ಬೆಂಗಳೂರು: ಮೊನ್ನೆ ಕೋರಮಂಗಲದಲ್ಲಿ ನಡೆದ ಕಿಡ್ನ್ಯಾಪ್ ಕೇಸ್‌ಗೆ (Kidnap case) ಇದೀಗ ರೋಚಕ ಟ್ವಿಸ್ಟ್ ಸಿಕ್ಕಿದೆ. ಮಧ್ಯರಾತ್ರಿಯಂದು ಪೊಲೀಸರು ಚೇಸಿಂಗ್ ಮಾಡಿ ಆರೋಪಿಯನ್ನು ಬಂಧಿಸಿದ್ದರು, ತನಿಖೆ ವೇಳೆ ಹೊಸ ವಿಷಯವೇ ಹೊರಬಿದ್ದಿದೆ. ಮೂರು ದಿನದ ಹಿಂದೆ ಬಂಡೆಪಾಳ್ಯ ಬಳಿ ತೌಹಿದ್ ಎಂಬಾತನನ್ನು ಗೋಪಿ ಹಾಗೂ ಆತನ ಸಹಚರರು ಕಿಡ್ನ್ಯಾಪ್ ಮಾಡಿದ್ದರು.
ಮೂರು ದಿನಗಳ ಕಾಲ ಆರೋಪಿಗಳು ಈತನನ್ನು ಗೌಪ್ಯ ಸ್ಥಳದಲ್ಲಿರಿಸಿಕೊಂಡು ಕುಟುಂಬಸ್ಥರಿಗೆ ಬೆದರಿಕೆ ಹಾಕಿ, 60 ಸಾವಿರ ಹಣ ನೀಡುವಂತೆ ಬ್ಲ್ಯಾಕ್‌ಮೇಲ್ ಮಾಡಿದ್ದರು. ಹೀಗಾಗಿ ಆ ದಿನ ಸಂಜೆಯೇ 35 ಸಾವಿರ ರೂ. ಹಣವನ್ನು ನೀಡಿದ್ದರು. ಹಣ ಕೊಟ್ಟ ಮೇಲೂ ತೌಹಿದ್‌ನನ್ನು ಆರೋಪಿಗಳು ಬಿಟ್ಟಿರಲಿಲ್ಲ. ಪೊಲೀಸ್ ಠಾಣೆಗೆ ವಿಚಾರ ಮುಟ್ಟಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಹೀಗೆ ಒತ್ತೆಯಿರಿಸಿಕೊಂಡು ಸಿಟಿಯಲ್ಲಿ ಸುತ್ತಾಡುತ್ತಿದ್ದಾಗಲೇ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು. ಜನವರಿ 11ರ ಸುಮಾರು 11.40ಕ್ಕೆ ಕೋರಮಂಗಲ 100 ಫೀಟ್ ರಸ್ತೆ ಬಳಿ ಪೊಲೀಸರು ಚೆಕ್‌ಪೋಸ್ಟ್‌ನಲ್ಲಿ ನೈಟ್ ರೌಂಡ್ಸ್‌ನಲ್ಲಿದ್ದರು. ವೇಗವಾಗಿ ಬಂದ ಹೋಂಡಾ ಸಿಟಿ ಕಾರ್ ಬ್ಯಾರಿಕೇಡ್‌ಗೆ ಗುದ್ದಿತ್ತು. ಕಾರಿನಲ್ಲಿದ್ದ ಒಬ್ಬ ಕಾಪಾಡಿ..ಕಾಪಾಡಿ ಎಂದು ಚೀರಿಕೊಂಡಿದ್ದ.
ಬ್ಯಾರಿಕೇಡ್ ಗುದ್ದಿ ನಿಲ್ಲಿಸದೆ ಪರಾರಿಯಾದ ಕಾರನ್ನು ತಕ್ಷಣ ಆಡುಗೋಡಿ ಇನ್‌ಸ್ಪೆಕ್ಟರ್ ಮಂಜುನಾಥ್ ಚೇಸ್ ಮಾಡಿದ್ದರು. 2 ಕಿ.ಮೀ. ಹಿಂಬಾಲಿಸಿ ಕೋರಮಂಗಲ ವಾಟರ್ ಟ್ಯಾಂಕ್ ಜಂಕ್ಷನ್ ಬಳಿ ಕಾರನ್ನು ಅಡ್ಡಹಾಕಿದ್ದರು. ಕಾರಿನಲ್ಲಿದ್ದ ಒಟ್ಟು ನಾಲ್ವರಲ್ಲಿ ಮೂವರು ಆರೋಪಿಗಳು ಇಳಿದು ಪರಾರಿಯಾಗಿದ್ದರು. ಒಬ್ಬ ಆರೋಪಿ ಗೋಪಿ ಎಂಬಾತನನ್ನು ವಶಕ್ಕೆ ಪಡೆದು, ತೌಹಿದ್‌ನನ್ನು ರಕ್ಷಣೆ ಮಾಡಲಾಗಿತ್ತು.
ಯುವಕನ ಒತ್ತೆ ಹಿಂದೆ ಹೆಣ್ಣಿನ ಮೋಹ ಪತ್ತೆ
ತೌಹಿದ್ ಕುಟುಂಬಸ್ಥರು ಕಿಡ್ನ್ಯಾಪ್ ಗ್ಯಾಂಗ್ ಕೇಳಿದಷ್ಟು ಹಣವನ್ನು ನೀಡಲು ಮುಂದಾಗಿದ್ದರು. ಈ ವೇಳೆ ಹಣ ಕೊಟ್ಟ ಮಹಿಳೆಯ ಮೊಬೈಲ್ ಫೋನ್ ಕಸಿದುಕೊಂಡು ಮತ್ತೆ ಪರಾರಿ ಆಗಿದ್ದರು. ಮೊಬೈಲ್‌ನಲ್ಲಿ ಹುಡುಗಿಯೊಬ್ಬಳ ನಗ್ನ ಫೋಟೊಗಳು ಪತ್ತೆ ಆಗಿದ್ದವು. ಇದನ್ನು ನೋಡಿದವರೇ ಈ ಹುಡುಗಿಯನ್ನು ಕರೆಸುವಂತೆ ತೌಹಿದ್‌ಗೆ ಒತ್ತಾಯಿಸಿದ್ದಾರೆ.
ಹಣಕ್ಕಾಗಿ ಬೇಡಿಕೆ ಇಟ್ಟವರು ಬಳಿಕ ಹೆಣ್ಣಿನ ಮೋಹಕ್ಕೆ ಬಿದ್ದ ಕಿರಾತಕರು ಯುವಕನನ್ನು ಒತ್ತೆಯಾಗಿರಿಸಿಕೊಂಡಿದ್ದರು. ಹಣ ನೀಡಿದರೂ ಬಿಡದೆ ಮತ್ತೆ ಕಾರಿನಲ್ಲಿ ಸುತ್ತಾಡಿಸುತ್ತಿದ್ದರು. ಆ ಯುವತಿಯನ್ನು ನಾವು ಹೇಳಿದ ಜಾಗಕ್ಕೆ ಕರೆಸಬೇಕು ಎಂದು ಧಮ್ಕಿ ಹಾಕಿದ್ದರು. ಹೀಗೆ ತಿರುಗಾಡುವ ವೇಳೆ ಕೋರಮಂಗಲ 100 ಅಡಿ ರಸ್ತೆಯಲ್ಲಿ ನೈಟ್ ರೌಂಡ್ಸ್ ಪೊಲೀಸರ ಕಣ್ಣಿಗೆ ಬಿದ್ದು ಆರೋಪಿಗಳು ಲಾಕ್ ಆಗಿದ್ದರು. ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿ ಆಗಿರುವ ಮೂವರಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ | Army Day in Bengaluru | ಪ್ರತಿ ಭಾರತೀಯ ಯೋಧರಿಗೆ ಋಣಿಯಾಗಿದ್ದಾರೆ ಎಂದ ಪ್ರಧಾನಿ ಮೋದಿ