ಕೊಡಗು (Kodagu News): ಹೆರೂರು ಬಳಿಯ ಹಾರಂಗಿ ಹಿನ್ನೀರಿನಲ್ಲಿ (Harangi Backwater) ಈಜಲು ಹೋಗಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ನಡೆದಿದೆ. ವಿರಾಜಪೇಟೆ ತಾಲೂಕಿನ ಕೊಳಕೇರಿ ಬಳಿಯ ಕುವಲೆಕ್ಕಾಡು ಗ್ರಾಮದ ಕುಪ್ಪೋಟು ಹೊಳೆಗೆ ಸ್ನಾನಕ್ಕೆ ಹೋದವರು ನೀರುಪಾಲಾಗಿದ್ದಾರೆ.
ಕಕ್ಕಬ್ಬೆ ಕುಂಜಿಲ ವಾಟೆಕ್ಕಾಡು ಗ್ರಾಮದ ದೇವಯ್ಯ (38) ಮೃತ ದುರ್ದೈವಿ. ಬಿಸಿಲ ಬೇಗೆ ಹಿನ್ನೆಲೆಯಲ್ಲಿ ಅವರು ನೀರಿಗಿಳಿದಿದ್ದರು ಎನ್ನಲಾಗಿದೆ. ಆದರೆ, ಈಜಲಾಗದೆ ಮುಳುಗಿ ಮೃತಪಟ್ಟಿದ್ದಾರೆ. ಇವರು ಕುವಲೆಕ್ಕಾಡು ಗ್ರಾಮದ ಕುಪ್ಪೋಟು ಹೊಳೆಗೆ ಸ್ನಾನಕ್ಕೆ ತೆರಳಿದಾಗ ಘಟನೆ ನಡೆದಿದೆ.
ತಮ್ಮನೊಂದಿಗೆ ತೋಟದ ಕೆಲಸಕ್ಕೆ ತೆರಳಿದ್ದ ದೇವಯ್ಯ ಅವರು ಬಿಸಿಲಿನ ತಾಪದಿಂದ ನದಿಯಲ್ಲಿ ಸ್ನಾನಕ್ಕಿಳಿದಿದ್ದರು. ಈ ವೇಳೆ ಈಜುವಾಗ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ನಾಪೋಕ್ಲು ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಈಜಲು ಹೋದವ ಮೀನಿನ ಬಲೆಗೆ ಸಿಲುಕಿ ಸಾವು!
ಹೆರೂರು ಬಳಿಯ ಹಾರಂಗಿ ಹಿನ್ನೀರಿನಲ್ಲಿ (Harangi Backwater) ಏಪ್ರಿಲ್ 6ರಂದು ಈಜಲು ತೆರಳಿದ ವ್ಯಕ್ತಿ ನೀರು (Drowned in water) ಪಾಲಾಗಿದ್ದರು. ಬಾಳುಗೋಡು ನಿವಾಸಿ ಬಾಲು (40) ಮೃತ ದುರ್ದೈವಿ. ಬಾಲು ಸಂಬಂಧಿಕರ ಮನೆಗೆ ಬಂದಿದ್ದರು. ಜಾನುವಾರುಗಳಿಗೆ ನೀರು ಕೊಟ್ಟು ನದಿಯತ್ತ ತೆರಳಿದ ಇವರು, ಬಿಸಿಲ ಬೇಗೆಗೆ ಬೇಸತ್ತು ನೀರಿಗಿಳಿದು ಈಜಲು ಮುಂದಾಗಿದ್ದರು ಎನ್ನಲಾಗಿದೆ. ಆದರೆ, ಈ ವೇಳೆ ಕಾಲಿಗೆ ಮೀನಿನ ಬಲೆ ಸಿಲುಕಿ ನಿರಿನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ.
ಹಾರಂಗಿ ಹಿನ್ನೀರಿನಲ್ಲಿ ಕೆಲವರು ಮೀನು ಹಿಡಿಯಲು ಬಲೆಗಳನ್ನು ಹಾಕಿಡುತ್ತಿದ್ದಾರೆ. ಆದರೆ, ಈ ಬಗ್ಗೆ ಅರಿವು ಇಲ್ಲದ ಬಾಲು ನೀರಿಗೆ ಈಜಲು ಇಳಿದಿದ್ದರಿಂದ ಕಾಲಿಗೆ ಬಲೆ ಸಿಲುಕಿದೆ. ಹೀಗಾಗಿ ಅವರಿಗೆ ಕಾಲನ್ನು ಬಡಿಯಲಾಗದೆ ನೀರಿನೊಳಗೆ ಮುಳುಗಿದ್ದಾರೆ. ಮೃತದೇಹವನ್ನು ಸ್ಥಳೀಯರು ಹೊರತೆಗೆದಿದ್ದಾರೆ. ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.
Murder case : ಹಣ ದೋಚಲು ಸ್ನೇಹಿತನ ಹೆಣ ಬೀಳಿಸಿದ ಹಂತಕ
ದೇವನಹಳ್ಳಿ: ಹಣಕ್ಕಾಗಿ ಜತೆಗೆ ಇದ್ದವನ ಹೆಣ ಬೀಳಿಸಿ ಪರಾರಿ ಆಗಿದ್ದ ಸೆಕ್ಯುರಿಟಿಯನ್ನು ಚಿಕ್ಕಜಾಲ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ತ್ರಿಪುರಾ ಮೂಲದ ಸುಮನ್ ದಾಸ್ ಬಂಧಿತ ಆರೋಪಿಯಾಗಿದ್ದಾನೆ.
ಕಳೆದ ಫೆಬ್ರವರಿ 22ರಂದು ಬೆಂಗಳೂರು ಉತ್ತರ ತಾಲೂಕಿನ ತರಬನಹಳ್ಳಿ ಬಳಿ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದ ರಾಜು ರಾವತ್ ಎಂಬಾತನ ಶವ ಬೆಂಗಳೂರು ಉತ್ತರ ತರಬನಹಳ್ಳಿ ಬಳಿಯ ಓಲ್ಡ್ ಬೆಂಗಳೂರು ವಿಲಸ್ ಬಳಿ ಪತ್ತೆಯಾಗಿತ್ತು. ಉತ್ತರಾಖಂಡ ಮೂಲದ ರಾಜು ರಾವತ್ (49) ತಲೆಗೆ ಪೆಟ್ಟು ಬಿದ್ದ ರೀತಿಯಲ್ಲಿ ಶವವು ರಸ್ತೆ ಬದಿಯಲ್ಲಿ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಕುಡಿದು ಹಳ್ಳಕ್ಕೆ ಬಿದ್ದ ಕಾರಣಕ್ಕೆ ತಲೆಗೆ ಪೆಟ್ಟಾಗಿ ಮೃತಪಟ್ಟಿರಬಹುದೆಂದು ಪೊಲೀಸರು ಅಂದಾಜಿಸಿದ್ದರು.
ಆದರೆ, ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡ ಚಿಕ್ಕಜಾಲ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದರು. ನಂತರ ಬಂದ ವರದಿಯಲ್ಲಿ ಇದು ಆಕಸ್ಮಿಕವಲ್ಲ, ಬದಲಿಗೆ ಹಲ್ಲೆಯಿಂದಲೇ ರಾಜು ರಾವತ್ ಮೃತಪಟ್ಟಿದ್ದಾಗಿ ಗೊತ್ತಾಗಿತ್ತು.
ಇದನ್ನೂ ಓದಿ: Assault Case : ದೇವಸ್ಥಾನದಲ್ಲಿ ಸೌಂಡ್ ಕಮ್ಮಿ ಮಾಡಿ ಎಂದಿದ್ದಕ್ಕೆ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮೇಲೆ ಮಾರಣಾಂತಿಕ ಹಲ್ಲೆ
ಈ ಸಂಬಂಧ ತನಿಖೆಗಿಳಿದ ಪೊಲೀಸರು ರಾಜು ರಾವತ್ ಹತ್ಯೆಕೋರನ ಬೆನ್ನು ಬಿದ್ದಿದ್ದರು. ಆ ವೇಳೆ ಸುಮನ್ ದಾಸ್ ಬಗ್ಗೆ ಅನುಮಾನ ಮೂಡಿದೆ. ಆತನನ್ನು ವಿಚಾರಣೆಗೊಳಪಡಿಸಿದಾಗ ಈತನೇ ಆರೋಪಿ ಎಂಬುದು ತಿಳಿದು ಬಂದಿತ್ತು. ರಾಜು ರಾವತ್ ಹಾಗೂ ಸುಮನ್ ದಾಸ್ ಒಂದೇ ಕಡೆ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದರು. ಇಬ್ಬರ ನಡುವೆಯೂ ಒಳ್ಳೆಯ ಗೆಳೆತನವಿತ್ತು. ಒಮ್ಮೆ ರಾಜು ರಾವತ್ ಬ್ಯಾಂಕ್ ಅಕೌಂಟ್ ಚೆಕ್ ಮಾಡುವಾಗ ಹಣ ಇರುವುದನ್ನು ಸುಮನ್ ದಾಸ್ ನೋಡಿಕೊಂಡಿದ್ದ.
ರಾಜು ಬಳಿ ಇದ್ದ ಹಣ ಕದಿಯಲು ಸುಮನ್ ದಾಸ್ ಸಂಚು ರೂಪಿಸಿದ್ದ. ಅದ್ಹೇಗೋ ರಾಜುವಿನ ಎಟಿಎಂ ಪಿನ್ ನಂಬರ್ ತಿಳಿದುಕೊಂಡಿದ್ದ, ಸುಮನ್ ಎಟಿಎಂ ಕಾರ್ಡ್ ಎಗರಿಸಲು ಯೋಜಿಸಿದ್ದ. ಅದರಂತೆ ರಾಜು ಫೆ.22ರ ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುವಾಗ, ಹಿಂಬಾಲಿಸಿ ಬಂದ ಸುಮನ್, ದೊಣ್ಣೆಯಿಂದ ರಾಜುವಿಗೆ ಬಲವಾಗಿ ಹೊಡೆದಿದ್ದ. ಕುಸಿದು ಬಿದ್ದ ರಾಜು ಸ್ಥಳದಲ್ಲೇ ಮೃತಪಟ್ಟಿದ್ದ.
ನಂತರ ಈತನ ಬಳಿಯಿದ್ದ ಎಟಿಎಂ ಕಾರ್ಡ್ ದೋಚಿ ಸುಮನ್ ದಾಸ್ ಅಲ್ಲಿಂದ್ದ ಪರಾರಿ ಆಗಿದ್ದ. ಇದೀಗ ಚಿಕ್ಕಜಾಲ ಪೊಲೀಸರು ಆರೋಪಿಯನ್ನು ಹಿಡಿದು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.