Site icon Vistara News

ಗನ್ ಹಿಡಿಯೋದು ನಮ್ಮ ಜನ್ಮಸಿದ್ಧ ಹಕ್ಕು: ಅದನ್ನ ಕೇಳೋಕೆ ಸಿದ್ದರಾಮಯ್ಯ ಯಾರು ಎಂದ ಕೆ. ಜಿ. ಭೋಪಯ್ಯ

ಕೊಡಗು: ಗನ್ ಹಿಡಿಯೋದು ನಮ್ಮ ಜನ್ಮ ಸಿದ್ದ ಹಕ್ಕು, ಅದನ್ನ ಕೇಳೋಕೆ ಇವನ್ಯಾರು ಸಿದ್ದರಾಮಯ್ಯ?
ಹೀಗೆ ಏಕವಚನದಲ್ಲೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಸ್ಪೀಕರ್‌ ಕೆ.ಜಿ. ಭೋಪಯ್ಯ ಪ್ರಶ್ನೆ ಹಾಕಿದ್ದಾರೆ. ಕೊಡಗಿನ ಶಾಲೆಯಲ್ಲಿ ಬಜರಂಗದಳದ ವತಿಯಿಂದ ತ್ರಿಶೂಲ ದೀಕ್ಷೆ, ಶಸ್ತ್ರಾಸ್ತ್ರ ತರಬೇತಿ ಪ್ರಕರಣ ಕುರಿತ ಸಿದ್ದರಾಮಯ್ಯ ಹೇಳಿಕೆಗೆ ಮಡಿಕೇರಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಸ್ರ್ತಾಸ್ತ್ರ ತರಬೇತಿ ಕುರಿತು ಸೋಮವಾರ ಟ್ವೀಟ್‌ ಮಾಡಿದ್ದ ಸಿದ್ದರಾಮಯ್ಯ, ಈ ಪ್ರಶಿಕ್ಷಣ ವರ್ಗ ಕಾನೂನಿಗೆ ವಿರುದ್ಧವಾದದ್ದು. ನಮ್ಮ ರಾಜ್ಯದಲ್ಲಿ ಗೃಹ ಸಚಿವ, ಶಿಕ್ಷಣ ಸಚಿವರು ಇದ್ದಾರೆಯೇ ಎಂದು ಪ್ರಶ್ನಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಭೋಪಯ್ಯ, ಆರ್‌ಎಸ್ಎಸ್ ಶಿಬಿರದಲ್ಲಿ ಶಾಸಕರು ಭಾಗವಹಿಸಬಾರದು ಅಂತ ಕಾನೂನಿದ್ಯಾ? ನಮ್ಮ ಪರಿವಾರದ ಕಾರ್ಯಕ್ರಮ ನಡೆಯುವಾಗ ಭೇಟಿ ಕೊಡೋದು ನನ್ನ ಕರ್ತವ್ಯ.. ಗನ್ ಹಿಡಿಯೋದು ನಮ್ಮ ಜನ್ಮ ಸಿದ್ಧ ಹಕ್ಕು, ಅದನ್ನ ಕೇಳೋಕೆ ಇವನ್ಯಾರು ಸಿದ್ದರಾಮಯ್ಯ? ಹೀಗೆಂದು ಏಕವಚನದಲ್ಲೇ ತಿರುಗೇಟು ಕೊಟ್ಟಿದ್ದಾರೆ.

ಸಿಧರಾಮಯ್ಯ

ವಿಶ್ವ ಹಿಂದೂ ಪರಿಷತ್, ಬಜರಂಗದಳ ಪ್ರತಿ ವರ್ಷ ಅಭ್ಯಾಸ ವರ್ಗ ಮಾಡುತ್ತಾರೆ. ಈ ವರ್ಷ ಕೊಡಗಿನಲ್ಲಿ ಕಾರ್ಯಕ್ರಮ ಮಾಡಿದ್ದಾರೆ ಅಷ್ಟೇ. ತ್ರಿಶೂಲ ಬ್ಯಾನ್ ಆಗಿದೆಯಾ? ಸಿದ್ದರಾಮಯ್ಯರ ಚರಿತ್ರೆ ಎಲ್ಲರಿಗೂ ಗೊತ್ತಿದೆ. ಸಿದ್ದರಾಮಯ್ಯ ದಿನಚರಿ ಶುರುವಾಗೋದೆ ಅಲ್ಪಸಂಖ್ಯಾತರನ್ನು ಹೇಗೆ ಓಲೈಸಲಿ‌ ಎನ್ನುವುದರಿಂದ. ಸಿದ್ದರಾಮಯ್ಯ ನಮಗೆ ಸಂವಿಧಾನದ ಬದ್ಧತೆ ಬಗ್ಗೆ ಹೇಳಿ ಕೊಡುವ ಅಗತ್ಯ ಇಲ್ಲ ಎಂದು ಭೋಪಯ್ಯ ಹೇಳಿದ್ದಾರೆ.

ಇವರದೇ ಪಕ್ಷದ ದಲಿತ ಶಾಸಕರೊಬ್ಬರ ಮನೆಗೆ ಡಿ ಜೆ ಹಳ್ಳಿ, ಕೆ ಜೆ ಹಳ್ಳಿಯಲ್ಲಿ ಬೆಂಕಿ ಹಾಕಿದಾಗ ಸಂವಿಧಾನ ಎಲ್ಲೋಗಿತ್ತು? ಹುಬ್ಬಳ್ಳಿಯಲ್ಲಿ ಪೊಲೀಸ್‌ ಠಾಣೆ ಮೇಲೆ‌ ದಾಳಿ ಮಾಡಿದಾಗ ಸಂವಿಧಾನ ಇರಲಿಲ್ವಾ..? ಸಿದ್ದರಾಮಯ್ಯ ಸಂವಿಧಾನವನ್ನ ಮೊದಲು ಸರಿಯಾಗಿ ಓದಬೇಕು ಎಂದು ಭೋಪಯ್ಯ ಸಲಹೆ ನೀಡಿದ್ದಾರೆ.

ಏರ್ ಗನ್ ಬಳಸಲು ಲೈಸೆನ್ಸ್ ಬೇಕಿಲ್ಲ. ಸೆಲ್ಫ್ ಡಿಫೆನ್ಸ್ ಬೇಕಲ್ವಾ? ಶಾಲೆಯಲ್ಲಿ ಅಭ್ಯಾಸ ಮಾಡಿದ್ದಾರೆ ಹೌದು, ಆದರೆ ಅದು ಖಾಸಗಿ ಶಾಲೆ. ಸುಮ್ಮನೆ ಸಿದ್ದರಾಮಯ್ಯ ಬಾಯಿಗೆ ಬಂದಂಗೆ ಮಾತಾಡಿದ್ರೆ ಚೆನ್ನಾಗಿರಲ್ಲ, ನಮಗೂ ಮಾತಾಡೋಕೆ ಬರುತ್ತೆ. ಹಿಂದೂ ಸಮಾಜದ ರಕ್ಷಣೆಗೆ ಯುವಕರು ಅಭ್ಯಾಸ ಮಾಡಿದ್ದಾರೆ. ಅದರಲ್ಲಿ ತಪ್ಪೇನಿದೆ? ಎಲ್ಲೂ ಕಾನೂನು ಉಲ್ಲಂಘನೆ ಮಾಡಿಲ್ಲ ಎಂದು ಭೋಪಯ್ಯ ಸಮರ್ಥಿಸಿಕೊಂಡಿದ್ದಾರೆ.
ಎಸ್‌ಡಿಪಿಐ ಸಂಘಟನೆಯವರು ಹಾದಿ ಬೀದಿಯಲ್ಲಿ ಹೋಗೋರು, ಅವರಿಗೆಲ್ಲಾ ಪ್ರತಿಕ್ರಿಯೆ ಕೊಡಲಾರೆ. ಎಸ್‌ಡಿಪಿಐ, ಪಿಎಫ್‌ಐ ಈ ದೇಶಕ್ಕೆ ಮಾರಕ. ಅವುಗಳನ್ನ ಬ್ಯಾನ್ ಮಾಡಬೇಕು. ಎಸ್‌ಡಿಪಿಐ ಪ್ರಕರಣ ದಾಖಲು ಮಾಡಿದೆ, ಮಾಡಲಿ. ಎದುರಿಸುವ ಶಕ್ತಿ ನನಗಿದೆ ಎಂದು ಭೋಪಯ್ಯ ಹೇಳಿದ್ದಾರೆ.

ಇದನ್ನೂ ಓದಿ| ಬಜರಂಗದಳ ಶಸ್ತ್ರಾಸ್ತ್ರ ತರಬೇತಿ ಖಂಡಿಸಿ‌ದ ಎಸ್‌ಡಿಪಿಐ

Exit mobile version