ಬೆಂಗಳೂರು/ಪಣಜಿ: ನಾಲ್ಕು ವರ್ಷದ ಮಗನನ್ನು ಗೋವಾದ (Goa Murder Case) ಅಪಾರ್ಟ್‌ಮೆಂಟ್‌ನಲ್ಲಿ ಹತ್ಯೆಗೈದ ಆರೋಪದ (Killer CEO) ಮೇಲೆ ಬಂಧಿತಳಾಗಿರುವ ಬೆಂಗಳೂರಿನ ಸುಚನಾ ಸೇಠ್‌ಗೆ (Suchana Seth) ಗೋವಾದ ಪಣಜಿಯ ಬಾಲಾಪರಾಧಿ ನ್ಯಾಯಾಲಯವು 13 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. 11 ದಿನಗಳ ಪೊಲೀಸ್ ಕಸ್ಟಡಿ ನಂತರ, ಸುಚನಾರನ್ನು ವಿಚಾರಣೆಗೆ ಹಾಜರುಪಡಿಸಲಾಯಿತು. ಈ ವೇಳೆ ನ್ಯಾಯಾಲಯವು 13 ದಿನಗಳ ನ್ಯಾಯಾಂಗ ಬಂಧನ (Judicial custody) ವಿಧಿಸಿ ಆದೇಶ ಹೊರಡಿಸಿದೆ.
ಗಂಡನ ಪ್ರಶ್ನೆಗೆ ಸುಚನಾ ಸೇಠ್ ತಬ್ಬಿಬ್ಬು
ಇನ್ನು ಪೊಲೀಸ್ ಕಸ್ಟಡಿಯಲ್ಲಿದ್ದಾಗ ಗೋವಾದ ಪೊಲೀಸ್ ಠಾಣೆಯೊಂದರಲ್ಲಿ ಸುಚನಾ ಸೇಠ್ ಹಾಗೂ ಆಕೆಯ ಪತಿ ವೆಂಕಟರಾಮನ್ ಮುಖಾಮುಖಿಯಾಗಿದ್ದಾರೆ. ಇದೇ ವೇಳೆ ಪತ್ನಿ ವಿರುದ್ಧ ವೆಂಕಟರಾಮನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಹೇಳಿಕೆ ದಾಖಲಿಸಲು ಆಗಮಿಸಿದ್ದ ವೇಳೆ ಪೊಲೀಸ್ ಠಾಣೆಯಲ್ಲಿ ಸುಚನಾ ಸೇಠ್ ಹಾಗೂ ವೆಂಕಟರಾಮನ್ ಮುಖಾಮುಖಿಯಾದರು. ಆಗ ವೆಂಕಟರಾಮನ್, ನನ್ನ ಮಗನಿಗೆ ಏನು ಮಾಡಿದೆ? ನಿನಗೆ ಹೀಗೆ ಮಾಡಲು ಮನಸ್ಸಾದರೂ ಹೇಗೆ ಬಂತು ಎಂಬುದಾಗಿ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸುಚನಾ ಸೇಠ್, ನಾನೇನೂ ಮಾಡಿಲ್ಲ ಎಂದು ಹೇಳಿದ್ದಾಳೆ. ಇಬ್ಬರ ಮಧ್ಯೆ ಸುಮಾರು 15 ನಿಮಿಷ ಇಂತಹದ್ದೇ ಮಾತುಕತೆ ನಡೆಯಿತು. ಒಬ್ಬರನ್ನೊಬ್ಬರು ದೂರುವುದರಲ್ಲೇ ಅವರು ಕಾಲ ಕಳೆದರು. ವೆಂಕಟರಾಮನ್ ಅವರು ದುಃಖದಲ್ಲಿ ಪತ್ನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು” ಎಂದು ಪೊಲೀಸರು ತಿಳಿಸಿದ್ದಾರೆ.
ಸುಚನಾ ಸೇಠ್ ಮತ್ತು ವೆಂಕಟರಾಮನ್ 2010 ನವೆಂಬರ್‌ನಲ್ಲಿ ವಿವಾಹವಾಗಿದ್ದರು. 2019ರಲ್ಲಿ ಆಗಸ್ಟ್‌ನಲ್ಲಿ ಮಗ ಜನಿಸಿದ್ದ. ಮಾರ್ಚ್ 2021ರಿಂದ ಆಕೆ ತನ್ನ ಪತಿಯಿಂದ ದೂರವಾಗಿ ವಾಸಿಸಲು ಆರಂಭಿಸಿದ್ದಳು. ಮೈಂಡ್‌ಫುಲ್ ಎಐ ಲ್ಯಾಬ್ಸ್ (mindful AI labs) ಸಿಇಒ ಸುಚನಾ ಸೇಠ್ ಕೆಲ ದಿನಗಳ ಹಿಂದೆ ವಾರ ಮಗನನ್ನು ಕರೆದುಕೊಂಡು ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸರ್ವಿಸ್ ಅಪಾರ್ಟ್‌ಮೆಂಟ್ ಚೆಕ್‌ಇನ್ ಆಗಿದ್ದಳು. ಅಲ್ಲಿಂದ ಮಗುವಿನ ಶವವನ್ನು ಸೂಟ್‌ಕೇಸ್‌ಗೆ ತುಂಬಿಸಿಕೊಂಡು ಹೊರಬಿದ್ದಿದ್ದಳು. ಅನುಮಾನದ ಆಧಾರದಲ್ಲಿ ಆಕೆಯನ್ನು ಬಂಧಿಸಿದಾಗ ಹತ್ಯೆ ನಡೆಸಿದ್ದು ತಿಳಿದುಬಂದಿತ್ತು. ಕೊಲೆಗೆ ಈಕೆ ಪೂರ್ವಯೋಜಿತ ಸಂಚು ನಡೆಸಿದ್ದಳು ಎಂಬುದಕ್ಕೆ ಪೂರಕ ಸಾಕ್ಷ್ಯವಾಗಿ ಈಕೆ ಉಳಿದಿದ್ದ ರೂಮಿನಲ್ಲಿದ್ದ ಖಾಲಿ ಕೆಮ್ಮು ಸಿರಪ್ ಬಾಟಲಿಗಳನ್ನು ಪೊಲೀಸರು ಜಪ್ತಿ ಮಾಡಿದ್ದರು.
ಸುಚನಾ ಸೇಠ್ ಪತಿಯಿಂದ ಗೃಹ ದೌರ್ಜನ್ಯಕ್ಕೆ ತುತ್ತಾಗಿರುವ ಬಗ್ಗೆ ಹಿಂದೆ ದೂರು ದಾಖಲಿಸಿದ್ದ ಹಾಗೂ ಜೀವನಾಂಶ ಅಪೇಕ್ಷಿಸಿದ್ದ ವಿವರಗಳು ಹೊರಗೆ ಬಂದಿದ್ದವು. ಆಕೆ ಆಗಸ್ಟ್‌ನಲ್ಲಿ ಕೌಟುಂಬಿಕ ದೌರ್ಜನ್ಯದ ಆರೋಪವನ್ನು ಪತಿಯ ವಿರುದ್ಧ ದಾಖಲಿಸಿದ್ದಳು. ಪತಿ ವೆಂಕಟರಾಮನ್ ತನ್ನ ಹಾಗೂ ಮಗುವಿನ ಮೇಲೆ ದೈಹಿಕವಾಗಿ ದೌರ್ಜನ್ಯ ಎಸಗಿದ್ದಾರೆ ಎಂದು ಸುಚನಾ ಆರೋಪಿಸಿದ್ದಳು. ಪತಿಯಿಂದ ವಿಚ್ಛೇದನ ಕೋರಿದ್ದು, ವಾರ್ಷಿಕ ₹1 ಕೋಟಿ ರೂ.ಗೂ ಅಧಿಕ ಆದಾಯ ಹೊಂದಿರುವ ಪತಿಯಿಂದ ಮಾಸಿಕ ₹2.5 ಲಕ್ಷ ಜೀವನಾಂಶ ಕೊಡಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ