ಬೆಂಗಳೂರು: ನಂದಿನಿ ಹಾಲಿನ ಕೇಂದ್ರ, ಚಿಲ್ಲರೆ ಅಂಗಡಿಗಳಲ್ಲಿ ಸಿಗುತ್ತಿದ್ದ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಇಂದಿರಾ ಕ್ಯಾಂಟೀನ್‌ಗಳಲ್ಲೂ ಮಾರಲು ಕೆಎಂಎಫ್ ಚಿಂತನೆ ನಡೆಸಿದೆ. ಈ ಮೂಲಕ ರಾಜಧಾನಿಯಲ್ಲಿ ಮನೆ ಬಾಗಿಲಿಗೆ ಹಾಲು, ಮೊಸರು ಪೂರೈಸಲು ಪ್ಲಾನ್ ಮಾಡಿದ್ದ ಅಮುಲ್ ಡೇರಿಗೆ ಸೆಡ್ಡು ಹೊಡೆಯಲು ಕೆಎಂಎಫ್ ಮುಂದಾಗಿದೆ.
ಹೌದು, ಈ ಹಿಂದಿನ ಸರ್ಕಾರದಲ್ಲಿ ಸ್ಥಗಿತಗೊಂಡಿದ್ದ ಇಂದಿರಾ ಕ್ಯಾಂಟೀನ್‌ಗಳನ್ನು ಮರು ಆರಂಭಿಸಲು ಕಾಂಗ್ರೆಸ್ ಸರ್ಕಾರ ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ ಸಿಲಿಕಾನ್ ಸಿಟಿಯಲ್ಲಿ ಇಂದಿರಾ ಕ್ಯಾಂಟೀನ್‌ಗಳು ಮತ್ತಷ್ಟು ಹೈಟೆಕ್ ರೂಪ ಕೊಡಲು ಸರ್ಕಾರ ಮುಂದಾಗಿದೆ. ಊಟದ ಜತೆ ನಂದಿನಿ ಐಸ್ ಕ್ರೀಮ್, ಚಾಕೊಲೆಟ್, ಬಿಸ್ಕೆಟ್, ಹಾಲು, ಮೊಸರು, ತುಪ್ಪ ಕೂಡ ಇಲ್ಲಿ ಸಿಗಲಿದೆ.
ಇದನ್ನೂ ಓದಿ | Education News: 9-10ನೇ ತರಗತಿ ಮಕ್ಕಳಿಗೂ ಸಿಗಲಿದೆ ಕೋಳಿ ಮೊಟ್ಟೆ?
ನಂದಿನಿ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆ ಮೂಲಕ ಅಧಿಕ ಆದಾಯ ಸಂಗ್ರಹ ಮಾಡಲು ಕೆಎಂಎಫ್ ನೂತನ ಅಧ್ಯಕ್ಷ ಭೀಮಾ ನಾಯ್ಕ್ ಚಿಂತನೆ ನಡೆಸಿದ್ದು, ಇದಕ್ಕಾಗಿ ಇಂದಿರಾ ಕ್ಯಾಂಟೀನ್‌ಗಳಲ್ಲಿಯೇ ರಾಜ್ಯ ಸರ್ಕಾರ ಹಾಗೂ ಕೆಎಂಎಫ್ ಸಹಯೋಗದಲ್ಲಿ ನಂದಿನಿ ಮಳಿಗೆ ತೆರೆಯಲಾಗುತ್ತದೆ ಎನ್ನಲಾಗಿದೆ. ಇನ್ನು ಬೆಂಗಳೂರಿನಲ್ಲಿದ್ದ 198 ಇಂದಿರಾ ಕ್ಯಾಂಟೀನ್‌ಗಳ ಸಂಖ್ಯೆಯನ್ನು 250ಕ್ಕೆ ಏರಿಕೆ ಮಾಡಲು ಸಿಎಂ ಸಿದ್ದರಾಮಯ್ಯ ಪ್ಲಾನ್ ರೂಪಿಸಿದ್ದಾರೆ. ಇದು ನಂದಿನಿ ಹಾಲು ಹಾಗೂ ಹಾಲು ಉತ್ಪನ್ನಗಳ ಮಾರಾಟ ಹೆಚ್ಚಳಕ್ಕೂ ಸಹಕಾರಿಯಾಗಲಿದೆ.