Site icon Vistara News

Jain Muni Murder: 9 ತುಂಡುಗಳಾಗಿ ಹತ್ಯೆಯಾದ ಜೈನಮುನಿ ಮರಣೋತ್ತರ ಪರೀಕ್ಷೆ, ಅಂತ್ಯಸಂಸ್ಕಾರ ಇಂದು

Jain Muni

ಭೀಕರವಾಗಿ ಹತ್ಯೆಗೀಡಾಗಿರುವ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಮೃತದೇಹದ ಮರಣೋತ್ತರ ಪರೀಕ್ಷೆ ಇಂದು ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ, ಬೆಳಗ್ಗೆ 9ಗಂಟೆ ಬಳಿಕ ನಡೆಯಲಿದೆ. ಜೈನಮುನಿಗಳನ್ನು ಕೊಂದ (Jain Muni Murder) ಕಿರಾತಕರು ಅವರ ದೇಹವನ್ನು 9 ತುಂಡುಗಳಾಗಿ ಕತ್ತರಿಸಿ ಕೊಳವೆಬಾವಿಯಲ್ಲಿ ಎಸೆದಿದ್ದರು. ಹಂತಕರೇ ಕೊಟ್ಟ ಮಾಹಿತಿ ಪ್ರಕಾರ, ಕೊಳವೆ ಬಾವಿಯನ್ನು ಅಗೆದು ಮೃತದೇಹದ ತುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಂದು ಮರಣೋತ್ತರ ಪರೀಕ್ಷೆ ಬಳಿಕ ದೇಹವನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಪಾರ್ಥಿವ ಶರೀರವನ್ನು ಚಿಕ್ಕೋಡಿಯ ಹಿರೇಕೊಡಿ ಗ್ರಾಮದ ನಂದಿಪರ್ವತ ಆಶ್ರಮಕ್ಕೆ ತರಲಾಗುವುದು. ಬಳಿಕ ಬೆಳಗ್ಗೆ ಸುಮಾರು 10.30ರ ಹೊತ್ತಿಗೆ ಜೈನ ಸಂಪ್ರದಾಯದಂತೆ ವಿಧಿ-ವಿಧಾನ ನೆರವೇರಿಸಲಾಗುವುದು ಎಂದು ಹೇಳಲಾಗಿದೆ. ಈ ವೇಳೆ ಭಕ್ತರು, ಮಠದ ಸಿಬ್ಬಂದಿ ಹಾಜರು ಇರಲಿದ್ದಾರೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಜುಲೈ 6ರಿಂದ ನಾಪತ್ತೆಯಾಗಿದ್ದರು. ಅಂದು ಇಡೀ ದಿನ ಆಶ್ರಮದ ಸುತ್ತಮುತ್ತ ಭಕ್ತರು ಅವರಿಗಾಗಿ ಹುಡುಕಾಟ ನಡೆಸಿದ್ದರು. ಇನ್ನು ಜೈನಮುನಿಗಳು ಎಲ್ಲೇ ಹೋಗಬೇಕಿದ್ದರೂ ಪಿಂಚಿ, ಕಮಂಡಲ ತಗೆದುಕೊಂಡು ಹೋಗುತ್ತಾರೆ. ಆದರೆ ಈ ಸಲ ಜೈನಮುನಿಯ ಪಿಂಚಿ, ಕಮಂಡಲ ಹಾಗೂ ಮೊಬೈಲ್ ಎಲ್ಲವೂ ಕೋಣೆಯಲ್ಲಿಯೇ ಇತ್ತು. ಹೀಗಾಗಿ ಭಕ್ತರಲ್ಲಿ ಆತಂಕ ಹೆಚ್ಚಿತ್ತು. ಜೈನ ಬಸದಿಗೆ ಸಂಬಂಧಿಸಿದ ಕೆಲವು ದಾಖಲೆ ಪತ್ರ ಕೂಡ ನಾಪತ್ತೆಯಾಗಿದೆ ಎಂದು ಹೇಳಲಾಗಿತ್ತು. ಇದು ಸಹ ಆತಂಕವನ್ನು ಸೃಷ್ಟಿಸಿತ್ತು. ಬಳಿಕ ಶುಕ್ರವಾರ ಚಿಕ್ಕೋಡಿ ಪೊಲೀಸ್ ಠಾಣೆಗೆ ಜೈನಮುನಿಗಳು ನಾಪತ್ತೆಯಾದ ಬಗ್ಗೆ ದೂರು ನೀಡಿದ್ದರು.

ಇದನ್ನೂ ಓದಿ: Jain Muni Murder : ಜೈನಮುನಿಯ ಕೊಂದು 9 ತುಂಡಾಗಿ ಕತ್ತರಿಸಿ ಎಸೆದ ಕಿರಾತಕರು ಇವರೇ ನೋಡಿ

ಕಳೆದ 15 ವರ್ಷಗಳಿಂದ ನಂದಿಪರ್ವತ ಆಶ್ರಮದಲ್ಲಿ ಮುನಿ ವಾಸವಿದ್ದರು. ಅವರು ನಾಪತ್ತೆಯಾದ ಬಗ್ಗೆ ಆಚಾರ್ಯ ಕಾಮಕುಮಾರನಂದಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಭೀಮಪ್ಪ ಉಗಾರೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ನಾಲ್ಕೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಚಿಕ್ಕೋಡಿ ಪೊಲೀಸರು ವಶಕ್ಕೆ ಪಡೆದಿದ್ದರು. ತನಿಖೆ ವೇಳೆ ಜೈನಮುನಿಯ ಹತ್ಯೆಯಾಗಿರುವುದು ಬಯಲಾಗಿತ್ತು. ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಇವರನ್ನು ಹತ್ಯೆ ಮಾಡಿದ್ದಾಗಿ ಹಂತಕರು ಹೇಳಿಕೊಂಡಿದ್ದಾರೆ.

Exit mobile version