ಬೆಂಗಳೂರು: ನಂದಿನಿ ಬ್ರ್ಯಾಂಡ್ ಹಾಲು ಹಾಗೂ ಹಾಲಿನ ಉತ್ಪನ್ನಗಳು ಎಂದಿನಂತೆ ಮಾರುಕಟ್ಟೆಯಲ್ಲಿ ದೊರೆಯಲಿದೆ. ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಆಗಲ್ಲ. ಕೆಎಂಎಫ್ ಡೇರಿ ಉತ್ಪನ್ನಗಳನ್ನು 9Save Nandini) ಖರೀದಿಸುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದು ಸಾರ್ವಜನಿಕರಲ್ಲಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್) ಮನವಿ ಮಾಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ನಂದಿನಿ ಬ್ರ್ಯಾಂಡ್ ಹಾಲು ಮತ್ತು ಹಾಲಿನ ಉತ್ಪನ್ನಗಳ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳ ಕುರಿತು ಸ್ಪಷ್ಟನೆ ನೀಡಿರುವ ಕೆಎಂಎಫ್, ಹೆಚ್ಚುವರಿಯಾಗಿ ಹಾಲು ಉತ್ಪಾದನೆ, ವ್ಯಾಪಾರ ವೃದ್ಧಿಗಾಗಿ ದೇಶದ ಯಾವುದೇ ಸಹಕಾರ ಸಂಸ್ಥೆ ಅಥವಾ ಹಾಲು ಉತ್ಪಾದನಾ ಮಹಾಮಂಡಳದೊಂದಿಗೆ (ಅಮುಲ್) ಒಡಂಬಡಿಕೆ ಮಾಡಿಕೊಂಡಿಲ್ಲ. ಮಾರುಕಟ್ಟೆಯಲ್ಲಿ ಮಂಡಳಿಯ ಉತ್ಪನ್ನಗಳಲ್ಲಿ ಯಾವುದೇ ರೀತಿಯ ಅಭಾವ ಸೃಷ್ಟಿಯಾಗಿಲ್ಲ ಎಂದು ಮಾಹಿತಿ ನೀಡಿದೆ.
ಗುಣಮಟ್ಟ ಮತ್ತು ಸ್ಪರ್ಧಾತ್ಮಕ ಬೆಲೆಯ ಮೂಲಕವೇ ಮನೆ ಮಾತಾಗಿರುವ ನಂದಿನಿ ಹಾಲು, ಇತರೆ ಹಾಲಿನ ಬ್ರ್ಯಾಂಡ್‌ಗಳಿಗೆ ಪೈಪೋಟಿ ನೀಡುತ್ತಾ ಮಾರುಕಟ್ಟೆಯನ್ನು ವಿಸ್ತರಿಸುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ದೇಶದ ಅನೇಕ ನಗರಗಳಲ್ಲಿ ನಂದಿನಿ ಹಾಲು ಮತ್ತು ಹಾಲನ ಉತ್ಪನ್ನಗಳು ಲಭ್ಯವಾಗುತ್ತಿದೆ. ದೇಶದ 2ನೇ ಅತೀ ದೊಡ್ಡ ಸಹಕಾರ ಹಾಲು ಮಹಾಮಂಡಳಿಯಾದ ಕೆಎಂಎಫ್, 26 ಲಕ್ಷ ಗ್ರಾಮೀಣ ರೈತರಿಂದ ಪ್ರತಿನಿತ್ಯ ಸರಾಸರಿ 85 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸಿ, ಸುಮಾರು 150ಕ್ಕೂ ಹೆಚ್ಚು ವಿವಿಧ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ರಾಜ್ಯದ ಜನತೆಗೆ ಕಳೆದ 4 ದಶಕಗಳಂದ ಒದಗಿಸುತ್ತಿದೆ ಎಂದು ತಿಳಿಸಿದೆ.
ಇದನ್ನೂ ಓದಿ | Nandini vs Amul: ಶುರುವಾಗಿದೆ ಸೇವ್ ನಂದಿನಿ, ಬಾಯ್‌ಕಾಟ್ ಅಮುಲ್ ಅಭಿಯಾನ; ಕನ್ನಡಿಗರು ಗರಂ
ಮಹಾರಾಷ್ಟ್ರದ ಮುಂಬೈ, ಸೊಲ್ಲಾಪುರ, ದೇಶದ ಮಧ್ಯಭಾಗವಾದ ವಿಧರ್ಭ ಪ್ರಾಂತ್ಯ (ನಾಗು) ಹೈದರಾಬಾದ್, ಚೆನ್ನೈ, ಕೇರಳ ಮತ್ತು ಗೋವಾದಲ್ಲಿ ಪ್ರತಿ ನಿತ್ಯ 7 ಲಕ್ಷಕ್ಕೂ ಅಧಿಕ ಲೀಟರ್ ಹಾಲು ಮತ್ತು ಮೊಸರನ್ನು ಸ್ಥಳೀಯವಾಗಿ ಅಲ್ಲಿನ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ನಂದಿನಿ ಬ್ರ್ಯಾಂಡ್ ಅನ್ನು ದೇಶ ವ್ಯಾಪ್ತಿಯಲ್ಲಿ ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಕೆಎಂಎಫ್ ಹಲವಾರು ಯೋಜನೆಯನ್ನು ಹಮ್ಮಿಕೊಂಡಿದೆ. 26 ಲಕ್ಷ ಹೈನುಗಾರ ರೈತರ ಶ್ರಮ, 2 ಲಕ್ಷಕ್ಕೂ ಅಧಿಕ ಕಾರ್ಮಿಕರ ದುಡಿಮೆ, 6 ಕೋಟಿಗೂ ಅಧಿಕ ಗ್ರಾಹಕರ ಹಾರೈಕೆಯಿಂದ ಸಂಸ್ಥೆಯು ದೇಶದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರೋ ಹಾಲು ಉತ್ಪಾದನಾ ಸಂಸ್ಥೆಯಾಗಿ ಬೆಳೆದು ನಿಂತಿದೆ. ಇಂತಹ ಸಂಸ್ಥೆಯ ಬಗ್ಗೆ ಸದ್ಯ ಹರಿದಾಡುತ್ತಿರೋ ಸುದ್ದಿಗಳು ಸುಳ್ಳಾಗಿದ್ದು, ಗ್ರಾಹಕರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದೆ.
ಹಾಲಿನ ಶೇಖರಣೆಯನ್ನು ಮುಂದಿನ ದಿನಗಳಲ್ಲಿ ಪ್ರತಿನಿತ್ಯ 1 ಕೋಟಿಗೂ ಅಧಿಕ ಲೀಟರ್ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ. ಕಳೆದ 5 ವರ್ಷಗಳ ಅವಧಿಯಲ್ಲಿ ಹಾಲಿನ ಸರಾಸರಿ ಶೇಖರಣೆಯಲ್ಲಿ ಶೇ.6 ರಿಂದ 7ರಷ್ಟು ಪ್ರಗತಿಯಿರುತ್ತದೆ. ಮಾರಾಟವು ಶೇ.25 ರಷ್ಟು ಪ್ರಗತಿ ಸಾಧಿಸಿದ್ದು, ಹೊರ ರಾಜ್ಯಗಳಲ್ಲೂ ಮಾರಾಟ ಜಾಲವನ್ನು ವಿಸ್ತರಿಸುತ್ತಾ ಗ್ರಾಹಕರ ಆಯ್ಕೆಯ ನೆಚ್ಚಿನ ಬ್ರ್ಯಾಂಡ್ ಆಗಿದೆ ಎಂದು ಹೇಳಿದೆ.
ಇದನ್ನೂ ಓದಿ | Save Nandini: ಮನೆಮನೆಗೆ ಹಾಲು ಪೂರೈಕೆಗೆ ಅಮುಲ್ ಪ್ಲಾನ್; ಕನ್ನಡಿಗರಿಂದ ನಂದಿನಿ ಉಳಿಸಿ ಅಭಿಯಾನ
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಎಂಎಫ್ ಬಗ್ಗೆ ಕೆಲವು ವದಂತಿಗಳು ಹರಿದಾಡುತ್ತಿದ್ದು, ಕೆಎಂಎಫ್ ಅನ್ನು ಮತ್ತೊಂದು ದೊಡ್ಡ ಸಹಕಾರಿ ಸಂಸ್ಥೆಯೊಂದಿಗೆ (ಅಮುಲ್) ವಿಲೀನ ಮಾಡಲಾಗುತ್ತದೆ. ನಂದಿನಿ ಬ್ರ್ಯಾಂಡ್ ಅನ್ನು ಮತ್ತೊಂದು ಸಹಕಾರಿ ಸಂಸ್ಥೆಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಮುಂದೆ ಮಾರುಕಟ್ಟೆಯಲ್ಲಿ ನಂದಿನಿ ಹಾಲು ಲಭ್ಯವಾಗುವುದಿಲ್ಲ ಎಂಬ ಬಗ್ಗೆ ಸಾಕಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಇವೆಲ್ಲವೂ ಸತ್ಯಕ್ಕೆ ದೂರವಾಗಿದ್ದು ಮತ್ತು ಅಂತಹ ಯಾವುದೇ ಬೆಳವಣಿಗೆಗಳು ಕೆಎಂಎಫ್‌ನಲ್ಲಿ ನಡೆದಿರುವುದಿಲ್ಲವೆಂದು ಕೆಎಂಎಫ್ ಸ್ಪಷ್ಟನೆ ನೀಡಿದೆ.