ಕೊಡಗು: ಕೆಎಸ್ಆರ್‌ಟಿಸಿ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ್ದು, ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಬಾಲಕನ ಸ್ಥಿತಿ ಗಂಭೀರವಾಗಿದೆ. ಕೊಡಗಿನ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮದಲ್ಲಿ ಅಪಘಾತ (Road Accident) ಸಂಭವಿಸಿದೆ.
ಸವಾರ ವೇಣುಗೋಪಾಲ್ ಮೃತ ದುರ್ದೈವಿ. ಸ್ಕೂಟಿಯಲ್ಲಿದ್ದ 11 ವರ್ಷದ ಬಾಲಕನ ಸ್ಥಿತಿ ಗಂಭೀರವಾಗಿದ್ದು, ವಿರಾಜಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಯಾಂಟರ್ ಬ್ರೇಕ್ ಫೇಲ್ಯೂರ್ ಆಗಿ ಸರಣಿ ಅಪಘಾತ
ಕ್ಯಾಂಟರ್ ವಾಹನದ ಬ್ರೇಕ್ ಫೇಲ್ಯೂರ್ ಆಗಿದ್ದರಿಂದ ಸರಣಿ ಅಪಘಾತ ಸಂಭವಿಸಿದೆ. ಬೆಂಗಳೂರಿನ ಮಾಗಡಿ ಮುಖ್ಯ ರಸ್ತೆಯ ಓಲ್ಡ್ ರಿಂಗ್ ರೋಡ್ ಬಳಿ ಘಟನೆ ನಡೆದಿದೆ. ಕ್ಯಾಂಟರ್ ವಾಹನವು ಕಾರು ಮತ್ತು ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಸದ್ಯ ಘಟನೆಯಲ್ಲಿ ಮೂರು ವಾಹನಗಳಿಗೆ ಮಾತ್ರ ಡ್ಯಾಮೇಜ್ ಆಗಿದ್ದು, ಯಾರುಗೂ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Rain News : ಶುರುವಾಯ್ತು ಮಳೆ ಅವಘಡ; ಮಲಗಿದ್ದಾಗ ಚಾವಣಿ ಕುಸಿದು ಮಹಿಳೆ ಸಾವು
ಮೂಡಬಿದ್ರೆಯಲ್ಲಿ ಮಣ್ಣಿನ ಲಾರಿಯ ಬ್ರೇಕ್ ಫೇಲ್
ದಕ್ಷಿಣ ಕನ್ನಡದ ಎಡಪದವು ರಾಮಮಂದಿರದ ಬಳಿ ಮಂಗಳೂರು ಕಡೆಯಿಂದ ಮೂಡಬಿದ್ರೆಗೆ ತೆರಳುತ್ತಿದ್ದ ಲಾರಿಯ ಬ್ರೇಕ್ ಫೇಲ್ ಆಗಿತ್ತು. ಲಾರಿ ನಿಲ್ಲಿಸಲು ಆಗದೆ, ಸುಮಾರು 500 ಮೀಟರ್ ದೂರದವರೆಗೂ ಹೋಗಿ ಮೊದಲಿಗೆ ಎದುರಿಗೆ ಬಂದ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದವರಿಗೆ ಗಾಯವಾಗಿದೆ.
ಬಳಿಕ ಮುಂದೆ ಚಲಿಸಿದ ಲಾರಿ, ಎಣ್ಣೆ ಪೂರೈಕೆ ಮಾಡುತ್ತಿದ್ದ ಪಿಕ್ಅಫ್ ವಾಹನಕ್ಕೆ ಡಿಕ್ಕಿಯಾಗಿತ್ತು. ಪರಿಣಾಮ ಪಿಕ್‌ಅಪ್ ವಾಹನ ಉರುಳಿ ಬಿದ್ದು ಎಣ್ಣೆ ಪ್ಯಾಕೆಟ್ಗಳು ಚೆಲ್ಲಾಪಿಲ್ಲಿಯಾಗಿದ್ದವು. ಎದುರಿನಿಂದ ಬಂದ ಟ್ಯಾಂಕರ್‌ವೊಂದು ಲಾರಿ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿ ಬಿದ್ದಿತ್ತು. ಬಳಿಕ ಎಡಪದವು ಪೇಟೆಯ ಬಳಿ ಬಸ್‌ಗೆ ಡಿಕ್ಕಿ ಹೊಡೆದು ಲಾರಿ ನಿಂತಿತ್ತು. ಮೂಡಬಿದ್ರೆಯಿಂದ ಮಂಗಳೂರಿಗೆ ಬರುತ್ತಿದ್ದ ನಿಶ್ಮತ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು. ಸರಣಿ ಅಪಘಾತದ ನಡುವೆ ಅಗರಿ ಎಂಟರ್‌ರ್ಪ್ರೈಸಸ್ ಎಂಬ ಅಂಗಡಿಯ ಕಟ್ಟಡಕ್ಕೂ ಹಾನಿಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ