Site icon Vistara News

Kidnapping Case : ಮಗನ ಕಾಲೇಜು ಸೀಟ್‌ಗಾಗಿ ಅಡ್ಡದಾರಿ ಹಿಡಿದ ಉದ್ಯಮಿ; ಕೊನೆಗೆ ಆತನೇ ಕಿಡ್ನ್ಯಾಪ್‌ ಆದ

Bengaluru businessman kidnapped for money

ಬೆಂಗಳೂರು: ಪ್ರತಿಷ್ಠಿತ ಕಾಲೇಜಿನಲ್ಲಿ ಮಕ್ಕಳನ್ನು ಓದಿಸುವುದೇ ಪೋಷಕರಿಗೆ ಪ್ರತಿಷ್ಠೆಯ ವಿಷಯವಾಗಿದೆ. ಈ ರೀತಿಯ ಮನಸ್ಥಿತಿ ಇರುವ ಪೋಷಕರನ್ನೇ ಟಾರ್ಗೆಟ್‌ ಮಾಡಿ ಹೇಗೆ ಬಳಸಿಕೊಳ್ಳುತ್ತಾರೆ? ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ. ಉದ್ಯಮಿ ಚೇತನ್ ಎಂಬವರನ್ನು ಕಿಡ್ನ್ಯಾಪ್ ಮಾಡಿ (Kidnapping Case) ಹಣ ಸುಲಿಗೆ ಮಾಡಿದ ಕಾರಣಕ್ಕೆ ರಾಜಾಜಿನಗರ ಪೊಲೀಸರು ಸಚಿನ್ ಶಾ ಹಾಗೂ ಗೌರಿಶಂಕರ್ ಎಂಬವರನ್ನು ಬಂಧಿಸಿದ್ದಾರೆ. ಬಂಧಿತರಿಂದ 7 ಲಕ್ಷ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಚಾಕು, ಒಂದು ಆಟೋವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಉದ್ಯಮಿ ಚೇತನ್ ಎಂಬುವವರು ತಮ್ಮ ಮಗನಿಗೆ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಸೀಟು ಕೊಡಿಸಲು ಮುಂದಾಗಿದ್ದರು. ಶಿಕ್ಷಣ ಸಂಸ್ಥೆಯ ಕೆಲ ರೂಲ್ಸ್‌ಗಳಿಂದ ಸೀಟು ಸಿಕ್ಕಿರಲಿಲ್ಲ, ಇತ್ತ ಅವಧಿ ಕೂಡ ಮೀರುತ್ತಿತ್ತು. ತನ್ನ ಮಗನನ್ನು ಹೇಗಾದರೂ ಮಾಡಿ ಅದೇ ಪ್ರತಿಷ್ಠಿತ ಕಾಲೇಜಿನಲ್ಲಿಯೇ ಸೇರಿಸಬೇಕೆಂಬ ಕಾರಣದಿಂದ ಚೇತನ್ ಅನ್ಯ ಮಾರ್ಗವನ್ನು ಆಯ್ದುಕೊಂಡಿದ್ದರು. ಆ ಸಮಯದಲ್ಲಿ ಪ್ರಮುಖ ಆರೋಪಿ ಸಚಿನ್ ಶಾ ಪರಿಚಯವಾಗಿದ್ದ.

ಇದನ್ನೂ ಓದಿ: Udupi News : ಉಡುಪಿ ಶ್ರೀಕೃಷ್ಣ ಮಠಕ್ಕೆ ಬಂದು ಬಾವಿಗೆ ಬಿದ್ದ ಭಕ್ತ!

ಈ ವೇಳೆ ಸಚಿನ್ ಶಾ ನನಗೆ ಕಾಲೇಜಿನಲ್ಲಿ ಬಹಳ ಲಿಂಕ್ ಇದೆ, ನಿಮ್ಮ ಮಗನಿಗೆ ಸೀಟ್ ಸಿಕ್ಕಿತು ಎಂದುಕೊಳ್ಳಿ ಎಂದು ನಂಬಿಸಿದ್ದ. ಇವನ ಮಾತಿಗೆ ಮರುಳಾದ ಉದ್ಯಮಿ ಚೇತನ್‌, ಮಗನಿಗೆ ಸೀಟು ಸಿಕ್ಕಿಯೇ ಬಿಡುತ್ತು ಎಂದುಕೊಂಡಿದ್ದರು. ಕೆಲ ದಿನಗಳ ನಂತರ ಸಚಿನ್ ಸೀಟು ಸಿಗುತ್ತೆ ಆದರೆ ಅದಕ್ಕೆ ಏಳೆಂಟು ‌ಲಕ್ಷ ರೂ. ಖರ್ಚಾಗುತ್ತೆ ಎಂದಿದ್ದ. ಉದ್ಯಮಿ ಚೇತನ್ ಸೀಟ್ ಸಿಗುತ್ತೆ ಎಂಬ ಕಾರಣಕ್ಕೆ ಸಮ್ಮತಿಸಿದ್ದ. ಆದರೆ ದಿನ ಕಳೆದರೂ ಸಚಿನ್‌ ಮುಖಾಂತರ ಕಾಲೇಜು ಸೀಟು ಮಾತ್ರ ಸಿಗಲಿಲ್ಲ. ಹೀಗಾಗಿ ಉದ್ಯಮಿ ಚೇತನ್‌ ಮತ್ತೆ ಕಾಲೇಜಿಗೆ ಹೋಗಿ ಸಂಸ್ಥೆಯ ನಿಯಮದ ಪ್ರಕಾರವೇ ಸೀಟು ಪಡೆದುಕೊಂಡಿದ್ದರು. ಈ ವಿಚಾರ ತಿಳಿದ ಸಚಿನ್‌, ನಿನ್ನ ಮಗನಿಗೆ ಸೀಟು ಕೊಡಿಸಿದ್ದು ನಾನು, ನನ್ನ ಕಮೀಷನ್ ಹಣ ಕೊಡು ಎಂದು ದುಂಬಾಲು ಬಿದ್ದಿದ್ದ. ಆದರೆ ಇದಕ್ಕೆ ಚೇತನ್ ಕ್ಯಾರೇ ಎಂದಿರಲಿಲ್ಲ.

ಉದ್ಯಮಿಯನ್ನೇ ಕಿಡ್ನ್ಯಾಪ್‌ ಮಾಡಿದ ಸಚಿನ್‌

ಇದರಿಂದ ಸಿಟ್ಡಿಗೆದ್ದ ಸಚಿನ್ ಕಿಡ್ನ್ಯಾಪ್‌ ಪ್ಲ್ಯಾನ್‌ ಮಾಡಿದ್ದ. ತನ್ನ ಜಿಮ್ ಸ್ನೇಹಿತನಾಗಿದ್ದ ಗೌರಿಶಂಕರ ಜತೆ ಆಟೋದಲ್ಲಿ ಬಂದು ಬಳಿ ಚೇತನ್ ಕಾರನ್ನು ಅಡ್ಡ ಹಾಕಿದ್ದ. ಬಳಿಕ ಅವರ ಕಾರಿನಲ್ಲೇ ಕಿಡ್ನ್ಯಾಪ್ ಮಾಡಿದ್ದ. ಕಿರುಚಾಡಿದರೆ ಕೊಂದು ಹಾಕುತ್ತಿನಿ ಎಂದು ಚಾಕವಿನಿಂದ ಬೆದರಿಸಿದ್ದರು. ಅಷ್ಟಲ್ಲದೆ 7 ‌ಲಕ್ಷ ರೂ. ಹಣ ತರಿಸಿಕೊಂಡು ಡಾ. ರಾಜ್ ಕುಮಾರ್ ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದರು.

ಇತ್ತ ದೂರು ದಾಖಲಾಗುತ್ತಿದ್ದಂತೆ ಹಣದ ಜತೆ ಎಸ್ಕೇಪ್ ಆಗಿದ್ದ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಅವರಿಂದ ಹಣ , ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version