ಕೊಡಗು: ಮಸೀದಿಗೆ ಹೋಗಿ ಮಹಿಳೆಯೊಬ್ಬರು ನಮಾಜ್ ಮಾಡಿದ್ದಕ್ಕೆ ಇಡೀ ಕುಟುಂಬಕ್ಕೆ ಕಳೆದ 25 ವರ್ಷದಿಂದ ಗ್ರಾಮದಿಂದ ಬಹಿಷ್ಕಾರ ಹಾಕಿದ್ದಾರೆ. ಕೊಡಗಿನ (Kodagu News) ವಿರಾಜಪೇಟೆ ತಾಲೂಕಿನ ಗುಂಡಿಗೆರೆಯಲ್ಲಿ ಈ ಅಮಾನವೀಯ (Inhuman Behaviour) ಘಟನೆ ನಡೆದಿದೆ.
ಕೇರಳದ ಕೋಜಿಕೋಡಿನ ಜುಭೇದಾ ಅವರು 30 ವರ್ಷದ ಹಿಂದೆ ಅಹಮ್ಮದ್ ಎಂಬುವರನ್ನು ವಿವಾಹವಾಗಿದ್ದರು. ಒಮ್ಮೆ ಜುಭೇದಾ ವಿರಾಜಪೇಟೆಯಲ್ಲಿ ಮಸೀದಿಗೆ ಹೋಗಿ ನಮಾಜ್ ಮಾಡಿದ್ದರು. ಇಷ್ಟಕ್ಕೆ ಜುಭೇದಾ ಮತ್ತು ಅಹಮ್ಮದ್ ಕುಟುಂಬಕ್ಕೆ ಗ್ರಾಮದಿಂದಲೇ ಬಹಿಷ್ಕಾರವನ್ನು ಹಾಕಿದ್ದರು.
ಜುಭೇದಾ ಕುಟುಂಬಸ್ಥರು ಗ್ರಾಮದಲ್ಲಿ ಯಾರನ್ನು ಮಾತನಾಡಿಸುವಂತಿಲ್ಲ. ಯಾರ ಮನೆಗೂ ಇವರ ಕುಟುಂಬ ಹೋಗುವಂತಿಲ್ಲ. ಯಾರೂ ಇವರ ಮನೆಗೆ ಬರುವಂತಿಲ್ಲ. ಒಂದು ವೇಳೆ ಯಾರಾದರೂ ಇವರನ್ನು ಮಾತನಾಡಿಸಿದರೆ 5,000 ರೂ. ದಂಡ ಕಟ್ಟಬೇಕು. ಮಾತ್ರವಲ್ಲ ಗ್ರಾಮದಲ್ಲಿರುವ ಅಂಗಡಿಗೆ ಹೋಗಿ ಕನಿಷ್ಠ ಒಂದು ಬೆಂಕಿ ಪೊಟ್ಟಣ ಕೂಡ ತರುವಂತಿಲ್ಲ. ಈ ಕುಟುಂಬ ಕಳೆದ 25 ವರ್ಷಗಳಿಂದ ಈ ಚಿತ್ರಹಿಂಸೆಯನ್ನು ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ: Murder Case : ಅಳಿಯನಿಗೆ ಅನೈತಿಕ ಸಂಬಂಧ; ಬಿಯರ್ ಕುಡಿಸಿ ಚಾಕುವಿನಿಂದ ಇರಿದು ಕೊಂದ ಮಾವ
ಅನಾರೋಗ್ಯದಿಂದ ಮೃತಪಟ್ಟ ಅಹಮ್ಮದ್
ಇದೆಲ್ಲವನ್ನೂ ಸಹಿಸಿಕೊಂಡು ಬಂದಿದ್ದ ಈ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿತ್ತು. ಜುಬೇದಾ ಅವರ ಪತಿ ಅಹಮ್ಮದ್ ನಿನ್ನೆ ಶುಕ್ರವಾರ ಅನಾರೋಗ್ಯದಿಂದ ಮೃತಪಟ್ಟಿದ್ದರು. ಪತಿ ಕಳೆದುಕೊಂಡ ದುಃಖದಲ್ಲಿದ್ದ ಜುಬೇದಾ ಕುಟುಂಬಕ್ಕೆ, ಪತಿ ಅಂತ್ಯಕ್ರಿಯೆಗೆ ಭಾಗವಹಿಸಲು ಗುಂಡಿಗೆರೆ ಶಾಫಿ ಜುಮ್ಮಾ ಮಸೀದಿ ಆಡಳಿತ ಮಂಡಳಿ ಮತ್ತು ಅಧ್ಯಕ್ಷರು ಬಿಟ್ಟಿಲ್ಲ .
ಕಳೆದ 30 ವರ್ಷದಿಂದ ಅಹಮ್ಮದ್ ಅವರು ನಮ್ಮೊಂದಿಗೆ ಇದ್ದರು. ಮೊನ್ನೆ ರಾತ್ರಿ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಹೀಗಾಗಿ ಮಡಿಕೇರಿ ಆಸ್ಪತ್ರೆಗೆ ಕರೆದೊಯ್ದಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ನಮ್ಮ ತಂದೆ ಅಹಮ್ಮದ್ ಮೃತಪಟ್ಟಿದ್ದರು. ಶಾಫಿ ಮಸೀದಿ ಜಮಾಹತ್ ತಂದೆಯ ಅಂತ್ಯಕ್ರಿಯೆಯನ್ನು ಮಾಡಲು ಬಿಟ್ಟಿಲ್ಲ ಎಂದು ಮಗ ರಶೀದ್ ಆರೋಪಿಸಿದ್ದಾರೆ.
ತಂದೆಯವರ ಮೃತದೇಹವನ್ನು ಒತ್ತಾಯ ಪೂರ್ವಕವಾಗಿ ಅಹಮ್ಮದ್ ಅವರ ಹಿರಿಯ ಹೆಂಡತಿ ಮನೆಗೆ ಕೊಂಡೊಯ್ದಿದ್ದಾರೆ. ಹಿರಿ ಹೆಂಡತಿ, ಮಕ್ಕಳಿಂದಲೇ ಅಂತ್ಯಕ್ರಿಯೆ ಮಾಡಿಸಿದ್ದಾರೆ. ಕಿರಿಯ ಹೆಂಡತಿ ಜುಭೇದಾ ಮತ್ತು ಮಕ್ಕಳಿಗೆ ಮೃತದೇಹವನ್ನು ನೋಡಲು ಬಿಡದೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪವಿದೆ.
ಮಸೀದಿಗೆ ಹೋಗಿ ತಂದೆಯ ಶವದ ಮುಂದೆ ಪ್ರಾರ್ಥನೆ ಮಾಡಲು ಹೋದರೆ, ಮಸೀದಿ ಆಡಳಿತ ಮಂಡಳಿ ಅವರು ನಿಮಗೆ ಬಹಿಷ್ಕಾರ ಹಾಕಿದ್ದೇವೆ ನೀವು ಬರುವಂತಿಲ್ಲ ಎಂದು ಬೈದು ಕಳುಹಿಸಿದ್ದಾರೆ. ಇದರಿಂದ ಮನನೊಂದು ಅಲ್ಲಿಂದ ವಾಪಸ್ ಬಂದಿದ್ದೇವೆ. ಗ್ರಾಮದಿಂದ ಬಹಿಷ್ಕಾರ ಹಾಕಿರುವ ಬಗ್ಗೆ ಹಲವು ಬಾರಿ ಪೊಲೀಸ್ ಠಾಣೆಗೆ ಹಾಗೂ ಜಿಲ್ಲಾ ವಕ್ಫ್ ಬೋರ್ಡಿಗೂ ದೂರು ನೀಡಿದ್ದೇವೆ. ಆದರೆ ಯಾರಿಂದಲೂ ಇದುವರೆಗೆ ನ್ಯಾಯ ಸಿಕ್ಕಿಲ್ಲ ಎಂದು ಅಹಮ್ಮದ್ ಅವರ ಮಗ ರಶೀದ್ ತಿಳಿಸಿದ್ದಾರೆ.
ತಂದೆ ಅಂತ್ಯಕ್ರಿಯೆಗೆ ಬಿಡದ ಹಿನ್ನೆಲೆಯಲ್ಲಿ ರಶೀದ್ ಮತ್ತೊಮ್ಮೆ ವಿರಾಜಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹಿರಿಯ ಹೆಂಡತಿ ಮಕ್ಕಳು ಪೂರ್ಣ ಆಸ್ತಿಗಾಗಿ ಈ ರೀತಿ ಮಾಡುತ್ತಿದ್ದಾರೆ. ಮಸೀದಿ ಜಮಾಹತ್ ಮಂಡಳಿಯಲ್ಲಿ ಹಿರಿಯ ಹೆಂಡತಿಯ ಕುಟುಂಬದವರೇ ಇದ್ದಾರೆ. ಹೀಗಾಗಿ ಮಸೀದಿ ಮತ್ತು ಜಮಾಹತ್ ಮೂಲಕ ಗ್ರಾಮದಿಂದ ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನೂ ಅಹಮ್ಮದ್ ಮತ್ತು ರಶೀದ್ ಕಳೆದ ನಾಲ್ಕು ವರ್ಷಗಳ ಹಿಂದೆ 78 ಸಾವಿರ ರೂಪಾಯಿ ದಂಡ ಕಟ್ಟಿ ಮಸೀದಿ ಸದಸ್ಯತ್ವ ಪಡೆದಿದ್ದರು. ಆದರೆ ಎರಡು ವರ್ಷಗಳ ಹಿಂದೆ ಯಾವುದೇ ಮಾಹಿತಿ ನೀಡದೆ ಮಸೀದಿಯ ಸದಸ್ಯತ್ವ ರದ್ದು ಮಾಡಿದ್ದಾರೆ. ಆ ಮೂಲಕ ಶಾಫಿ ಜುಮ್ಮಾ ಮಸೀದಿ ಜಮಾಹತ್ ಮತ್ತೆ ಗ್ರಾಮದಿಂದ ಬಹಿಷ್ಕಾರ ಹಾಕಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ