ಬೆಂಗಳೂರು: ಹಣ ವಾಪಸ್ ಕೊಟ್ಟಿಲ್ಲವೆಂದು ಸಿಟ್ಟಿಗೆದ್ದ ಯುವಕರ ಗುಂಪುವೊಂದು ಸಿನಿಮೀಯ ರೀತಿಯಲ್ಲಿ ಬೆಸ್ಕಾಂನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಅಪಹರಿಸಿದ್ದರು. ಇದೀಗ ಅಪಹರಿಸಿದ (Kidnap Case) ಒಂದೇ ದಿನದಲ್ಲಿ ವ್ಯಕ್ತಿಯನ್ನು ರಕ್ಷಣೆ ಮಾಡಿ, ಆರೋಪಿಗಳನ್ನು ಪೀಣ್ಯಾ ಪೊಲೀಸರು ಬಂಧಿಸಿದ್ದಾರೆ.
ಲೋಹಿತ್ ಗೌಡ, ವೆಂಕಟೇಶ್, ರವಿ, ರಮೇಶ್, ಭರತ್ ಸೇರಿದಂತೆ ಹತ್ತು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ಬಂಧನದ ಬಳಿಕ ಹಣಕಾಸಿನ ವಿಚಾರಕ್ಕೆ ಈ ಕೃತ್ಯ ಎಸಗಿದ್ದರು ಎಂದು ಬೆಳಕಿಗೆ ಬಂದಿದೆ.
ಗುತ್ತಿಗೆ ಆಧಾರದ ಮೇಲೆ ಪ್ರವೀಣ್ ಎಂಬಾತ ಬೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ ಬೆಸ್ಕಾಂನಲ್ಲಿ ಕೆಲಸ ಕೊಡಿಸುವುದಾಗಿ ಸಾಕಷ್ಟು ಜನರಿಗೆ ಪ್ರವೀಣ್ ವಂಚನೆ ಮಾಡಿದ್ದ ಎನ್ನಲಾಗಿದೆ. ಬೆಸ್ಕಾಂ ಅಧಿಕಾರಿ ಪರಿಚಯವಿದ್ದಾರೆ ಎಂದು ಲಕ್ಷಾಂತರ ಹಣ ಪಡೆದು ವಂಚಿಸುತ್ತಿದ್ದ.
ಈ ಸಂಬಂಧ ವಂಚನೆಗೊಳಗಾದವರು ಹೈಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ಹೀಗಿರುವಾಗ ಕಳೆದ ಅ.30ರ ಸಂಜೆ ಮಾತುಕತೆಗೆಂದು ಪ್ರವೀಣ್‌ನನ್ನು ಕರೆಸಿಕೊಂಡಿದ್ದಾರೆ. ಹಣ ವಾಪಸ್ ಕೊಡುವಂತೆ ಪರಿಪರಿಯಾಗಿ ಕೇಳಿದ್ದಾರೆ. ಆದರೆ ಇದಕ್ಕೆ ಪ್ರವೀಣ್ ಕ್ಯಾರೆ ಎನ್ನದೇ ಇದ್ದಾಗ ಸಿಟ್ಟಿಗೆದ್ದ ಯುವಕರ ಗುಂಪು ಹಲ್ಲೆ ನಡೆಸಿದ್ದಾರೆ.
ನವಯುಗ ಟೋಲ್ ಬಳಿ ಪ್ರವೀಣ್ ಮೇಲೆ ಹಲ್ಲೆ ನಡೆಸಿ ಕಿಡ್ನ್ಯಾಪ್ ಮಾಡಿದ್ದಾರೆ. ಬಳಿಕ ಮಡಿಕೇರಿಯ ಹೋಮ್ ಸ್ಟೇಯಲ್ಲಿ ಇರಿಸಿಕೊಂಡಿದ್ದರು. ಸದ್ಯ ಪೀಣ್ಯಾ ಪೊಲೀಸರು ಪ್ರವೀಣ್‌ನನ್ನು ರಕ್ಷಣೆ ಮಾಡಿ, ಅಪಹರಿಸಿದ ಹತ್ತು ಮಂದಿಯನ್ನು ಬಂಧಿಸಿ ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Dowry Case: ಡೈರಿ ರಿಚ್ ಐಸ್‌ಕ್ರೀಮ್ ಮಾಲಿಕರ ಪತ್ನಿ ಆತ್ಮಹತ್ಯೆ ಮಾಡಿಕೊಂಡದ್ದೇಕೆ? ಡೆತ್‌ನೋಟ್ ಹೊರಗೆಡಹಿದ ರಹಸ್ಯ
ಮನೆಹಾಳ ಬಂಧುಗಳ ಕಾಟ, ವರದಕ್ಷಿಣೆ ಕಿರುಕುಳ: ಗೃಹಿಣಿ ಆತ್ಮಹತ್ಯೆ, ಐವರ ಸೆರೆ
ಬೆಂಗಳೂರು: ಗಂಡನ ಮನೆಯಲ್ಲಿ ಚಾಡಿ ಹೇಳಿ ಕಿರುಕುಳ ಕೊಡಿಸುತ್ತಿದ್ದ ಮನೆಹಾಳ ಬಂಧುಗಳ ಕಾಟ ಹಾಗೂ ಗಂಡನ ಮನೆಯವರ ಕಿರುಕುಳ (dowry harassment) ಸಹಿಸಲಾಗದೆ ಗೃಹಿಣಿಯೊಬ್ಬಳು ಆತ್ಮಹತ್ಯೆ (Self Harm, suicide case) ಮಾಡಿಕೊಂಡಿದ್ದಾಳೆ. ಡೆತ್‌ನೋಟ್ (death note) ಬರೆದಿಟ್ಟಿದ್ದು, ಐವರನ್ನು ಬಂಧಿಸಲಾಗಿದೆ.
ಐಶ್ವರ್ಯ ಆತ್ಮಹತ್ಯೆಗೆ ಶರಣಾದ ಗೃಹಿಣಿ. ಸಾವು ಸಂಭವಿಸಿದ ಒಂದು ವಾರದ ಬಳಿಕ ಆತ್ಮಹತ್ಯೆ ಹಿಂದಿನ ಅಸಲಿ ಕಹಾನಿ ಬಯಲಾಗಿದೆ. ಈಕೆಯ ಮದುವೆ ಮಾಡಿಸಿದ ಸಂಬಂಧಿಕರೇ ಕೊನೆಗೂ ಮದುವೆ ಮುರಿಯಲು ಮುಂದಾಗಿರುವುದು ಪತ್ತೆಯಾಗಿದೆ. ಮುರಿದುಬಿದ್ದ ಮದುವೆಯ ಕಾರಣ ಮನನೊಂದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕಳೆದ ತಿಂಗಳ 26ರಂದು ಘಟನೆ ನಡೆದಿತ್ತು. 5 ವರ್ಷಗಳ ಹಿಂದೆ ರಾಜೇಶ್ ಎಂಬಾತನನ್ನು ಕುಟುಂಬಸ್ಥರ ನಿಶ್ಚಯದಂತೆ ಐಶ್ವರ್ಯ ಮದುವೆಯಾಗಿದ್ದಳು. ಅಮೆರಿಕದಲ್ಲಿ ಎಂಎಸ್ ಮಾಡಿದ್ದ ಪ್ರತಿಭಾವಂತೆಯಾಗಿದ್ದ ಐಶ್ವರ್ಯ, ಪ್ರಸಿದ್ಧ ಸೀತ ಡೈರಿ ರಿಚ್ ಐಸ್‌ಕ್ರೀಮ್ ಕಂಪನಿ ಮಾಲೀಕರಾದ ರಾಜೇಶ್ ಕುಟುಂಬ ಸೇರಿದ್ದಳು.
ಐಶ್ವರ್ಯ ತಂದೆ ಸುಬ್ರಮಣಿಯ ತಂಗಿ ಗಂಡನಾದ ರವೀಂದ್ರ ಎಂಬಾತ ಇದೇ ಕಂಪನಿಯಲ್ಲಿ ಆಡಿಟರ್ ಆಗಿದ್ದು, ಆತನೇ ಮುಂದೆ ನಿಂತು ರಾಜೇಶ್ ಹಾಗೂ ಐಶ್ವರ್ಯ ಮದುವೆ ಮಾಡಿಸಿದ್ದರು. ಕೆಲಕಾಲ ನಂತರ ಆಸ್ತಿ ವಿಚಾರವಾಗಿ ರವೀಂದ್ರ ಮತ್ತು ಸುಬ್ರಮಣಿ ಕುಟುಂಬಕ್ಕೆ ಕಲಹ ಉಂಟಾಗಿತ್ತು. ತಂದೆ ಮೇಲಿನ ದ್ವೇಷಕ್ಕೆ ಮಗಳ ಸಂಸಾರದಲ್ಲಿ ದಾಯಾದಿಗಳು ಹುಳಿ ಹಿಂಡಿದ್ದರು.
ಐಶ್ವರ್ಯ ಕುರಿತು ಕೆಟ್ಟದಾಗಿ ರಾಜೇಶ್ ಕುಟುಂಬಕ್ಕೆ ಹೇಳುತ್ತಿದ್ದ ರವೀಂದ್ರ ಮತ್ತು ಕುಟುಂಬ, ಐಶ್ವರ್ಯಳ ಹಳೆಯ ಪೋಟೋಗಳನ್ನು ಕಳುಹಿಸಿ ನಿಮ್ಮ ಸೊಸೆ ಸರಿಯಿಲ್ಲ ಎಂದು ಕೆಟ್ಟದಾಗಿ ಬಿಂಬಿಸಿದ್ದರು. ಇದರಿಂದಾಗಿ ರಾಜೇಶ್ ಕುಟುಂಬ ಪ್ರತಿನಿತ್ಯ ಐಶ್ವರ್ಯಳಿಗೆ ಕಿರುಕುಳ ನೀಡುತ್ತಿತ್ತು. ಐಶ್ವರ್ಯ ಮಾವ ಗಿರಿಯಪ್ಪ, ಅತ್ತೆ ಸೀತ, ಮೈದುನ ವಿಜಯ್ ಹಾಗೂ ಆತನ ಪತ್ನಿ ತಸ್ಮಿಯಿಂದ ಕಿರುಕುಳವಿತ್ತು. ವರದಕ್ಷಿಣೆ ತರುವಂತೆಯೂ ಕಿರುಕುಳ ನೀಡಲಾಗುತ್ತಿತ್ತು.
ಎಷ್ಟೇ ಕಿರುಕುಳ ಕೊಟ್ಟರೂ ಗಂಡನಿಗಾಗಿ ಸುಮ್ಮನಿದ್ದ ಐಶ್ವರ್ಯ, ತಾನು ದುಡಿದ ಹಣದಲ್ಲಿ ಗಂಡನಿಗೆ ಐಷಾರಾಮಿ ಸೂಪರ್ ಬೈಕ್ ಹಾಗೂ ಚಿನ್ನದ ಒಡವೆ ಸಹ ಕೊಡಿಸಿದ್ದಳು. ಕುಟುಂಬಸ್ಥರ ಚಾಡಿಮಾತು ಕೇಳಿ ಗಂಡ ರಾಜೇಶ್ ಕೂಡ ಹೆಂಡತಿಯನ್ನು ನಿಂದಿಸುತ್ತಿದ್ದ. ಇದರಿಂದಾಗಿ ನೊಂದು ಕಳೆದ 20 ದಿನಗಳ ಹಿಂದೆ ಐಶ್ವರ್ಯ ಗಂಡನ ಮನೆಬಿಟ್ಟು ಬಂದಿದ್ದಳು. ಕಳೆದ 26ರಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಘಟನೆ ಸಂಬಂಧ ಐಶ್ವರ್ಯ ತಾಯಿ ಗೋವಿಂದರಾಜನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗಂಡ ರಾಜೇಶ್, ಅತ್ತೆ ಸೀತ, ಮಾವ ಗಿರಿಯಪ್ಪ, ಮೈದುನ ವಿಜಯ ಹಾಗೂ ಆತನ ಪತ್ನಿ ತಸ್ಮೈ ಮೇಲೆ ದೂರು ದಾಖಲಾಗಿದೆ. ಜೊತೆಗೆ ಸಂಸಾರ ಒಡೆಯಲು ಪ್ರಚೋದನೆ ನೀಡಿದ್ದ ಸಂಬಂಧಿಕರಾದ ರವೀಂದ್ರ, ಗೀತಾ, ಶಾಲಿನಿ, ಓಂಪ್ರಕಾಶ್ ಎಂಬವರ ಮೇಲೂ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿ ಐಶ್ವರ್ಯ ಪತಿ ರಾಜೇಶ್ ಸೇರಿ 5 ಮಂದಿ ಆರೋಪಿಗಳನ್ನು ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ