Site icon Vistara News

Kittur Utsav | ಕಿತ್ತೂರು ಉತ್ಸವಕ್ಕೆ ಅದ್ಧೂರಿ ಚಾಲನೆ; ಗಮನ ಸೆಳೆದ ಮೆರವಣಿಗೆ, ಕಲಾತಂಡಗಳು

Kittur Utsav

ಬೆಳಗಾವಿ: ಜಿಲ್ಲೆಯ ಕಿತ್ತೂರಿನಲ್ಲಿ ಮೊದಲ ಬಾರಿಗೆ ಹಮ್ಮಿಕೊಂಡಿರುವ ರಾಜ್ಯಮಟ್ಟದ ಕಿತ್ತೂರು ಉತ್ಸವದಲ್ಲಿ (Kittur Utsav) ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಅಮಟೂರು ಬಾಳಪ್ಪ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಅದ್ಧೂರಿ ಮೆರವಣಿಗೆಗೆ ಸೋಮವಾರ ಚಾಲನೆ ನೀಡಲಾಯಿತು.

ಕಿತ್ತೂರು ವಿಜಯೋತ್ಸವದ ಸವಿನೆನಪಿಗಾಗಿ ಅಕ್ಟೋಬರ್ 2ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದ ವೀರಜ್ಯೋತಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ ಕಿತ್ತೂರಿಗೆ ಆಗಮಿಸಿದ್ದು, ಕಿತ್ತೂರು ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ವೀರಜ್ಯೋತಿಗೆ ಪೂಜೆ ಸಲ್ಲಿಸುವ ಮೂಲಕ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಮಹಾಂತೇಶ ದೊಡ್ಡಗೌಡರ, ಮಹಾಂತೇಶ ಕೌಜಲಗಿ, ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ್ ಅದ್ಧೂರಿ ಸ್ವಾಗತ ಕೋರಿದರು.

ಇದನ್ನೂ ಓದಿ | Modi In Ayodhya | ಅಯೋಧ್ಯೆಯಲ್ಲಿ 15 ಲಕ್ಷ ದೀಪಗಳ ಚಿತ್ತಾರ, ಗಿನ್ನೆಸ್‌ ದಾಖಲೆಗೆ ದೀಪೋತ್ಸವ ಭಾಜನ

ಬಳಿಕ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಅಲ್ಲಿಂದ ನಂದಿ ಧ್ವಜಾರೋಹಣ ಮಾಡಿದ ಬಳಿಕ ವಿವಿಧ ಕಲಾತಂಡಗಳ ಮೆರವಣಿಗೆ, ಜಾನಪದ ಕಲಾವಾಹಿನಿ, ವಸ್ತು ಪ್ರದರ್ಶನ, ಫಲ ಪುಷ್ಪ ಪ್ರದರ್ಶನಕ್ಕೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಚಾಲನೆ ನೀಡಿದರು.

ನವಿಲು ನೃತ್ಯ, ಕೇರಳ ತೆಯಮ್ ನೃತ್ಯ, ಚಂಡಮದ್ದಳೆ, ಪೂಜಾ ಕುಣಿತ, ಪುರವಂತರಿಂದ ವೀರಗಾಸೆ, ಪಟಾಕುಣಿತ, ಚಿಟ್ಟೆಮೇಳ, ಗೊಂಬೆ ಕುಣಿತ, ಝಾಂಜ್ ಪಥಕ ಸೇರಿ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ಜಾನಪದ ಗೀತೆ ಹಾಡುತ್ತಾ ಕಿತ್ತೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಈ ಮೆರವಣಿಗೆಯು ಕಿತ್ತೂರು ಕೋಟೆ ಆವರಣದವರೆಗೆ ನಡೆಯಲಿದೆ.

ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ನಿಧನದ ಹಿನ್ನೆಲೆಯಲ್ಲಿ ಅ.23ರಂದು ಆರಂಭವಾಗಬೇಕಿದ್ದ ಮೂರು ದಿನಗಳ ಕಿತ್ತೂರು ಉತ್ಸವ ಒಂದು ದಿನ ತಡವಾಗಿ ಆರಂಭವಾಗಿದೆ. ವೀರಜ್ಯೋತಿ ಸ್ವಾಗತಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಗೈರಾಗಿದ್ದರು. ಸಂಜೆ 7 ಗಂಟೆಗೆ ಕಿತ್ತೂರು ಉತ್ಸವವನ್ನು ಸಿಎಂ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ.

ಕಿತ್ತೂರು ಉತ್ಸವ ರಾಷ್ಟ್ರೀಯ ಉತ್ಸವವಾಗಬೇಕು: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ
ವೀರ ರಾಣಿ ಕಿತ್ತೂರು ಚೆನ್ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಕಿಡಿ ಹೊತ್ತಿಸಿದ ಪ್ರಥಮ ಮಹಿಳೆ. ಕಿತ್ತೂರು ಉತ್ಸವ ಮೆರವಣಿಗೆಗೆ ಚಾಲನೆ ನೀಡುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಕಿತ್ತೂರು ಉತ್ಸವ ರಾಷ್ಟ್ರೀಯ ಉತ್ಸವವನ್ನಾಗಿ ಆಚರಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಮುಂದಿನ ಸಂಸತ್‌ ಅಧಿವೇಶನದಲ್ಲಿ ಈ ವಿಷಯದ ಬಗ್ಗೆ ಕೇಂದ್ರದ ಗಮನ ಸೆಳೆಯುವುದಾಗಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಹಿಂದಿ ಭಾಷಿಕ ಪ್ರದೇಶದಲ್ಲಿ ಝಾನ್ಸಿರಾಣಿ ಮೊದಲನೇ ಸ್ವಾತಂತ್ರ್ಯ ಹೋರಾಟಗಾರ್ತಿ ಎಂಬ ಪ್ರತೀತಿ ಇದೆ. ಆದರೆ, ಇಡೀ ದೇಶದಲ್ಲಿ ಮೊದಲ ಬಾರಿಗೆ ಸ್ವಾತಂತ್ರ್ಯ ಹೋರಾಟದ ಕಿಡಿ ಹೊತ್ತಿಸಿದ್ದು ಕನ್ನಡದ ರಾಣಿ ಕಿತ್ತೂರು ಚೆನ್ನಮ್ಮ. ಇದನ್ನು ಇತಿಹಾಸದಲ್ಲಿ ಇನ್ನೊಮ್ಮೆ ಸಾಬೀತು ಮಾಡಬೇಕಿದೆ. ಹೀಗಾಗಿ ಕಿತ್ತೂರು ಉತ್ಸವವನ್ನು ರಾಷ್ಟ್ರೀಯ ಉತ್ಸವ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

ಕರ್ನಾಟಕದ ಇತಿಹಾಸ ಜಗತ್ತಿಗೆ ತೋರಿಸುವ ನಿಟ್ಟಿನಲ್ಲಿ ಸೇನಾಪಡೆಗಳಲ್ಲಿ ಕನ್ನಡ ನಾಡಿನ ಸ್ವಾತಂತ್ರ್ಯ ಹೋರಾಟಗಾರರಾದ ಬೆಳವಡಿ ಮಲ್ಲಮ್ಮ, ಕಿತ್ತೂರು ಚೆನ್ನಮ್ಮ ಹೆಸರನ್ನು ಮಹಿಳಾ ಪಡೆ ಅಥವಾ ಬೆಟಾಲಿಯನ್‌ಗೆ ಇಡಬೇಕು. ಈ ನಿಟ್ಟಿನಲ್ಲಿ ಮುಂದಿನ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪ ಮಾಡುವುದಾಗಿ ತಿಳಿಸಿದರು.

ಇದನ್ನೂ ಓದಿ | Modi In Ayodhya | ಅಯೋಧ್ಯೆ ಅಂಗಳದಲ್ಲಿ ದೀಪಗಳ ರಂಗವಲ್ಲಿ, ಸುಂದರ ಫೋಟೊಗಳಿವೆ ಇಲ್ಲಿ…

Exit mobile version