ಬೆಳಗಾವಿ/ಧಾರವಾಡ: ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡಿದ್ದ 48 ವರ್ಷದ ಮಹಿಳೆಯೊಬ್ಬರನ್ನು ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಅವರ ಮೆದುಳು ನಿಷ್ಕ್ರಿಯಗೊಂಡಿದ್ದ ಹಿನ್ನೆಲೆಯಲ್ಲಿ ಇನ್ನೊಂದು ಜೀವ ಉಳಿಸುವ ಬಗ್ಗೆ ವೈದ್ಯರು ಚಿಂತಿಸಿ, ಮಹಿಳೆ ಅಂಗಾಂಗ ದಾನದ ಬಗ್ಗೆ ಕುಟುಂಬದವರ ಒಪ್ಪಿಗೆ ಕೇಳಿದ್ದಾರೆ. ಅವರು ಸಮ್ಮತಿ ನೀಡಿದ್ದರಿಂದ ಧಾರವಾಡದಿಂದ ಬೆಳಗಾವಿಗೆ ಜೀರೊ ಟ್ರಾಫಿಕ್ ಮುಖಾಂತರ ಕಿಡ್ನಿ ರವಾನೆಯಾಗಿ ಜೀವದಾನಕ್ಕೆ ಸಾಕ್ಷಿಯಾಗಿದೆ.
6 ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ 52 ವರ್ಷದ ವ್ಯಕ್ತಿ ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ದಾಖಲಾಗಿದ್ದರು. ಜೀವಸಾರ್ಥಕತೆಯಲ್ಲಿ ನೋಂದಣಿಯಾಗಿದ್ದ ವ್ಯಕ್ತಿಗೆ ಮಹಿಳೆಯ ಕಿಡ್ನಿ ಹೊಂದಾಣಿಕೆಯಾಗಿತ್ತು. ಹೀಗಾಗಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ಕೂಡಲೇ ಕಸಿ ಮಾಡಬೇಕೆಂದು ವೈದ್ಯರು ನಿರ್ಧರಿಸಿದರು.
ಇದಕ್ಕಾಗಿ ಜೀರೊ ಟ್ರಾಫಿಕ್ ಮೂಲಕ ಧಾರವಾಡ ಎಸ್‌ಡಿಎಂ ಆಸ್ಪತ್ರೆಯಿಂದ ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ಮಹಿಳೆಯ ಕಿಡ್ನಿಯನ್ನು ರವಾನೆ ಮಾಡಲಾಯಿತು. ಪೊಲೀಸ್ ಬೆಂಗಾವಲು ವಾಹನದಲ್ಲಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಆ್ಯಂಬುಲೆನ್ಸ್‌ನಲ್ಲಿ ಸಾಗಣೆಯ ವ್ಯವಸ್ಥೆ ಮಾಡಲಾಯಿತು. ಕಿಡ್ನಿ ಸಮಸ್ಯೆಯುಳ್ಳ ವ್ಯಕ್ತಿಗೆ ಕಸಿ ಮಾಡಲಾಗಿದೆ. ಈ ಮೂಲಕ ಮಹಿಳೆ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಕುಟುಂಬದವರು ನೋವಿನಲ್ಲೂ ಅಂಗಾಂಗ ದಾನಕ್ಕೆ ಒಪ್ಪಿದ್ದಕ್ಕೆ ವೈದ್ಯರು ಶ್ಲಾಘನೆ ವ್ಯಕ್ತಪಡಿಸಿದರು.
ಇದನ್ನೂ ಓದಿ | ಮೊದಲ ಬಾರಿಗೆ 3ಡಿ ಕಿವಿ ಯಶಸ್ವಿ ಕಸಿ, ಚೆನ್ನಾಗಿ ಸೆಟ್ ಆಗುತ್ತೆ ಅಂತ ಮಹಿಳೆಗೆ ಖುಷಿ!