Site icon Vistara News

kidnapping case: ಬಾಲಕಿಗೆ ‘ಕಿಡ್ನ್ಯಾಪ್’ ಆಟ; ಡೆಲಿವರಿ ಬಾಯ್‌ಗೆ ಪ್ರಾಣ ಸಂಕಟ

kidnapping case

ಬೆಂಗಳೂರು: ಬಾಲಕಿಯೊಬ್ಬಳ ಆಟದಾಸೆಗೆ ಇದೀಗ ಪೋಷಕರು ಠಾಣೆ ಮೆಟ್ಟಿಲೇರುವಂತೆ ಮಾಡಿದೆ. ಕಳೆದ ಜೂ.12ರಂದು ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ 8 ವರ್ಷದ ಬಾಲಕಿಯೊಬ್ಬಳು ಕಾಣೆಯಾಗಿದ್ದಳು. ಕಂಗಾಲಾದ ಪೋಷಕರು ಹುಡುಕಾಟ ನಡೆಸಿದಾಗ ಅಪಾರ್ಟ್‌ಮೆಂಟ್‌ನ ಟೆರಸ್ ಮೇಲೆ ಬಾಲಕಿ ಸಿಕ್ಕಿದ್ದಳು. ಇಷ್ಟು ಹೊತ್ತು‌ ಎಲ್ಲಿದ್ದೆ ಎಂದು ಪೋಷಕರು ಬಾಲಕಿಯನ್ನು ಪ್ರಶ್ನಿಸಿದ್ದಕ್ಕೆ ನನ್ನ ಕಿಡ್ನ್ಯಾಪ್ ಮಾಡಲಾಗಿತ್ತು. ಕಿಡ್ನ್ಯಾಪರ್‌ನ ಕೈ ಕಚ್ಚಿ ಬಿಡಿಸಿಕೊಂಡು ಟೆರಸ್‌ ಮೇಲೆ ಓಡಿ ಬಂದೆ ಎಂದು ಹೇಳಿದ್ದಳು.

ನಿನ್ನ ಕಿಡ್ನ್ಯಾಪ್ ಯಾರು ಮಾಡಿದ್ದು ಎಂದು ಪೋಷಕರು ಕೇಳಿದಾಗ ಬಾಲಕಿಯ ಕಣ್ಣು ಡೆಲವರಿ ಬಾಯ್‌ ಕಡೆಗೆ ಹೋಗಿತ್ತು. ಅಪಾರ್ಟ್‌ಮೆಂಟ್‌ ಮುಂಭಾಗ ತೆರಳುತ್ತಿದ್ದ ಬ್ಲಿಂಕ್ ಇಟ್ (Blink it) ಡೆಲವರಿ ಬಾಯ್‌ ಅಖಿಲ್ ರಂಜನ್ ದಾಸ್ (28) ಎಂಬಾತ ಬಾಲಕಿಯನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿತ್ತು. ವಿಷಯ ಹರಿದಾಡುತ್ತಿದ್ದಂತೆ ಅಪಾರ್ಟ್‌ಮೆಂಟ್‌ನ ನಿವಾಸಿಗಳೆಲ್ಲ ಸೇರಿ ಡೆಲವರಿ ಬಾಯ್‌ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದರು.

ಡೆಲಿವರಿ ಬಾಯ್‌ಗೆ ಥಳಿಸಿದ ಬಳಿಕ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಅಖಿಲ್‌ ರಂಜನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ಅಖಿಲ್‌ ತಾನು ಯಾವುದೇ ಕೃತ್ಯ ಎಸಗಿಲ್ಲ ಎಂದು ಹೇಳಿದ್ದಾರೆ. ಆದರೆ ಬಾಲಕಿ ಕೈ ಕಚ್ಚಿ ಬಿಡಿಸಿಕೊಂಡೆ ಎಂದು ಹೇಳಿಕೆ ನೀಡಿದ್ದರಿಂದ ಅಖಿಲ್‌ ಕೈ ಪರಿಶೀಲಿಸಿದಾಗ ಕಚ್ಚಿದ ಗಾಯ ಆಗಿತ್ತು. ಆದರೆ ಕಿಡ್ನ್ಯಾಪ್‌ ಮಾಡಿದ್ದಕ್ಕೆ ಯಾವುದೇ ಸಾಕ್ಷ್ಯಧಾರಗಳು ಇರಲಿಲ್ಲ. ಈ ಪ್ರಕರಣವು ಪೊಲೀಸರಿಗೂ ಕಗ್ಗಂಟಾಗಿತ್ತು.

ಸಿಸಿ ಟಿವಿಯಲ್ಲಿ ಬಯಲಾಯ್ತು ಬಾಲಕಿಯಾಟ

ಅಪಾರ್ಟ್‌ಮೆಂಟ್‌ನ ಟೆರಸ್‌ ಮೇಲೆ ಯಾವುದೇ ಸಿಸಿ ಟಿವಿ ಇಲ್ಲದ ಕಾರಣಕ್ಕೆ ಪೊಲೀಸರು ಪಕ್ಕದ ಬಿಲ್ಡಿಂಗ್‌ನಿಂದ ಸಿಸಿಟಿವಿ ಪರಿಶೀಲನೆ ನಡೆಸಿದರು. ಆದರೆ ಸಿಸಿಟಿವಿಯಲ್ಲಿ ಯಾವುದೇ ಕಿಡ್ನ್ಯಾಪ್ ‌ದೃಶ್ಯ‌ ಇರಲಿಲ್ಲ. ಬದಲಿಗೆ ಬಾಲಕಿ ತನ್ನಷ್ಟಕ್ಕೆ ತಾನೇ ಟೆರಸ್ ಮೇಲೆ ತೆರಳಿದ್ದಳು. ಟೆರಸ್ ಮೇಲೆ ಹೋಗಿ‌ ಒಬ್ಬಳೇ ಆಟ ಆಡುತ್ತಿದ್ದಳು. ಇದು ಪೊಲೀಸರಿಗೆ ಮತ್ತಷ್ಟು ತಲೆಗೆ ಹುಳ ಬಿಟ್ಟಂತೆ ಆಗಿತ್ತು. ಒಂದು ಕಡೆ ಡೆಲವೆರಿ ಬಾಯ್‌ ಕಿಡ್ನ್ಯಾಪ್‌ ಆರೋಪವನ್ನು ತಳ್ಳಿ ಹಾಕಿದ್ದ. ಮತ್ತೊಂದು ಕಡೆ ಕೈನಲ್ಲಿ ಕಚ್ಚಿದ ಗುರುತು, ಇತ್ತ ಬಾಲಕಿಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯ ಪೊಲೀಸರ ತಲೆಕೆಡಿಸಿತ್ತು.

ಈ ಪ್ರಕರಣದಲ್ಲಿ ಬಾಲಕಿಯೇ ಸುಳ್ಳು ಹೇಳಿರಬಹುದೆಂದು ಪೊಲೀಸರು ಪೋಷಕರನ್ನು ಕರೆದು ವಿಚಾರಿಸಿದ್ದಾರೆ. ಈ ವೇಳೆ ಮನೆಯಲ್ಲಿ ಪೋಷಕರು ಆಟವಾಡಲು ಬಿಡುತ್ತಿಲ್ಲ ಎಂದು ಈ ರೀತಿ ಕಿಡ್ನ್ಯಾಪ್‌ ಕಥೆ ಕಟ್ಟಿರುವುದು ತಿಳಿದು ಬಂದಿದೆ. ತಾನು ಸುಳ್ಳು ಹೇಳಿದ್ದಾಗಿ ಒಪ್ಪಿಕೊಂಡ ಬಾಲಕಿ, ಆಟ ಆಡೋಕೆ ಹೋಗಿದ್ದೆ ಎಂದರೆ ಅಪ್ಪ-ಅಮ್ಮ ಬೈಯುತ್ತಾರೆ ಎಂದು ಕಿಡ್ನ್ಯಾಪ್ ಆಗಿದ್ದೆ ಎಂದೆ ಎಂದಿದ್ದಾಳೆ. ಆನ್‌ಲೈನ್‌ ಕ್ಲಾಸ್‌ನಿಂದ ಬಾಲಕಿ ಕಂಗೆಟ್ಟಿದ್ದಳು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Video Viral: ಮಹಾಲಕ್ಷ್ಮಿ ದರ್ಶನಕ್ಕೆ ಬಂದಿದ್ದ ಗೃಹಲಕ್ಷ್ಮಿಯರ ಮೇಲೆ ಬಸ್‌ ಹತ್ತಿಸಿದ ಕೆಎಸ್‌ಆರ್‌ಟಿಸಿ ಡ್ರೈವರ್‌!

ಥಳಿಸಿದವರ ವಿರುದ್ಧ ದೂರು ದಾಖಲು

ಸುಖಾಸುಮ್ಮನೆ ವಿಚಾರಣೆ ಪಡಿಸಿದೆ ಹಿಗ್ಗಾಮುಗ್ಗಾ ಥಳಿಸಿ, ಹಲ್ಲೆ‌ ಮಾಡಿದವರ ವಿರುದ್ಧ ಡೆಲವರಿ ಬಾಯ್‌ ಅಖಿಲ್‌ ರಂಜನ್‌ ದಾಸ್‌ ದೂರು ದಾಖಲಿಸಿದ್ದಾರೆ. ಸದ್ಯ ಗಾಯಗೊಂಡಿರುವ ಅಖಿಲ್‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version