ಕೊಡಗು: ಮಲೆನಾಡು ಭಾಗದಲ್ಲಿ ಕಾಡಾನೆಗಳ (Wild animal attack) ಉಪಟಳ ಹೆಚ್ಚಾಗುತ್ತಿದ್ದು, ಕೊಡಗಿನಲ್ಲಿ ಕಾರಿನ ಮೇಲೆ ಕಾಡಾನೆ ದಾಳಿ (Elephant attack) ನಡೆಸಿದೆ. ಕಾರಿನೊಳಗೆ ಇದ್ದ ಕುಟುಂಬವೊಂದು ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ. ವೀರಾಜಪೇಟೆಯ ಯಶವಂತ್ ಅವರ ಕುಟುಂಬವು ಕಾಡಾನೆ ದಾಳಿಯಿಂದ ಪಾರಾಗಿದ್ದಾರೆ.
ಯಶವಂತ್ ತಮ್ಮ ಕುಟುಂಬದೊಂದಿಗೆ ಟಿ.ಶೆಟ್ಟಿಗೇರಿಯಿಂದ ಇರ್ಪು ಕಡೆ ತೆರಳುತ್ತಿದ್ದಳು. ಈ ವೇಳೆ ಪೊನ್ನಂಪೇಟೆ ತಾಲೂಕಿನ ಕುರ್ಚಿ ಗ್ರಾಮದಲ್ಲಿ ಅಡ್ಡಗಟ್ಟಿದ ಆನೆಯು ಏಕಾಏಕಿ ದಾಳಿ ಮಾಡಿದೆ. ಆನೆ ಹತ್ತಿರ ಬರುತ್ತಿದ್ದಂತೆ ಕಾರಿನಿಂದ ಇಳಿದು ಓಡಿದ್ದಾರೆ. ಈ ವೇಳೆ ಆನೆಯು ಕಾರು ಜಖಂಗೊಳಿಸಿದೆ. ಇಬ್ಬರು ಮಕ್ಕಳು ಸೇರಿದಂತೆ ಕಾರಿನಲ್ಲಿದ್ದ ನಾಲ್ವರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಕಾಡಾನೆ ಹಾವಳಿಗೆ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಪ್ರತಿನಿತ್ಯ ಗ್ರಾಮದಲ್ಲಿ ಕಾಡಾನೆಗಳು ಅಡ್ಡಾಡುತ್ತಿದ್ದರೂ ಸೆರೆಹಿಡಿಯದೆ ಸುಮ್ಮನಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ: Wild Animals Attack: ವಿಜಯನಗರ: ನಾಡಿಗೆ ನುಗ್ಗಿದ ಕರಡಿಯನ್ನು ರಾತ್ರೋರಾತ್ರಿ ಕಾಡಿಗೆ ಅಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿ
ರಾಯಚೂರಿನಲ್ಲಿ ಮೂವರ ಮೇಲೆ ದಾಳಿ ಮಾಡಿ ಕಾಲ್ಕಿತ್ತ ಚಿರತೆ
ರಾಯಚೂರು: ಕಾಡುಪ್ರಾಣಿಗಳ ಹಾವಳಿ (Wild Animal Attack) ಹೆಚ್ಚಾಗಿದ್ದು, ಜನ-ಸಾಮಾನ್ಯರು ಆತಂಕದಲ್ಲೇ ಓಡಾಡುವಂತಾಗಿದೆ. ಆಹಾರ ಅರಸಿ ನಾಡಿಗೆ ಕಾಲಿಡುತ್ತಿರುವ ಪ್ರಾಣಿಗಳು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿವೆ. ಜತೆಗೆ ಸಾಕುಪ್ರಾಣಿಗಳನ್ನು ಕೊಂದು ಎತ್ತಿಕೊಂಡು ಹೋಗುತ್ತಿವೆ. ಸದ್ಯ ರಾಯಚೂರಿನ ದೇವದುರ್ಗ ತಾಲ್ಲೂಕಿನ ಕಮದಾಳು ಗ್ರಾಮದಲ್ಲಿ ಮೂವರ ಮೇಲೆ ಚಿರತೆ (Leopard attack) ದಾಳಿ ನಡೆಸಿದೆ.
ಚಿರತೆ ದಾಳಿಯಿಂದಾಗಿ ಮೂವರು ಗಂಭೀರ ಗಾಯಗೊಂಡಿದ್ದಾರೆ. ಮಲ್ಲಣ್ಣ, ರಂಗನಾಥ್, ಹನಮೇಶ ಕಮದಾಳ ಗಾಯಾಳುಗಳು. ಸದ್ಯ ಗಾಯಾಳುಗಳನ್ನು ದೇವದುರ್ಗ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಮೂವರು ಜಮೀನಿಗೆ ತೆರಳುತ್ತಿದ್ದಾಗ, ಹಿಂದಿನಿಂದ ಬಂದ ಚಿರತೆಯು ಮೂವರ ಮೇಲೂ ಎರಗಿ ದಾಳಿ ಮಾಡಿ ಗಾಯಗೊಳಿಸಿದೆ.
ಚಿರತೆ ಪ್ರತ್ಯಕ್ಷವಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ. ಇನ್ನೂ ಸ್ಥಳಕ್ಕೆ ಪೊಲೀಸ್ ಹಾಗೂ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಮದಾಳು,ಯರಮಸಾಳ, ಜೇರಬಂಡಿ, ಗುಂಡಗುರ್ತಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಕೂಡಲೇ ಸೆರೆಹಿಡಿಯುವಂತೆ ಜನರು ಒತ್ತಾಯಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ