Site icon Vistara News

KMF Products: ತುಪ್ಪಾ ಬೇಕು ತುಪ್ಪಾ ಅಂದ್ರು ರಾಜ್ಯ-ಹೊರ ರಾಜ್ಯ ಗ್ರಾಹಕರು; ನಂದಿನಿ ತುಪ್ಪಕ್ಕೆ ಬೇಡಿಕೆ ಇದ್ದರೂ ಆಗದ ಪೂರೈಕೆ

KMF says Nandini milk, milk products will be available in the market as usual, there will be no disruption in supply

KMF says Nandini milk, milk products will be available in the market as usual, there will be no disruption in supply

ಬೆಂಗಳೂರು: ಎಲ್ಲೆಡೆ ಕೆಎಂಎಫ್‌ ಉತ್ಪನ್ನಕ್ಕೆ (KMF Products) ದುಪ್ಪಟ್ಟು ಬೇಡಿಕೆ ಹೆಚ್ಚಿದೆ. ಅದರಲ್ಲೂ ರಾಜ್ಯ ಹಾಗೂ ಹೊರರಾಜ್ಯದ ಮಾರುಕಟ್ಟೆಗಳಲ್ಲಿ ನಂದಿನಿ ತುಪ್ಪ (Nandini Ghee) ಸರಿಯಾಗಿ ಪೂರೈಕೆ ಆಗದೆ ಕೊರತೆ ಎದುರಾಗಿದೆ. ಹೋಟೆಲ್‌ ಉದ್ಯಮ ಸೇರಿದಂತೆ ಸ್ವೀಟ್‌ ಅಂಗಡಿ ಮಾಲೀಕರು ತುಪ್ಪ ಪೂರೈಕೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಬೇಡಿಕೆ ಹೆಚ್ಚಳಕ್ಕೆ ಇನ್ನೊಂದು ಪ್ರಮುಖ ಕಾರಣವೆಂದರೆ ತಪ್ಪದ ಬೆಲೆಯು ಉಳಿದ ಬ್ರ್ಯಾಂಡ್‌ಗಳ ಉತ್ಪನ್ನಗಳಿಗಿಂತ ಕಡಿಮೆ ಇರುವುದಾಗಿದೆ.

ಕಳೆದ ಎರಡು ತಿಂಗಳಿಂದ ನಂದಿನಿ ಬೂತ್‌, ಮಳಿಗೆಗಳಲ್ಲಿ, ದಿನಸಿ ವಸ್ತುಗಳ ಅಂಗಡಿಗಳಲ್ಲಿ ನಂದಿನಿ ತುಪ್ಪಕ್ಕೆ ಅಭಾವ ಉಂಟಾಗಿದೆ. ಬೇಡಿಕೆ ಹೆಚ್ಚಾಗಿರುವುದರಿಂದ ಪೂರೈಕೆ ಮಾಡಲು ಕೆಎಂಎಫ್‌ ಹರಸಾಹಸ ಪಡುವಂತಾಗಿದೆ. ಪ್ರತಿ ವರ್ಷ ಶೇ. 5-10ರಷ್ಟು ತುಪ್ಪಕ್ಕೆ ಬೇಡಿಕೆ ಇರುತ್ತಿತ್ತು. ಆದರೆ, ಈ ವರ್ಷ ಏಕಾಏಕಿ ಶೇ.33ರಷ್ಟು ಏರಿಕೆ ಆಗಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.

ಮಾತ್ರವಲ್ಲದೆ ಹಾಲು ಉತ್ಪಾದನೆ ಕಡಿಮೆ ಆಗಿರುವುದು ಕೂಡ ತುಪ್ಪಕ್ಕೆ ಕೊರತೆ ಆಗಿದೆ. ನಂದಿನಿ ತುಪ್ಪಕ್ಕೆ ರಾಜ್ಯದಲ್ಲಿ ಅಷ್ಟೇ ಅಲ್ಲದೆ ಹೊರ ರಾಜ್ಯಗಳಲ್ಲೂ ಬೇಡಿಕೆ ಇದೆ. ಜತೆಗೆ ಬೇರೆ ಬ್ರ್ಯಾಂಡ್‌ಗಳಿಗೆ ಹೋಲಿಸಿದರೆ ನಂದಿನಿ ತುಪ್ಪ ಕಡಿಮೆ ಬೆಲೆ ಹಾಗೂ ಗುಣಮಟ್ಟ ಇರುವುದರಿಂದ ಬೇಡಿಕೆ ಮಿತಿ ಮೀರಿದೆ.

ತಾಂತ್ರಿಕ ಸಮಸ್ಯೆಯಿಂದ ನಂದಿನಿ ಹಾಲು ಪೂರೈಕೆಯಲ್ಲಿ ವ್ಯತ್ಯಯ

ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ನಂದಿನಿ ಹಾಲು (Nandini Milk) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಫೆ. 3ರಂದು ಬಮುಲ್‌ನ ಇಆರ್‌ಪಿ ಸರ್ವರ್ ಡೌನ್ ಆಗಿದ್ದರಿಂದ ಹಾಲಿನ ಲಾರಿಗಳಿಗೆ ಸಿಸ್ಟಮ್‌ನ ಡೇಟಾ ಪ್ರಕಾರ ಲೋಡ್ ಮಾಡಲು ತೊಂದರೆ ಆಗಿತ್ತು. ಹೀಗಾಗಿ ಸರಿಯಾದ ಸಮಯಕ್ಕೆ ಲೋಡ್ ಆಗದ ಕಾರಣ ಹಾಲಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದೀಗ ಹಾಲು ಉತ್ಪಾದನೆ ಸರಿಯಾಗಿ ಆಗದೆ ನಂದಿನಿ ತುಪ್ಪಕ್ಕೆ ಪೆಟ್ಟು ಬಿದ್ದಂತಾಗಿದೆ.

ಹಿಂದಿ ಹೇರಿಕೆ; ಮೊಸರಿನ ಪ್ಯಾಕೆಟ್‌ ಮೇಲೆ ‘ದಹಿ’ ಮುದ್ರಿಸುವ ಆದೇಶ ವಾಪಸ್

ಕೇಂದ್ರ ಸರ್ಕಾರದ ಹಿಂದಿ ಹೇರಿಕೆ (Hindi Imposition) ಯತ್ನಕ್ಕೆ ಕರ್ನಾಟಕ ಹಾಗೂ ತಮಿಳುನಾಡು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮೊಸರಿನ ಮೇಲೆ ಹಿಂದಿಯ ದಹಿ (Dahi Row) ಎಂಬುದಾಗಿ ಮುದ್ರಿಸಬೇಕು ಎಂಬ ಆದೇಶವನ್ನು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ (FSSAI)ವು ಹಿಂಪಡೆದಿತ್ತು. ಆ ಮೂಲಕ ಕರ್ನಾಟಕ ಹಾಗೂ ತಮಿಳುನಾಡು ಸೇರಿ ಹಲವೆಡೆ ವ್ಯಕ್ತವಾದ ವಿರೋಧಕ್ಕೆ ಕೇಂದ್ರ ಸರ್ಕಾರ ಮಣಿದಿತ್ತು.

ದಹಿ ಹೆಸರಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಮಾರ್ಗಸೂಚಿಗಳನ್ನು ಬದಲಾಯಿಸಿತ್ತು. “ಮೊಸರಿನ ಪ್ಯಾಕೆಟ್‌ ಮೇಲೆ ದಹಿ ಎಂತಲೇ ಬರೆಯಬೇಕು ಎಂದಿಲ್ಲ. ಆಯಾ ರಾಜ್ಯಗಳು ಕರ್ಡ್‌ ಎಂಬುದಾಗಿ ಇಂಗ್ಲಿಷ್‌ನಲ್ಲಿ ಬರೆದು, ಬ್ರ್ಯಾಕೇಟ್‌ನಲ್ಲಿ ಆಯಾ ಸ್ಥಳೀಯ ಭಾಷೆಗಳಲ್ಲಿಯೇ ಮೊಸರು ಎಂಬುದಾಗಿ ಬರೆಯಬಹುದು” ಎಂದು ಹೊಸ ಆದೇಶ ಹೊರಡಿಸಿತ್ತು. ಮೊಸರಿನ ಪ್ಯಾಕೆಟ್‌ಗಳ ಮೇಲೆ ದಹಿ ಎಂಬುದಾಗಿ ಮುದ್ರಿಸಬೇಕು ಎಂದು ಪ್ರಾಧಿಕಾರವು ಕಳೆದ ಜನವರಿ 23ರಂದು ಆದೇಶ ಹೊರಡಿಸಿತ್ತು.

ಕರ್ನಾಟಕ, ತಮಿಳುನಾಡು ವಿರೋಧ

ಕೇಂದ್ರ ಸರ್ಕಾರದ ಈ ಕ್ರಮಕ್ಕೆ ತಮಿಳುನಾಡು ಮತ್ತು ನೆರೆಯ ಕರ್ನಾಟಕದ ಹಾಲು ಉತ್ಪಾದಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಹಿಂದಿ ಪದದ ಬದಲಿಗೆ ಪ್ರಾದೇಶಿಕ ಭಾಷೆಯಲ್ಲಿ ಮೊಸರು ಬಳಸುವುದನ್ನು ಮುಂದುವರಿಸಲಾಗುವುದು ಎಂದು ಹಾಲು ಉತ್ಪಾದಕರು ಎಫ್ಎಸ್ಎಸ್ಐಗೆ ಪತ್ರ ಬರೆದಿದ್ದರು. ಮೊಸರು ಎನ್ನುವುದು ಕರ್ಡ್ ಎನ್ನುವುದು ಯಾವುದೇ ಭಾಷೆಯಲ್ಲಿ ಬಳಸಬಹುದಾದ ಸಾಮಾನ್ಯ ಪದವಾಗಿದೆ. ಆದರೆ, ಮೊಸರಗಿಂತಲೂ ವಿಭಿನ್ನ ರುಚಿ ಮತ್ತು ಸಂರಚನೆಯನ್ನು ಸೂಚಿಸುವುದಕ್ಕೆ ದಹಿ ಪದವನ್ನು ಬಳಸಲಾಗುತ್ತಿದೆ ಎಂದು ಅವರು ತಿಳಿಸಿದ್ದರು.

Exit mobile version