ಕೊಡಗು: ಬಸ್ ನಿರ್ವಾಹಕ ₹3.5 ಲಕ್ಷದ ಚೆಕ್‌ನ್ನು ಮರಳಿ ವಾರಸುದಾರರಿಗೆ ತಲುಪಿಸುವ ಮೂಲಕ ಪ್ರಾಮಾಣಿಕತೆ ಮರೆದಿದ್ದಾರೆ. ಭೈರವ ಎಂಬ ವ್ಯಕ್ತಿ ಈ ಔದಾರ್ಯದ ಕಾರ್ಯವನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಭೈರವ ಅವರ ಈ ಸೌಹಾರ್ದತೆಯ ಕೃತ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದಾರೆ.
ಊಟಿಯಿಂದ ಮಡಿಕೇರಿಗೆ ಪ್ರಯಾಣಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ತಮ್ಮ ಚೀಲವನ್ನು ಮರೆತು ಬಿಟ್ಟಿದ್ದರು. ಆ ಚೀಲದಲ್ಲಿ ಚೆಕ್‌ಬುಕ್ ಸೇರಿದಂತೆ ವಿವಿಧ ದಾಖಲಾತಿಗಳಿತ್ತು. ಈ ವಿಷಯ ಆ ಬಸ್‌ನ ನಿರ್ವಾಹಕ ಭೈರವ ಅವರ ಗಮನಕ್ಕೆ ಬಂದಿತ್ತು.
ಭೈರವ ತಮ್ಮ ಕೆಲಸ ಮುಗಿಸಿ ಹೊರಡುವಾಗ ಆ ಚಿಲವು ಬಸ್ ಸೀಟ್ ಮೇಲೆ ಇರುವುದು ಕಣ್ಣಿಗೆ ಬಿದ್ದಿತ್ತು. ನಂತರ ಆ ಚೀಲವನನು ಪರಿಶೀಲಿಸಿದಾಗ ಅದರಲ್ಲಿ ₹3.5ಲಕ್ಷದ, ಸಹಿ ಮಾಡಿದ ಚೆಕ್, ಚಕ್‌ಬುಕ್ ಸೇರಿದಂತೆ ಆಧಾರ್ ಕಾರ್ಡ್ ದೊರಕಿದೆ. ಭೈರವ ಈ ವಿಷಯವನ್ನು ಕೂಡಲೇ ಮಡಿಕೇರಿ ಘಟಕದ ಸಂಚಾರಿ ನಿಯಂತ್ರಕರಾದ ಹರೀಶ್ ಗಮನಕ್ಕೆ ತಂದಿದ್ದಾರೆ.
ನಂತರ ಆಧಾರ್ ಕಾರ್ಡ್‌ನಲ್ಲಿದ್ದ ಮಾಹಿತಿಯನ್ನು ಗಮನಿಸಿ ಆ ವ್ಯಕ್ತಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆ ಚೀಲದ ವಾರಸುದಾರರಾದ ಜವರೇಗೌಡ ಮೈಸೂರಿನಿಂದ ಮಡಿಕೇರಿಗೆ ಪ್ರಯಾಣ ಬೆಳೆಸಿದ್ದರು. ಹಾಗೂ ತಮ್ಮ ನಿಲ್ದಾಣದಲ್ಲಿ ಇಳಿದು ಹೋಗುವಾಗ ಚೀಲವನ್ನು ಬಸ್‌ನಲ್ಲಿಯೇ ಮರೆತು ಹೋಗಿದ್ದರೆಂದು ತಿಳಿದು ಬಂದಿದೆ.
ಚೀಲವನ್ನು ಹಿಂದಿರುಗಿಸುವ ಉದ್ದೇಶದಿಂದ ನಂತರ ಜವರೇಗೌಡ ಅವರನ್ನು ಮಡಿಕೇರಿಯ ಡಿಪೋಗೆ ಕರೆಸಲಾಯಿತು. ನಂತರ ಅವರು ಕಳೆದುಕೊಂಡಿದ್ದ ಬೆಲೆಬಾಳುವ ದಾಖಲಾತಿಗಳ ಚೀಲವನ್ನು ವಾರಸುದಾರಿಗೆ ಹಸ್ತಾಂತರಿಸುವ ಮೂಲಕ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಮಡಿಕೇರಿ ಘಟಕದ ಸಂಚಾರಿ ನಿಯಂತ್ರಣಧಿಕಾರಿ ಹರೀಶ್, ನಿರ್ವಾಹಕ ಬೈರವ, ಚಾಲಕ ವಿನಯ್ ಹಾಗೂ ಪ್ರಮುಖರಾದ ಜಗದೀಶ್ ಕುಮಾರ್ ಹಾಜರಿದ್ದರು.
ಇದನ್ನೂ ಓದಿ: ಮುಂದಿನ ದಸರಾದೊಳಗೆ ಬೆಂಗಳೂರು- ಮೈಸೂರು ದಶಪಥ ಪೂರ್ಣ: ಪ್ರತಾಪ್‌ಸಿಂಹ