Site icon Vistara News

‌Road Accident: ರಾತ್ರಿ ಬೈಕ್ ಅಪಘಾತ, ಇಬ್ಬರ ಸಾವು; ಬೆಳಗ್ಗೆವರೆಗೂ ಗೊತ್ತೇ ಆಗಲಿಲ್ಲ

suntikoppa accident

ಮಡಿಕೇರಿ: ಬೈಕ್ ಅಪಘಾತದಲ್ಲಿ (‌Road Accident) ಇಬ್ಬರು ಸ್ಥಳದಲ್ಲೆ ದುರ್ಮರಣ ಹೊಂದಿದ್ದಾರೆ. ಕೊಡಗು ಜಿಲ್ಲೆ ಸುಂಟಿಕೊಪ್ಪ ಸಮೀಪದ ಬಿರ್ಚಿ ವುಡ್ ರೆಸಾರ್ಟ್ ಸಮೀಪದ ಈ ಅವಘಡ ನಡೆದಿದೆ. ರಾತ್ರಿ ಘಟನೆ ನಡೆದಿದ್ದರೂ ನಿರ್ಜನ ಪ್ರದೇಶವಾದ್ದರಿಂದ ಬೆಳಗಿನವರೆಗೂ ಯಾರ ಗಮನಕ್ಕೂ ಬಂದಿರಲಿಲ್ಲ.

ಬೈಕ್‌ ಲೈಟ್ ಕಂಬಕ್ಕೆ ಅಪ್ಪಳಿಸಿದ್ದರಿಂದ ಬೈಕ್‌ನಿಂದ ಚಿಮ್ಮಿಬಿದ್ದ ಸವಾರರು ಸ್ಥಳದಲ್ಲೆ ಪ್ರಾಣ ಚೆಲ್ಲಿದ್ದಾರೆ. ಧಾರಾಕಾರವಾಗಿ ಮಳೆ ಬರುತ್ತಿದ್ದುದರಿಂದ ದಾರಿ ಕಾಣದೆ ಅಥವಾ ಸ್ಕಿಡ್‌ ಆಗಿ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಉದಯ(25) ಹಾಗೂ ಚಂದನ್(26) ಮೃತ ದುರ್ಧೈವಿಗಳು. ಇಬ್ಬರೂ ಸುಂಟಿಕೊಪ್ಪದ ಮದುರಮ ಬಡಾವಣೆ ನಿವಾಸಿಗಳು. ನಿನ್ನೆ ರಾತ್ರಿಯೇ ಇವರು ಕುಶಾಲನಗರದಿಂದ ಸುಂಟಿಕೊಪ್ಪಕ್ಕೆ ಬರುವಾಗ ಅಪಘಾತ ನಡೆದಿದ್ದು, ಮುಂಜಾನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮಳೆಗೆ ಮನೆ ಗೋಡೆ ಕುಸಿದು ವ್ಯಕ್ತಿ ಸಾವು

ಚಿಕ್ಕಮಗಳೂರು: ಭಾರಿ ಮಳೆಯ ಪರಿಣಾಮ ಮನೆ ಗೋಡೆ ಕುಸಿದು ಒಬ್ಬರು ಮೃತಪಟ್ಟ ಘಟನೆ ನಡೆದಿದೆ. ಕಡೂರು ತಾಲೂಕಿನ ಮಚೇರಿ ಕೋಡಿಹಳ್ಳಿ ಗ್ರಾಮದಲ್ಲಿ ಘಟನೆ ಅವಘಡ ನಡೆದಿದೆ. ಗ್ರಾಮದ ಲಚ್ಚ ನಾಯ್ಕ (80) ಮೃತಪಟ್ಟ ವ್ಯಕ್ತಿ.

ಶಿಥಿಲಗೊಂಡ ಮನೆಯ ಗೋಡೆ ಮಳೆಗೆ ಕುಸಿದಿದ್ದು, ಗೋಡೆಯಡಿ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದ ಲಚ್ಚ ನಾಯ್ಕ ಸಾವಿಗೀಡಾಗಿದ್ದಾರೆ. ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ತಾಲೂಕಿನ ಹಲವೆಡೆ ಆಸ್ತಿಪಾಸ್ತಿ ಹಾನಿಯಾಗಿದೆ.

ವಿವಾಹಿತೆ ಪ್ರೇಮಿ ಜತೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ಬೆಂಗಳೂರು: ವಿವಾಹಿತೆಯಾಗಿದ್ದರೂ ಗಂಡನಿಗೆ ಗೊತ್ತಿಲ್ಲದಂತೆ ಬೇರೊಬ್ಬನೊಂದಿಗೆ ಲಿವ್‌ ಇನ್‌ ರಿಲೇಷನ್‌ನಲ್ಲಿದ್ದ ಮಹಿಳೆ ಹಾಗೂ ಆಕೆಯ ಪ್ರೇಮಿ ಇಬ್ಬರೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೌಮಿನಿ ದಾಸ್(20) ಹಾಗೂ ಅಬಿಲ್ ಅಬ್ರಾಹಂ (29) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಕೊತ್ತನೂರಿನ ಅಪಾರ್ಟ್ಮೆಂಟ್ ಒಂದರಲ್ಲಿ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ಬಂಗಾಳದ ಸೌಮಿನಿ ದಾಸ್ ನರ್ಸಿಂಗ್‌ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದಳು. ಈಕೆಗೆ ವಿವಾಹವಾಗಿತ್ತು. ನರ್ಸಿಂಗ್‌ ವೇಳೆ ಪರಿಚಯವಾಗಿದ್ದ ಕೇರಳ ಮೂಲದ ಅಬಿಲ್ ಅಬ್ರಾಹಂ ಎಂಬಾತನ ಜತೆಗೆ ಸಹಜೀವನ ನಡೆಸುತ್ತಿದ್ದರು.

ಮೂರು ತಿಂಗಳ ಹಿಂದಷ್ಟೇ ಊರಿಗೆ ತೆರಳಿದ್ದ ಸೌಮಿನಿ ದಾಸ್, ಗಂಡನ ವಿರುದ್ಧ ದೂರು ಮನೆಯಲ್ಲಿ ದೂರು ನೀಡಿದ್ದಳು. ಮದುವೆಯಾದಾಗಿನಿಂದಲೂ ಆತ ಕಿರುಕುಳ ನೀಡುತ್ತಿರುವುದಾಗಿ ಹೇಳಿದ್ದು, ನಿನ್ನ ಜೊತೆ ನಾನು ಇರುವುದಿಲ್ಲ ಎಂದು ಗಂಡನಿಗೆ ಹೇಳಿದ್ದಳು. ನನ್ನ ತಂಟೆಗೆ ಬರಬೇಡ, ನಾನು ಮತ್ತೆ ಬರುವುದಿಲ್ಲ ಎಂದು ಗಂಡನಿಗೆ ಹೇಳಿ ಬೆಂಗಳೂರಿಗೆ ಬಂದಿದ್ದಳು.

ಪತ್ನಿಯ ನಡೆಯಿಂದ ಅನುಮಾನಗೊಂಡ ಪತಿ ಈ ಬಗ್ಗೆ ಇನ್ನಷ್ಟು ವಿಚಾರಿಸಿದಾಗ ಆಕೆಯ ಲಿವ್ ಇನ್ ರಿಲೇಷನ್‌ಶಿಪ್ ಸಂಗತಿ ತಿಳಿದು ಬಂದಿತ್ತು. ಆತ ಪತ್ನಿಯನ್ನು ತರಾಟೆಗೆ ತೆಗೆದುಕೊಂಡಿದ್ದ. ಇದಾದ ಬಳಿಕ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Murder Case : ಪುತ್ತೂರಿನ ಹುಲಿವೇಷ ತಂಡದ ಮುಖ್ಯಸ್ಥನ ಬರ್ಬರ ಹತ್ಯೆ; ರಸ್ತೆಯಲ್ಲೇ ಅಟ್ಟಾಡಿಸಿ ಕೊಲೆ

Exit mobile version