Site icon Vistara News

Elephant Death: ಕ್ಯೂಟ್‌ ಆಗಿ ಆಟವಾಡುತ್ತಿದ್ದ ತಬ್ಬಲಿ ಮರಿಯಾನೆಗೆ ಕೊನೆಗೂ ಸಿಗಲಿಲ್ಲ ತಾಯಿ

elephant death in dubare camp

ಕೊಡಗು: ತಾಯಿ ಕಾಡಾನೆಯಿಂದ ಬೇರ್ಪಟ್ಟು ತಬ್ಬಲಿಯಾಗಿದ್ದ ಮರಿಯಾನೆ (Elephant cub) ಕೊನೆಗೂ ತಾಯಿಯನ್ನು ಕಾಣದೆ ಸಾವು (Elephant Death) ಕಂಡಿದೆ. ಕೊಡಗು ಜಿಲ್ಲೆಯ ದುಬಾರೆ (Dubare) ಸಾಕಾನೆ ಶಿಬಿರದಲ್ಲಿ (Elephant camp) ಘಟನೆ ನಡೆದಿದೆ.

ಕೊಡಗಿನ ಕಾಫಿ ತೋಟಕ್ಕೆ ದಾಳಿ ಮಾಡಿದ್ದ ಆನೆ ಹಿಂಡನ್ನು ಓಡಿಸುತ್ತಿದ್ದಾಗ, ಮರಿಯಾನೆ ಅದರ ತಾಯಿಯಿಂದ ಬೇರ್ಪಟ್ಟಿತ್ತು. ತಾಯಿಯಿಂದ ಬೇರ್ಪಟ್ಟು ಅಲೆದಾಡುತ್ತಿದ್ದ ಈ ಆನೆಯನ್ನು ಅದರ ತಾಯಿಯೊಂದಿಗೆ ಸೇರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಸಾಕಷ್ಟು ಪ್ರಯತ್ನ ಪಟ್ಟಿದ್ದರು.

ತಾಯಿಗಾಗಿ ಅಲೆದು ನಿತ್ರಾಣಗೊಂಡಿದ್ದ 5 ತಿಂಗಳ ಮರಿಯಾನೆಯನ್ನು ರಕ್ಷಿಸಿ ದುಬಾರೆ ಶಿಬಿರಕ್ಕೆ ಶಿಫ್ಟ್ ಮಾಡಲಾಗಿತ್ತು. ಗಂಜಿ ಹಾಲು ನೀಡಿ ಆರೈಕೆ ಮಾಡಲು ಯತ್ನಿಸಲಾಗಿತ್ತು. ವನ್ಯಜೀವಿ ವೈದ್ಯ ಡಾ. ಚೆಟ್ಟಿಯಪ್ಪ ಚಿಕಿತ್ಸೆ ನೀಡುತ್ತಿದ್ದರು. ಕಳೆದ ಕೆಲವು ದಿನಗಳಿಂದ ಕೊಂಚ ಚೇತರಿಸಿಕೊಂಡಿದ್ದ ಮರಿ ಆನೆ ಇದಿಗ ದಿಢೀರ್ ಸಾವು ಕಂಡಿದೆ.

ಅರಣ್ಯ ಇಲಾಖೆಯಿಂದ ಮೃತ ಆನೆ ಮರಿಯ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಲಾಗಿದೆ. 25 ದಿನಗಳಿಂದ ಮರಿಯಾನೆ ತಾಯಿಗಾಗಿ ಕಾಡು- ಊರು ಅಲೆದಿತ್ತು. ಎಲ್ಲಿಯೂ ತಾಯಿ ಸಿಗದ ಹಿನ್ನೆಲೆಯಲ್ಲಿ ಒಂಟಿಯಾಗಿದ್ದ ಮರಿ ಆನೆ ಆಹಾರ ಸೇವಿಸುತ್ತಿರಲಿಲ್ಲ ಎನ್ನಲಾಗಿದೆ. ಹೀಗಾಗಿ ರಕ್ಷಣೆಯಾದರೂ ಕೂಡ ಬದುಕುಳಿಯದ ಮರಿ‌ ಆನೆ ದುರಂತ ಅಂತ್ಯ ಕಂಡಿದೆ. ದುಬಾರೆ ಶಿಬಿರದ ಸಿಬ್ಬಂದಿ ಮರಿಯಾನೆಗಾಗಿ ಕಣ್ಣೀರು ಮಿಡಿದಿದ್ದಾರೆ.

ಕುಡಿಯಲು ನೀರು ಸಿಗದೆ ಕಾಡಾನೆಗಳು ಸಾವು

ರಾಮನಗರ: ಕನಕಪುರ ತಾಲೂಕಿನ ಯಲವನತ್ತ ಅರಣ್ಯಪ್ರದೇಶ ಹಾಗೂ ಬೆಟ್ಟಹಳ್ಳಿ ಬೀಟ್‌ನಲ್ಲಿ ಕಾಡಾನೆಗಳು (Elephants Death) ಮೃತಪಟ್ಟಿವೆ. 35 ಹಾಗೂ 14 ವರ್ಷದ ಎರಡು ಕಾಡಾನೆಗಳು ಉಸಿರು ನಿಲ್ಲಿಸಿದೆ. ಬಿಸಿಲಿನ ಬೇಗೆ ತಾಳಲಾರದೆ ಕಾಡಾನೆಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ರಾಮನಗರದ ಕನಕಪುರ ವಲಯದ ಬೆಟ್ಟಹಳ್ಳಿ ಬೀಟ್‌ನಲ್ಲಿ ಘಟನೆ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ 14 ವರ್ಷದ ಒಂಟಿ ಸಲಗ ನಿತ್ರಾಣಗೊಂಡಿತ್ತು. ನಿತ್ರಾಣಗೊಂಡಿದ್ದ ಕಾಡಾನೆಯನ್ನು ಗಮನಿಸಿದ ಅರಣ್ಯ ಸಿಬ್ಬಂದಿ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸಿದ್ದರು. ಆದರೆ ಇದೀಗ ಕಾಡಂಚಿನಲ್ಲಿ ಕೊನೆಯುಸಿರೆಳೆದಿದೆ.

ಸ್ಥಳಕ್ಕೆ ಡಿಎಫ್‌ಓ ರಾಮಕೃಷ್ಣಪ್ಪ, ಕನಕಪುರ ಎಸಿಎಫ್ ಗಣೇಶ್ ಹಾಗು ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಕಾಡಾನೆ ಸಾವಿನ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ.

ಕಾಡಿನಲ್ಲಿ ಕುಡಿಯಲು ನೀರು ಸಿಗದೆ ಪರದಾಡಿ ನಿತ್ರಾಣಗೊಂಡು ಮೃತಪಟ್ಟಿರುವ ಶಂಕೆ ಇದೆ. 14 ವರ್ಷದ ಕಾಡಾನೆ ಕಳೆದ ಮೂರು ದಿನಗಳ ಹಿಂದೆ ನಿತ್ರಾಣಗೊಂಡಿತ್ತು. ಇದೀಗ ನಿತ್ರಾಣಗೊಂಡಿದ್ದ ಕಾಡಾನೆ ಸೇರಿ ಮತ್ತೊಂದು 35 ವರ್ಷದ ಕಾಡಾನೆಯೂ ಮೃತಪಟ್ಟಿದೆ. ಕನಕಪುರ -ತಮಿಳುನಾಡು ಗಡಿಭಾಗ ಯಲವನತ್ತ ಕಾಡಂಚಿನಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: Elephant Attack: ವಾಕಿಂಗ್‌ ಹೋಗುತ್ತಿದ್ದ ವ್ಯಕ್ತಿ ಮೇಲೆರಗಿ ಕೊಂದುಹಾಕಿದ ಒಂಟಿ ಸಲಗ

Exit mobile version