ಕೊಡಗು: ನೋವಿನಲ್ಲಿ ನರಳುವಾಗ ಉಪಚರಿಸುವ ಎರಡನೇ ದೇವರು ಅಂದರೆ ಶುಶ್ರೂಷಕಿಯರು (Nursing staff). ಆಸ್ಪತ್ರೆಯಲ್ಲಿ ಡಾಕ್ಟರ್‌ಗಳಿಗಿಂತಲೂ ಹೆಚ್ಚು ಆಪ್ತರಾಗುತ್ತಾರೆ. ಆಂಬ್ಯುಲೆನ್ಸ್‌ನಲ್ಲೇ (108 Ambulance) ಹೆರಿಗೆ ನೋವು ಅನುಭವಿಸಿದ ಹೆಣ್ಮಗಳಿಗೆ ಅಲ್ಲೇ ಹೆರಿಗೆ ಮಾಡಿಸುವ ಮೂಲಕ ಕಷ್ಟ ಕಾಲದಲ್ಲಿ ನೆರವಾಗಿ ತಾಯಿ-ಮಗುವನ್ನು ಬದುಕಿಸಿದ್ದಾರೆ. ಕೊಡಗಿನ (kodagu News) ಸೋಮವಾರಪೇಟೆಯಿಂದ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಹೆರಿಗೆಗೆಂದು ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯುವ ಸಂದರ್ಭ ತಾಯಿ ಮಾರ್ಗ ಮಧ್ಯೆ ಮಗುವಿಗೆ ಜನ್ಮ ನೀಡಿದ್ದಾರೆ. ಸೋಮವಾರಪೇಟೆ ಬಳಿಯ ಬಳಗುಂದ ಗ್ರಾಮದ ಕಾಫಿ ತೋಟವೊಂದರಲ್ಲಿ ಕಾರ್ಮಿಕರಾಗಿರುವ ಅಸ್ಸಾಂ ಮೂಲದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು.
ಹೀಗಾಗಿ ಕುಟುಂಬಸ್ಥರು ಅವರನ್ನು ಸೋಮವಾರಪೇಟೆ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಸೋಮವಾರಪೇಟೆ ಸರಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್ ಹೇಮಂತ್‌ಕುಮಾರ್ ಮತ್ತು ಆಂಬ್ಯುಲೆನ್ಸ್ ಚಾಲಕ ಪ್ರಸನ್ನ ಅವರು, ಮಹಿಳೆಯನ್ನು ಹೆರಿಗೆಗೆಂದು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆದೊಯ್ಯುತ್ತಿದ್ದರು.
ಆದರೆ ಆಸ್ಪತ್ರೆಗೆ ಕರೆತರುವ ದಾರಿಯಲ್ಲೇ ಗರಗಂದೂರು ಗ್ರಾಮದ ಬಳಿ ಹೆರಿಗೆ ನೋವು ಒಮ್ಮಿಂದೊಮ್ಮೆಗೇ ಜೋರಾಯಿತು. ಮಹಿಳೆ ನೋವಿನಿಂದ ನರಳಿದರು. ಬೇರೆ ಯಾರೇ ಆಗಿದ್ದರೂ ಆಸ್ಪತ್ರೆ ಇನ್ನೇನು ಹತ್ತಿರದಲ್ಲಿದೆ. ರಿಸ್ಕ್ ಬೇಡ ಎನ್ನುತ್ತಿದ್ದರೇನೋ. ಆದರೆ, ಸ್ಟಾಫ್ ನರ್ಸ್ ಹೇಮಂತ್‌ಕುಮಾರ್ ಅವರು ಸುಮ್ಮನೆ ಕೂರಲಿಲ್ಲ.
ಕೂಡಲೇ ಹೆರಿಗೆ ಬೇಕಾಗುವ ರೀತಿಯಲ್ಲಿ ಅಲ್ಲೇ ಒತ್ತಡಗಳನ್ನು ಸೃಷ್ಟಿ ಮಾಡಿದರು. ಜತೆಗಿದ್ದವರ ಸಹಕಾರದಿಂದ ಆಗಲೇ ಹೊರಗೆ ಬರಲು ಕಾಯುತ್ತಿದ್ದ ಮಗುವನ್ನು ಅತ್ಯಂತ ಜತನದಿಂದ ಹೊರತೆಗೆದು ಹೆರಿಗೆ ಮಾಡಿಸಿಯೇ ಬಿಟ್ಟರು. ಆಂಬ್ಯುಲೆನ್ಸ್ ವಾಹನವು ಆಸ್ಪತ್ರೆ ತಲುಪುವದಕ್ಕಿಂತ ಮುಂಚೆಯೇ ಅಂಬ್ಯುಲೆನ್ಸ್ ನಲ್ಲಿಯೇ ಹೆರಿಗೆ ಮಾಡಿಸಿದ್ದಾರೆ. ಸದ್ಯ ತಾಯಿ ಮತ್ತು ಮಗು ಆರೋಗ್ಯವಾಗಿದ್ದು, ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ