Site icon Vistara News

KMF Nandini | ನಂದಿನಿಗಿದೆ ಪ್ರತ್ಯೇಕ ಅಸ್ತಿತ್ವ; ಶಾ ಹೇಳಿದ್ದೇ ಒಂದು, ಅರ್ಥೈಸಿಕೊಂಡಿದ್ದೇ ಇನ್ನೊಂದು: ಸಿಎಂ ಬೊಮ್ಮಾಯಿ

KMF Nandini

ಬೆಂಗಳೂರು: ಕೆಎಂಎಫ್‌ ಮತ್ತು ಅಮುಲ್‌ ವಿಲೀನದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ. ನಂದಿನಿ (KMF Nandini) ತನ್ನ ಪ್ರತ್ಯೇಕ ಅಸ್ತಿತ್ವವನ್ನು ಸದಾ ಕಾಯ್ದುಕೊಳ್ಳಲಿದೆ. ನಂದಿನಿಯನ್ನು ಅಮುಲ್‌ನೊಂದಿಗೆ ವಿಲೀನ ಮಾಡುತ್ತಾರೆ ಎನ್ನುವುದು ತಪ್ಪು ಕಲ್ಪನೆ. ಯಾರೂ ಊಹೆ ಮಾಡಿ ಟೀಕೆ ಮಾಡಬಾರದು. ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್‌ ಶಾ ಹೇಳಿದ್ದೇ ಒಂದು, ಕೆಲವರು ಅರ್ಥೈಸಿಕೊಂಡಿದ್ದೇ ಒಂದು ಎಂದು ಸಿಎಂ ತಿಳಿಸಿದ್ದಾರೆ.

ಆರ್.ಟಿ.ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಮಾತನಾಡಿರುವುದು ಸ್ಪಷ್ಟವಾಗಿದೆ. ಮಾರುಕಟ್ಟೆಯಲ್ಲಿ ನಂದಿನಿ ಮತ್ತು ಅಮುಲ್ ಪರಸ್ಪರ ತಾಂತ್ರಿಕ ಸಹಕಾರ ಅಗತ್ಯವಿದೆ. ಇವೆರಡೂ ದೊಡ್ಡ ಸಂಸ್ಥೆಗಳಾಗಿದ್ದು, ಪೂರಕವಾಗಿ ಕೆಲಸ ಮಾಡಬೇಕು. ಅದರರ್ಥ ವಿಲೀನಗೊಳಿಸುವುದು ಎಂದಲ್ಲ. ನಂದಿನಿ ಅಸ್ತಿತ್ವ ನೂರಾರು ವರ್ಷ ಶಾಶ್ವತವಾಗಿ ಇರಲಿದೆ ಎಂದರು.

ಒಟ್ಟಾಗಿ ಕೆಲಸ ಮಾಡಿದರೆ ಲಾಭವೆಂದು ಹೇಳಿದ್ದರು ಶಾ
ಕೆಲವು ವಲಯಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದರೆ ಲಾಭವಿದೆ. ನಂದಿನಿ ಅಥವಾ ಅಮುಲ್ ತಾಂತ್ರಿಕವಾಗಿ ಮುಂದಿದ್ದರೆ ವಿನಿಯಮ ಮಾಡಿಕೊಳ್ಳಬಹುದು. ಆಡಳಿತಾತ್ಮಕ ಕ್ರಮಗಳನ್ನು ವಿನಿಮಯ ಮಾಡಿಕೊಳ್ಳಿ ಎಂದು ಅವರು ಹೇಳಿರುವುದು. ಅದಕ್ಕೆ ತಪ್ಪು ಅರ್ಥ ಕಲ್ಪಿಸುವ ಅಥವಾ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ. ನಂದಿನಿ ತನ್ನ ಪ್ರತ್ಯೇಕ ಅಸ್ತಿತ್ವವನ್ನು ಸದಾ ಕಾಯ್ದುಕೊಳ್ಳಲಿದೆ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟೀಕರಣ ನೀಡಿದರು.

ಇದನ್ನೂ ಓದಿ | Siddheshwar Swamiji | ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ? ಜ್ಞಾನಯೋಗಾಶ್ರಮಕ್ಕೆ ಭಕ್ತ ಸಾಗರ

ಮೀಸಲಾತಿ ಸಂವಿಧಾನದ ಚೌಕಟ್ಟಿನಲ್ಲಿ ಇದೆ
ಮೀಸಲಾತಿ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಡಿಕೆಶಿ ಅವರಿಗೆ ಕಷ್ಟವಾಗುತ್ತಿದೆ, ಅದಕ್ಕೆ ವ್ಯಾಖ್ಯಾನ ಮಾಡಲು ಬರುವುದಿಲ್ಲ. ಅಂತಿಮ ವರದಿ ಬಂದಾಗ ಅದಕ್ಕೆ ಸ್ಪಷ್ಟ ರೂಪ ದೊರಕಲಿದೆ. ಸಂವಿಧಾನದ ಚೌಕಟ್ಟಿನಲ್ಲಿ ಸರಿಯಾಗಿರಲಿದೆ ಎಂದರು.

ಯಾವ ಒಕ್ಕೂಟದ ಜತೆಗೂ ವಿಲೀನ ಬೇಡ ಎಂದ ಡಿಕೆಶಿ
ಅಮುಲ್ ಮತ್ತು ಕೆಎಂಎಫ್ ವಿಲೀನದ ಬಗ್ಗೆ ಕೆಪಿಸಿಸಿ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿ, ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಮತ್ತು ಸಿಎಂ ಬೊಮ್ಮಾಯಿ‌ ಅವರು ಈ ಬಗ್ಗೆ ರೆಸಲ್ಯೂಷನ್‌ ಮಾಡಲಿ ನೋಡೋಣ. ಆದರೆ, ಇದು ನಮ್ಮ ರಾಜ್ಯದ ವಿಚಾರ. ನಮ್ಮ ಹಾಲು, ನಮ್ಮ ನೀರು, ನಮ್ಮ ಜನ ನಮ್ಮ ಹಕ್ಕಾಗಿದೆ. ಕನಕಪುರದಲ್ಲಿ ಅಮುಲ್‌ಗಿಂತ ದೊಡ್ಡ ಡೇರಿ ಇದೆ. ಹಾಸನದಲ್ಲೂ ಮಿಲ್ಕ್ ಫೆಡರೇಶನ್ ಚೆನ್ನಾಗಿದೆ. ನಮ್ಮ ಹಾಲು ಒಕ್ಕೂಟ ಲಾಭದಾಯಕವಾಗಿ ನಡೆಯುತ್ತಿದೆ. ರೈತರನ್ನು ಶಕ್ತಿಶಾಲಿಯಾಗಿ‌ ಮಾಡಬೇಕು. ಯಾವ ರಾಜ್ಯದ ಯಾವ ಮಿಲ್ಕ್ ಯುನಿಯನ್ ಜತೆ ವಿಲೀನ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ | Coronavirus | ರೂಪಾಂತರಿ ಭೀತಿ; ಈ ದೇಶಗಳಿಂದ ಬರುವ ಪ್ರಯಾಣಿಕರಿಗೆ 7 ದಿನ ಕಡ್ಡಾಯ ಕ್ವಾರಂಟೈನ್‌

Exit mobile version