ಕಲಬುರಗಿ: ಕಲಬುರಗಿಯಲ್ಲಿ ನಡೆದ ಕಿಡ್ನ್ಯಾಪ್ ಕೇಸ್ (Kidnapping Case) ಯಾವ ಸಿನಿಮಾ ಸ್ಟೋರಿಗೂ ಕಡಿಮೆ ಇರಲಿಲ್ಲ. ಇಲ್ಲಿ ಫೈಟಿಂಗ್ ಇತ್ತು, ಮುಂದೇನು ಎಂಬ ಕ್ಯೂರಿಯಾಸಿಟಿಯೂ, ಥ್ರೀಲಿಂಗ್ ಎಲ್ಲವೂ ಇತ್ತು. ತಾಯಿ-ಸಹೋದರನ ಕಿಡ್ಯ್ನಾಪ್ ವಿಚಾರ ತಿಳಿದು ನಡುರಸ್ತೆಯಲ್ಲಿ ಕಿಡ್ನ್ಯಾಪರ್ಸ್‌ರನ್ನು ಮತ್ತೊಬ್ಬ ಮಗ ಅಡ್ಡ ಹಾಕಿ ಕಾಪಾಡಿದ್ದಾನೆ. ಈ ಪ್ರಕರಣವನ್ನು ನೋಡಿದರೆ ಜೀವಮಾನದಲ್ಲಿ ಕಷ್ಟ ಎಂದವರಿಗೆ ಸಾಲವನ್ನು ಕೊಡಲೇಬಾರದು ಎನ್ನಿಸುವುದಂತೂ ಸತ್ಯ.
ಇಲ್ಲಿನ ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿ ಗ್ರಾಮದಲ್ಲಿ ಕೊಟ್ಟ ಹಣವನ್ನು ವಾಪಸ್ ಕೇಳಿದಕ್ಕೆ ತಾಯಿ-ಮಗ ಕಿಡ್ನ್ಯಾಪ್ ಆಗಿದ್ದರು. ಸಾವಿತ್ರಿ ಕಲಶೆಟ್ಟಿ ಹಾಗೂ ಅವರ ಮಗ ಮಾಣಿಕಪ್ಪ ಕಲಶೆಟ್ಟಿ ಎಂಬುವರನ್ನು ಕಿಡ್ನ್ಯಾಪರ್ಸ್ ಕಿಡ್ನ್ಯಾಪ್ ಮಾಡಿದ್ದರು. ಈ ಸ್ಟೋರಿಯಲ್ಲಿ ಮೇಜರ್ ಟ್ವಿಸ್ಟ್ ಎಂದರೆ ಕಿಡಿಗೇಡಿಗಳು ಪೊಲೀಸರ ವೇಷದಲ್ಲಿ ಬಂದು ಕಿಡ್ನ್ಯಾಪ್ ಮಾಡಿದ್ದರು.
ಶ್ರೀನಿವಾಸ ಸರಡಗಿಯ ಪ್ರೌಢ ಶಾಲೆಯಲ್ಲಿ ಎಫ್‌ಡಿಎ ಆಗಿ ಕೆಲಸ ಮಾಡುತ್ತಿದ್ದ ಮಂಗಳಾ ಎಂಬಾಕೆಗೆ ಸಾವಿತ್ರಿ ಕಲಶೆಟ್ಟಿ ಸುಮಾರು 31 ಲಕ್ಷ ರೂ. ಹಣವನ್ನು ಕೊಟ್ಟಿದ್ದರು. ಬಹಳದಿಂದ ಸತಾಯಿಸುತ್ತಿದ್ದಳು ಎಂಬ ಕಾರಣಕ್ಕೆ ಹಣ ವಸೂಲಿಗೆಂದು ಸಾವಿತ್ರಿ ಮತ್ತು ಮಗ ಮಾಣಿಕಪ್ಪ ಸರಡಗಿ ಗ್ರಾಮಕ್ಕೆ ತೆರಳಿದ್ದರು.
ಸ್ನೇಹಿತೆಯನ್ನು ಪಾರು ಮಾಡಲು ಪೊಲೀಸ್ ಧಾರಿಯಾದರು
ಮಂಗಳಾ ಬಳಿ ಹಣ ಕೊಡುವಂತೆ ಕೇಳಿದಕ್ಕೆ ಆಕೆ ತನ್ನ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಳು. ಮಂಗಳಾನ್ನು ಹೇಗಾದರೂ ಇದರಿಂದ ಬಚಾವ್ ಮಾಡಬೇಕಾಲ್ಲ ಎಂದುಕೊಂಡ ಆಕೆಯ ಸ್ನೇಹಿತರು ಪೊಲೀಸ್ ಧಾರಿಯಾಗಿ ಬಂದಿದ್ದರು. ಮಂಗಳಾ ಸ್ನೇಹಿತರಾದ ದಯಾನಂದ್ ಸಾಗರ್ , ರಾಜಕುಮಾರ್, ನಬೀಸಾಬ್ ಎಂಬುವವರು ಸ್ಥಳಕ್ಕಾಗಮಿಸಿದರು.
ರಾಜಕುಮಾರ್ ಎಂಬಾತ ನಾನು ಕೋಲಾರದ ಪಿಎಸ್ಐ ಮಂಗಳಾರನ್ನು ವಾರೆಂಟ್ ಮೇಲೆ ವಿಚಾರಣೆಗೆ ಕರೆದೊಯ್ಯಬೇಕಾಗಿದೆ ಎಂದಿದ್ದ. ಈ ವೇಳೆ ಸಾವಿತ್ರಿ ನನ್ನ ದುಡ್ಡು ಕೊಟ್ಟ ಮೇಲೆ ಎಲ್ಲಿಗೆ ಬೇಕಾದರೂ ಆಕೆಯನ್ನು ಕರೆದುಕೊಂಡು ಹೋಗಿ ಎಂದಿದ್ದರು. ಆದರೆ ಇದಕ್ಕೆ ಒಪ್ಪದೆ ತಕರಾರು ಮಾಡುತ್ತಿದ್ದರು. ಕೊನೆಗೆ ಈ ನಕಲಿ ಪೊಲೀಸರು ಕಲಬುರಗಿ ಪೊಲೀಸ್ ಕಮಿಷನರ್ ಕಚೇರಿಗೆ ಬರುವಂತೆ ಹೇಳಿ ಮಂಗಳಾ ಜತೆಗೆ ಸಾವಿತ್ರಿಯನ್ನು ಕಾರಲ್ಲಿ ಹತ್ತಿಸಿಕೊಂಡಿದ್ದರು. ಮತ್ತೊಂದು ಕಾರಲ್ಲಿ ಸಾವಿತ್ರಿ ಮಗ ಮಾಣಿಕಪ್ಪನನ್ನು ಹತ್ತಿಸಿಕೊಂಡು ಹೊರಟ್ಟಿದ್ದರು.
ಸಹೋದರನಿಗೆ ಫೋನ್‌ನಲ್ಲೇ ಅಪಡೇಟ್
ಕಾರಲ್ಲಿ ಹೊರಟ ಕೂಡಲೇ ನಡೆದ ಎಲ್ಲ ವಿಚಾರವನ್ನು ಮಾಣಿಕಪ್ಪ ತನ್ನ ಸಹೋದರನಿಗೆ ಫೋನ್‌ನಲ್ಲಿ ತಿಳಿಸಿ, ಕಮಿಷನರ್ ಕಚೇರಿಗೆ ಬರುವಂತೆ ಹೇಳಿದ್ದ. ಇತ್ತ ಸರಡಗಿಯಿಂದ ಬರುವಾಗ ಸಿಟಿ ಒಳಗಡೆ ಬರಬೇಕಿದ್ದ ಕಾರು, ಔಟರ್ ರಿಂಗ್ ರೋಡ್ ಮೂಲಕ ಹೋಗುತ್ತಿದ್ದಂತೆ ಸಾವಿತ್ರಿಗೆ ಅನುಮಾನ ಬಂದಿದೆ. ಆಗ ಸಾವಿತ್ರ ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಕ್ಕೆ ತನ್ನ ಬಳಿಯಿದ್ದ ಲೈಸೆನ್ಸ್ ಪಿಸ್ತೂಲ್ ತೋರಿಸಿ ರಾಜಕುಮಾರ್ ಬೆದರಿಸಿದ್ದಾನೆ.
ಹಿಂದಿನ ಕಾರಿನಲ್ಲಿ ಬರುತ್ತಿದ್ದ ಮಗ ಮಾಣಿಕಪ್ಪನಿಗೂ ಅನುಮಾನ ಬಂದು, ತಕ್ಷಣ ತನ್ನ ಸಹೋದರನಿಗೆ ಔಟರ್ ರಿಂಗ್ ರೋಡ್‌ನಲ್ಲಿ ಹೋಗುತ್ತಿರುವುದಾಗಿ ಮಾಹಿತಿ ನೀಡಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಅಲರ್ಟ್ ಆದ ಮಾಣಿಕಪ್ಪನ ಸಹೋದರ, ಕಲಬುರಗಿ ಹೈ ಕೋರ್ಟ್ ಬಳಿ ಕಾರು ಬರುತ್ತಿದ್ದ ಹಾಗೆ ಅಡ್ಡ ಹಾಕಿದ್ದಾನೆ.
ಇದನ್ನೂ ಓದಿ: ಮಹಿಳಾ ಆಯುಕ್ತರ ನಾಯಿಗಾಗಿ ಮನೆಮನೆಗೆ ನುಗ್ಗುತ್ತಿರುವ ಪೊಲೀಸರು; 500 ಕಡೆಗಳಲ್ಲಿ ಶೋಧ!
ಕಾರಿನಲ್ಲಿದ್ದ ರಾಜಕುಮಾರ್ ತಂಡದವರು ಪಿಸ್ತೂಲ್ ತೆಗೆದು ಬೆದರಿಕೆ ಹಾಕಲು ಮುಂದಾಗಿದ್ದಾರೆ. ಈ ವೇಳೆ ಸಾವಿತ್ರಿಯ ಮಗ ಕಿರುಚಾಡಿ ಜನರನ್ನು ಸೇರಿಸಿದ್ದಾನೆ. ನಡುರಸ್ತೆಯಲ್ಲೆ ಗಲಾಟೆ ಶುರುವಾಗುತ್ತಿದ್ದಂತೆ, ಹೈ ಕೋರ್ಟ್ ಬಳಿ ಇದ್ದ ಅಶೋಕ್ ನಗರ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ರಿಯಲ್ ಪೊಲೀಸರ ಎಂಟ್ರಿಗೆ ನಕಲಿ ಪೊಲೀಸರು ಕಕ್ಕಾಬಿಕ್ಕಿಯಾಗಿದ್ದಾರೆ. ವಿಚಾರಣೆ ನಡೆಸಿದಾಗ ಕಿಡ್ನ್ಯಾಪ್‌ನಿಂಗ್ ವಿಚಾರವೆಲ್ಲ ಬಯಲಾಗಿದೆ. ಸದ್ಯ ಪ್ರಕರಣವನ್ನು ವಿಶ್ವವಿದ್ಯಾಲಯದ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಪೊಲೀಸರು ನಕಲಿ ಪಿಎಸ್ಐ ರಾಜಕುಮಾರ್, ದಯಾನಂದ್, ಮಂಗಳಾ, ನಬೀಸಾಬ್‌ರನ್ನು ಬಂಧಿಸಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.