ಬೆಂಗಳೂರು: ಬಿಎಂಟಿಸಿಗೆ ಗೃಹಿಣಿಯೊಬ್ಬರು ಬಲಿಯಾಗಿದ್ದಾರೆ. ಬಿಎಂಟಿಸಿ ಬಸ್‌ನ ಹಿಂಬದಿ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೀಮಾ (21) ಮೃತ ದುರ್ದೈವಿ.
ನಿನ್ನೆ ಸಂಜೆ (ಡಿ.13) ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್ ಸಮೀಪದ ಮಡಿವಾಳ ಫ್ಲೈ ಓವರ್ ಮೇಲೆ ಈ ಅಪಘಾತ ಸಂಭವಿಸಿದೆ. ಬಿಎಂಟಿಸಿ ಬಸ್ ಚಾಲಕನ ಅಜಾಗರೂಕ ಚಾಲನೆಯಿಂದಲೇ ಅಪಘಾತ ಸಂಭವಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಸೀಮಾ ಹಾಗೂ ಗುರುಮೂರ್ತಿ ದಂಪತಿ ತಮ್ಮ ಎರಡು ವರ್ಷದ ಮಗುವಿನೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರುಳುತ್ತಿದ್ದರು. ಈ ವೇಳೆ ಬಸ್ ಪಕ್ಕದಲ್ಲಿ ಚಲಿಸುತ್ತಿದ್ದ ದ್ವಿಚಕ್ರವಾಹನಕ್ಕೆ ಗುದ್ದಿದ್ದರಿಂದ ಆಯಾತಪ್ಪಿ ಸವಾರರು ಕೆಳಗೆ ಬಿದ್ದಿದ್ದರು.
ಇದನ್ನೂ ಓದಿ: Female Foeticide: ಬೆಂಗಳೂರು ಗ್ರಾಮಾಂತರದಲ್ಲೂ ಹೆಣ್ಣು ಭ್ರೂಣ ಹತ್ಯೆ ಬೆಳಕಿಗೆ, ಆಸ್ಪತ್ರೆ ಸೀಲ್
ಈ ವೇಳೆ ಬಸ್‌ನ ಹಿಂಬದಿ ಚಕ್ರ ಹರಿದು ಸೀಮಾ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಎರಡು ವರ್ಷದ ಮಗು ಗಾನವಿ ಮತ್ತು ಪತಿ ಗುರುಮೂರ್ತಿ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ. ಪತಿ ಗುರುಮೂರ್ತಿ ಸಿಂಗಸಂದ್ರ ಬೆಸ್ಕಾಂ ಉದ್ಯೋಗಿಯಾಗಿದ್ದು, ಕಳೆದ 8 ವರ್ಷದಿಂದ ಬೆಸ್ಕಾಂನಲ್ಲಿ ಲೈನ್‌ಮೆನ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಮೂಲತಃ ವಿಜಯನಗರ ಜಿಲ್ಲೆಯ ಗುಡೇಕೋಟೆ ಕೂಡ್ಲಿಗಿಯ ಶ್ರೀಕಂಠಪುರ ತಾಂಡದ ನಿವಾಸಿಯಾಗಿದ್ದಾರೆ. ಉದ್ಯೋಗ ನಿಮಿತ್ತ ಈ ದಂಪತಿ ಬೆಂಗಳೂರಿಗೆ ಬಂದು ನೆಲೆಸಿದ್ದರು. ಸದ್ಯ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮೃತದೇಹವನ್ನು ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಹಸ್ತಾಂತರ ಮಾಡಲಾಗುತ್ತದೆ.
ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಪಘಾತದ ಬಳಿಕ ಬಿಎಂಟಿಸಿ ಬಸ್ ಚಾಲಕ ಮತ್ತು ನಿರ್ವಾಹಕ ಬಸ್ ಬಿಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಕಿಲ್ಲರ್ ಬಿಎಂಟಿಸಿ ಬಸ್‌ಗೆ 120 ಮಂದಿ ಬಲಿ!
ಬೆಂಗಳೂರು: ಬಿಎಂಟಿಸಿ ಬೆಂಗಳೂರಿಗರ ಪ್ರಮುಖ ಸಾರ್ವಜನಿಕ ಸಾರಿಗೆ. ಬಿಎಂಟಿಸಿಗೆ ಎಷ್ಟು ಖ್ಯಾತಿ ಇದ್ದಯೋ ಅಷ್ಟೇ ಅಪಖ್ಯಾತಿಯು ಸೇರಿಕೊಂಡಿದೆ. ಚಾಲಕರ ಅತಿವೇಗ ಚಾಲನೆ, ನಿರ್ಲಕ್ಷ್ಯದಿಂದ ಅದೆಷ್ಟೋ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಕಿಲ್ಲರ್ ಎಂದೇ ಹೆಸರು ಪಡೆದಿರುವ ಬಿಎಂಟಿಸಿಗೆ ಕಳೆದ ನಾಲ್ಕು ವರ್ಷಗಳಲ್ಲಿ ನೂರಕ್ಕೂ ಹೆಚ್ಚು ಮಂದಿ ಪ್ರಾಣ (BMTC Accident) ಕಳೆದುಕೊಂಡಿದ್ದಾರೆ.
ತಿಂಗಳಿಗೆ ಒಬ್ಬರಾದರೂ ಬಿಎಂಟಿಸಿಗೆ ಬಲಿಯಾದರು ಎಂಬ ಸುದ್ದಿ ಕೇಳುತ್ತಲೇ ಇರುತ್ತವೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ನಿಂದ ಅಪಘಾತಗಳು ಹೆಚ್ಚಾಗುತ್ತಲೆ ಇವೆ. ಕಳೆದ ನಾಲ್ಕು ವರ್ಷಕ್ಕೆ ಹೋಲಿಸಿದರೆ, ಸಾವಿನ ಸಂಖ್ಯೆಗಿಂತ ಗಾಯಾಳುಗಳ ಸಂಖ್ಯೆಯೇ ಹೆಚ್ಚಿದೆ. ಈ ವರ್ಷದಲ್ಲಿ ಬಿಎಂಟಿಸಿಯಿಂದ ಸತ್ತವರ ಸಂಖ್ಯೆ 34 ಇದ್ದರೆ, 97 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಿಎಂಟಿಸಿ ಮಾತ್ರವಲ್ಲ ಕೆಎಸ್‌ಆರ್‌ಟಿಸಿ ಚಾಲಕರ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ. ಇದರಿಂದಾಗಿ ಈ ವರ್ಷ ಹತ್ತು ಮಂದಿ ಮೃತಪಟ್ಟಿದ್ದರೆ, 28 ಅಪಘಾತಗಳಾಗಿರುವ ವರದಿಯಾಗಿದೆ. ಈ ಮಧ್ಯೆ ಸಂಚಾರಿ ನಿಯಮಗಳನ್ನು ಉಲಂಘಿಸುತ್ತಿರುವ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಚಾಲಕರಿಗೆ ಸಂಚಾರಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಸಂಚಾರಿ ಪೊಲೀಸರ ತನಿಖೆಯಲ್ಲಿ ಕೆಲ ಚಾಲಕರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಚಾಲನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: lawyer Murder: ಕಲಬುರಗಿಯಲ್ಲಿ ವಕೀಲನನ್ನು ಅಟ್ಟಾಡಿಸಿ ಕೊಂದರು! ಹತ್ಯೆಗೆ ಇದುವೇ ಕಾರಣ!
ನಿಯಮ ಉಲ್ಲಂಘಿಸಿ 1 ಕೋಟಿ ದಂಡ ಕಟ್ಟಿದ ಬಿಎಂಟಿಸಿ
ಬಿಎಂಟಿಸಿಯಲ್ಲಿ ಬರೋಬ್ಬರಿ 13, 917 ಸಂಚಾರಿ ನಿಯಮ ಉಲ್ಲಂಘಿಸಿದರೆ, ಕೆಎಸ್‌ಆರ್‌ಟಿಸಿ ಚಾಲಕರು ಮೂರು ಸಾವಿರಕ್ಕೂ ಹೆಚ್ಚು ರೂಲ್ಸ್ ಬ್ರೇಕ್ ಮಾಡಿದ್ದಾರೆ. ಬಿಎಂಟಿಸಿ ಬಸ್ ಚಾಲಕರಿಂದಲೇ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಆಗಿದೆ. ಹೀಗಾಗಿ 1,04,10,000 ರೂ. ದಂಡವನ್ನು ಬಿಎಂಟಿಸಿ ಇಲಾಖೆ ಕಟ್ಟಿದೆ. 14 ಲಕ್ಷ ರೂ. ದಂಡವನ್ನು ಕೆಎಸ್‌ಆರ್‌ಟಿಸಿ ಸಂಸ್ಥೆ ಕಟ್ಟಿದೆ. ಕಳೆದ ನಾಲ್ಕು ವರ್ಷಗಳಲ್ಲಿ ನಡೆದಿರುವ ಅಪಘಾತಗಳ ಅಂಕಿ ಅಂಶ ನೋಡುವುದಾದರೆ,..
ಬಿಎಂಟಿಸಿಗೆ ಬಲಿಯಾದವರು- ಗಂಭೀರ ಗಾಯಗೊಂಡವರು
2020ರಲ್ಲಿ 22 ಮಂದಿ ಸಾವು- 49 ಮಂದಿ ಗಾಯಾಳುಗಳು
2021ರಲ್ಲಿ 27 ಮಂದಿ ಸಾವು- 58 ಮಂದಿ ಗಾಯಾಳುಗಳು
2022ರಲ್ಲಿ 37 ಮಂದಿ ಸಾವು- 85 ಮಂದಿ ಗಾಯಾಳುಗಳು
2023ರಲ್ಲಿ 34 ಮಂದಿ ಸಾವು -97 ಮಂದಿ ಗಾಯಾಳುಗಳು
ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಅಪಘಾತಗಳನ್ನು ಹೆಚ್ಚು ಮಾಡುವರ ವಿರುದ್ಧ ಕ್ರಮಕ್ಕೆ ಇಲಾಖೆ ಸೂಚನೆ ನೀಡಿದೆ. ಮುಂದಿನ ದಿನದಲ್ಲಿ ಚಾಲಕರಿಗೆ ತರಬೇತಿ ಕೊಡಲು ಪೊಲೀಸರು ಮುಂದಾಗಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ