ಧಾರವಾಡ: ಕಿತ್ತೂರು ಕೋಟೆ ಮರು ನಿರ್ಮಾಣ ಮಾಡಲು ಸರ್ಕಾರ ಕ್ರಮಕೈಗೊಂಡಿದೆ. ಕಿತ್ತೂರು ಅಭಿವೃದ್ಧಿಗೆ 100 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ವೀರರಾಣಿ ಕಿತ್ತೂರು ಚನ್ನಮ್ಮ (Kittur Chennamma) ಮೆಗಾ ನಾಟಕಕ್ಕೆ ಈಗ ಸರ್ಕಾರ ನೀಡಿರುವ ಅನುದಾನವನ್ನು ದ್ವಿಗುಣಗೊಳಿಸಿ ಅನುದಾನ ನೀಡಲು ನಿರ್ಧರಿಸಲಾಗಿದೆ. ಈ ಮೂಲಕ ಮೆಗಾ ನಾಟಕ ಪ್ರದರ್ಶನವನ್ನು ಪ್ರೋತ್ಸಾಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಕೆಸಿಡಿ ಆವರಣದಲ್ಲಿ ಧಾರವಾಡ ರಂಗಾಯಣ ಹಾಗೂ ಜಿಲ್ಲಾಡಳಿತ ವತಿಯಿಂದ ಶನಿವಾರ ಆಯೋಜಿಸಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮ ಮೆಗಾ ನಾಟಕ ಉದ್ಘಾಟಿಸಿ ಮಾತನಾಡಿದರು.
ಕಿತ್ತೂರು ನಾಡಿನ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಕಿತ್ತೂರು ಕೋಟೆಯ ಮರು ನಿರ್ಮಾಣ, ದಾಖಲೆ ಸಂರಕ್ಷಣೆಗೆ ಸರ್ಕಾರ ಅಗತ್ಯ ಕ್ರಮವಹಿಸಿದೆ. ಧಾರವಾಡ ರಂಗಾಯಣ ವೀರರಾಣಿ ಕಿತ್ತೂರು ಚೆನ್ನಮ್ಮ ಮೆಗಾ ನಾಟಕದ ಮೂಲಕ ಇತಿಹಾಸವನ್ನು ಮರು ಸೃಷ್ಟಿಸಿ ಅಭಿಮಾನ ಮೂಡಿಸಿದೆ ಎಂದರು.
ಇದನ್ನೂ ಓದಿ | Border Dispute | ಮುಂದುವರಿದ ಮಹಾಕ್ಯಾತೆ; ಬೊಮ್ಮಾಯಿ ವಿರುದ್ಧ ಪ್ರಧಾನಿ ಮೋದಿಗೆ ಮಾನೆ ಸುಳ್ಳು ದೂರು!
ವೀರರಾಣಿ ಕಿತ್ತೂರು ಚನ್ನಮ್ಮಳನ್ನು ನೆನೆದರೆ ರೋಮಾಂಚನವಾಗುತ್ತದೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿಗಿಂತ ಮೊದಲು ಸ್ವಾತಂತ್ರ್ಯದ ಕಹಳೆ ಮೊಳಗಿಸಿ, ಬ್ರಿಟಿಷರ ವಿರುದ್ದ ಹೊರಾಡಿದಳು. ಸಣ್ಣ ಸೈನ್ಯ ಕಟ್ಟಿಕೊಂಡು ಕೆಚ್ಚೆದೆಯಿಂದ ಪರಕೀಯರ ವಿರುದ್ಧ ಯುದ್ದ ಸಾರಿದ್ದಳು. ಇಂತಹ ನಾಟಕವನ್ನು ರಮೇಶ ಪರವಿನಾಯ್ಕರ್ ಅವರು ಶ್ರದ್ಧೆಯಿಂದ ರೂಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಧಾರವಾಡ ರಂಗಾಯಣದಿಂದ ಈ ನಾಟಕವನ್ನು ರಾಜ್ಯಾದ್ಯಂತ ಪ್ರದರ್ಶನ ಆಯೋಜಿಸಿ, ವೀರರಾಣಿ ಕಿತ್ತೂರು ಚನ್ನಮ್ಮಳ ಇತಿಹಾಸವನ್ನು ಪಸರಿಸಬೇಕು ಎಂದು ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಮರಾಠಿಯಲ್ಲಿ ಪ್ರದರ್ಶನವಾದ ಜನತಾರಾಜಾ ನಾಟಕದ ಮೂಲಕ ಶಿವಾಜಿ ಮಹಾರಾಜರ ಸಾಹಸಗಾಥೆಯನ್ನು ತೆರೆಗೆ ತರಲಾಗಿತ್ತು. ಅದಕ್ಕೆ ಪೂರಕವಾಗಿ ಕನ್ನಡ ನಾಡಿನ ಹೆಮ್ಮೆಯ ನಾಯಕಿ, ಭಾರತ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ವೀರರಾಣಿ ಕಿತ್ತೂರು ಚನ್ನಮನ ಕುರಿತು ಮೆಗಾ ನಾಟಕ ಧಾರವಾಡ ರಂಗಾಯಣದಿಂದ ರೂಪುಗೊಂಡಿದೆ ಎಂದರು.
ಕೇಂದ್ರ ಸಂಸದೀಯ ವ್ಯವಹಾರಗಳ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಅವರು ಮಾತನಾಡಿ, ನಾಟಕದ ತಯಾರಿ, ಶ್ರಮ ಮತ್ತು ನಿರ್ದೇಶಕ ರಮೇಶ ಅವರ ಸಾಹಸ ಸ್ಮರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷ ಅರುಣ ಜೋಶಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ರಮೇಶ ಪರವಿನಾಯ್ಕರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಧಾರವಾಡ ರಂಗಾಯಣ ನಿರ್ದೇಶಕ ಹಾಗೂ ವೀರರಾಣಿ ಕಿತ್ತೂರು ಚೆನ್ನಮ್ಮ ನಾಟಕದ ಪ್ರಧಾನ ನಿರ್ದೇಶಕ ರಮೇಶ ಪರವಿನಾಯ್ಕರ ಅವರಿಗೆ ರಂಗ ಜ್ಯೋತಿ ಅಭಿದಾನ ನೀಡಿ, ಸನ್ಮಾನಿಸಿದರು.
ಗದಗ-ಡಂಬಳ ತೋಂಟದಾರ್ಯ ಮಠದ ಡಾ. ಸಿದ್ದರಾಮ ಮಹಾಸ್ವಾಮಿ, ಹುಕ್ಕೇರಿ ಹಿರೇಮಠದ ಷ.ಬ್ರ. ಚಂದ್ರಶೇಖರ ಶಿವಾಚಾರ್ಯರ ಮಹಾಸ್ವಾಮಿ, ಕಿತ್ತೂರು ಚನ್ನಮ್ಮ ರಾಜಗುರು ಸಂಸ್ಥಾನ ಕಲ್ಲಠದ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿ, ಮುರಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದರು.
ಧಾರವಾಡ ಶಾಸಕ ಅಮೃತ ದೇಸಾಯಿ, ಸೇಡಂ ಶಾಸಕ ರಾಜಕುಮಾರ ಪಾಟೀಲ, ಮಹಾಪೌರ ಈರೇಶ ಅಂಚಟಗೇರಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಕವಿವಿ ಕುಲಪತಿ ಡಾ. ಕೆ.ಬಿ.ಗುಡಸಿ, ಕುಲಸಚಿವ ಯಶಪಾಲ್, ಆರ್ ಎಸ್.ಎಸ್.ಪ್ರಮುಖರಾದ ಅರವಿಂದರಾವ್ ದೇಶಪಾಂಡೆ ಕ್ಷೀರಸಾಗರ, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ತವಣಪ್ಪ ಅಷ್ಟಗಿ , ರಂಗಾಯಣ ಆಡಾಳಿತಾಧಿಕಾರಿ ಶಶಿಕಲಾ ಹುಡೆದ ಸೇರಿದಂತೆ ವಿವಿಧ ನಿಗಮ, ಮಂಡಳಿ ಅಧ್ಯಕ್ಷರು, ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.
ಇದನ್ನೂ ಓದಿ | Voter Data | ಮತದಾರರ ಪಟ್ಟಿ ಅಕ್ರಮ ಪ್ರಕರಣದಲ್ಲಿ ಅಧಿಕಾರಿಗಳ ಅಮಾನತು ಆದೇಶ ವಾಪಸ್; ಸಿದ್ದರಾಮಯ್ಯ ಕಿಡಿ