Site icon Vistara News

Surathkal Murder | ಸುರತ್ಕಲ್‌ನ ಕಾಟಿಪಳ್ಳದಲ್ಲಿ ಚಾಕು ಇರಿತದಿಂದ ವ್ಯಕ್ತಿ ಸಾವು; ನಗರದಲ್ಲಿ ಉದ್ವಿಗ್ನ ವಾತಾವರಣ

Surathkal Murder

ಮಂಗಳೂರು: ನಗರ ಹೊರವಲಯದ ಸುರತ್ಕಲ್‌ನ ಕಾಟಿಪಳ್ಳದ 4ನೇ ಬ್ಲಾಕ್‌ನಲ್ಲಿ ಚಾಕು ಇರಿದಿದ್ದರಿಂದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ (Surathkal Murder). ಲತೀಫಾ ಸ್ಟೋರ್ ಮಾಲೀಕ ಜಲೀಲ್ ಮೃತರು. ಶನಿವಾರ ರಾತ್ರಿ ದುಷ್ಕರ್ಮಿಗಳು ಚಾಕು ಇರಿದಿದ್ದರಿಂದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಗಾಯಾಳುವನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿ ಕಾಟಿಪಳ್ಳದ ನೈತಂಗಡಿ ರಸ್ತೆಯಲ್ಲಿ ಅಂಗಡಿ ಇಟ್ಟುಕೊಂಡಿದ್ದರು. ಸ್ಥಳಕ್ಕೆ ಸುರತ್ಕಲ್ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಚಾಕು ಇರಿಯಲು (Knife stabbing) ಏನು ಕಾರಣ ಎಂಬುದು ಪೊಲೀಸ್‌ ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ.

ಸುರತ್ಕಲ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ
ಜಲೀಲ್ ಹತ್ಯೆ ಹಿನ್ನೆಲೆಯಲ್ಲಿ ಸುರತ್ಕಲ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಆಸ್ಪತ್ರೆಗೆ ಪೊಲೀಸ್ ಕಮಿಷನರ್‌ ಶಶಿಕುಮಾರ್‌ ಭೇಟಿ ನೀಡಿದಾಗ ಮೃತರ ಸಂಬಂಧಿಕರು ಮುತ್ತಿಗೆ ಹಾಕಿ, ಅನೈತಿಕ ಗೂಂಡಾಗಿರಿ ನಿಲ್ಲಿಸದೆ ಈಗ ಯಾಕೆ ಬಂದಿರಿ ಎಂದು ಆಕ್ರೋಶ ಹೊರಹಾಕಿದರು.

ಚೂರಿ ಇರಿತದ ಹಿಂದೆ ಹಿಂದುಪರ ಸಂಘಟನೆಗಳ ಕೈವಾಡ ಇದೆ ಎಂದು ಆರೋಪಿಸಿದ ಸಂಬಂಧಿಕರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಕಮಿಷನರ್‌ ಪ್ರತಿಕ್ರಿಯಿಸಿ, ಸದ್ಯ ಕೃತ್ಯ ಯಾರು ನಡೆಸಿದ್ದಾರೆ ಎಂದು ಗೊತ್ತಿಲ್ಲ. ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ನಂತರ ಜಲೀಲ್ ಮೃತ ದೇಹವನ್ನು ಮರಣೊತ್ತರ ಪರೀಕ್ಷೆಗೆ ಮಂಗಳೂರು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಈ ವೇಳೆ ಆಸ್ಪತ್ರೆಗೆ ಆಗಮಿಸಿದ ಶಾಸಕ ಯು.ಟಿ.ಖಾದರ್‌ಗೂ, ಮೃತರ ಸಂಬಂಧಿಕರು ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ | Instagram love story | ಇನ್‌ಸ್ಟಾಗ್ರಾಮ್‌ನಲ್ಲಿ ಪ್ಯಾರ್‌ಗೆ ಆಗ್ಬುಟ್ಟೈತೆ; ಕುಷ್ಟಗಿಯಿಂದ ಕಾಣೆಯಾದವಳು ಹೈದರಾಬಾದ್‌ನಲ್ಲಿ ಪ್ರತ್ಯಕ್ಷ

Exit mobile version