೊಮ್ಯಾಟೊ!
ಮತ್ತೆ ಒಂದಾಗುವರೇ?
ಅಭಿಷೇಕ್ ಮತ್ತು ಐಶ್ವರ್ಯ ಮದುವೆಯಾಗಿ ಇನ್ನೂ 20 ದಿನ ಕಳೆದಿರಲಿಲ್ಲ. ಅಷ್ಟರೊಳಗೆ ಈ ನವಜೋಡಿ ದೂರವಾದಂತೆ ಆಗಿತ್ತು. ಈಗ ದೂರು ದಾಖಲು ಮಾಡಿಕೊಂಡು ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರು ಆಕೆಯನ್ನು ಪತ್ತೆ ಹಚ್ಚಿ ವಾಪಸ್ ಕರೆತಂದಿದ್ದಾರೆ. ಸದ್ಯ ಆಕೆಯನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಲ್ಲಿ ಆಕೆಯ ಹೇಳಿಕೆ ಮೇರೆಗೆ ನಿರ್ಧಾರ ಆಗಲಿದೆ. ಈಗ ಆಕೆ ಗಂಡನೊಂದಿಗೆ ಇರುವುದಾಗಿ ನ್ಯಾಯಾಧೀಶರಿಗೆ ಹೇಳಿಕೆ ನೀಡಿದರೆ ಗಂಡನ ಜತೆಗೆ ಬರುತ್ತಾಳೆ. ಇಲ್ಲದಿದ್ದರೆ, ಅಪ್ಪನ ಮನೆಗೆ ವಾಪಸ್ ಹೋಗುತ್ತಾಳೆ. ಸದ್ಯ ಆಕೆಯ ಹೇಳಿಕೆ ಮೇಲೆ ಎಲ್ಲವೂ ನಿಂತಿದೆ.