ಕೊಡಗು: ವಿಶ್ವಹಿಂದು ಪರಿಷತ್, ಬಜರಂಗದಳದ ವತಿಯಿಂದ ಆಯೋಜಿಸಿದ್ದ ಬಂದೂಕು ತರಬೇತಿ ಹಾಗೂ ತ್ರಿಶೂಲ ದೀಕ್ಷೆ ಕಾರ್ಯಕ್ರಮದ ಕುರಿತು ಸಾಯಿ ಶಂಕರ ವಿದ್ಯಾಸಂಸ್ಥೆ ಇದೇ ಮೊದಲ ಬಾರಿ ಪ್ರತಿಕ್ರಿಯಿಸಿದ್ದು, ತಮ್ಮಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆ ನಡೆದಿಲ್ಲ ಎಂದಿದೆ.
ಪ್ರಶಿಕ್ಷಣ ವರ್ಗದಲ್ಲಿ ಬಂದೂಕು ತರಬೇತಿ ಹಾಗೂ ತ್ರಿಶೂಲ ಅಭ್ಯಾಸದ ಫೋಟೊಗಳು ಭಾರಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿತ್ತು. ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಸಾಯಿ ಶಂಕರ ವಿದ್ಯಾಸಂಸ್ಥೆಯ ವಿಚಾರ ರಾಜಕೀಯ ತಿಕ್ಕಾಟಕ್ಕೂ ಕಾರಣವಾಗಿತ್ತು. ಇಷ್ಟೆಲ್ಲ ನಡೆದರೂ ಶಾಲಾ ಆಡಳಿತ ಮಂಡಳಿ ತುಟಿಕ್ ಪಿಟಿಕ್ ಅಂದಿರಲ್ಲ. ಆದರೆ ಈಗ ಶಾಲಾ ಆಡಳಿತ ಮಂಡಳಿ ಮೌನ ಮುರಿದಿದ್ದು, ವಿವಾದಕ್ಕೆ ಅಂತ್ಯ ಹಾಡಲು ಮುಂದಾಗಿದೆ.
ಇದನ್ನೂ ಓದಿ | ಆಜಾನ್ ಸ್ಥಗಿತಗೊಳಿಸದಿದ್ದರೆ ಹನುಮಾನ್ ಚಾಲೀಸಾ ಪಠಣ: ವಿಶ್ವ ಹಿಂದು ಪರಿಷತ್ ಎಚ್ಚರಿಕೆ
ಶಾಲಾ ಆವಾರಣದಲ್ಲಾಗಲಿ, ಶಾಲಾ ಒಳಭಾಗದಲ್ಲಾಗಲಿ ಎಲ್ಲಿಯೂ ಕಾನೂನು ಬಾಹಿರ ಚಟುವಟಿಕೆಗಳು ನಡೆದಿಲ್ಲ. ತ್ರಿಶೂಲ ಅಭ್ಯಾಸ ಹಾಗೂ ಬಂದೂಕು ತರಬೇತಿ ನಮ್ಮಲ್ಲಿ ನಡೆದಿಲ್ಲ. ಶಾಲೆಯ ಹೆಸರನ್ನು ಹೇಳಿಕೊಂಡು ಬೇಕಾಬಿಟ್ಟಿ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದೆ.
ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಝರು ಗಣಪತಿ ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಮಹತ್ವದ ಮಾಹಿತಿಯೊಂದನ್ನು ಶಾಲೆ ಆಡಳಿತ ಮಂಡಳಿ ಹೊರಹಾಕಿದೆ. ಪ್ರಕರಣದ ಬಳಿಕ ಹೊರ ದೇಶದಿಂದ ಕರೆ ಬಂದಿದ್ದು, ಕರೆಯ ಪರಿಣಾಮ ಮೂವರು ಮುಸ್ಲಿಂ ವಿದ್ಯಾರ್ಥಿಗಳು ಶಾಲೆಯಿಂದ ಟಿಸಿ ಪಡೆದು ಹೋಗಿದ್ದಾರೆ ಎಂದು ತಿಳಿಸಿದೆ.
ಇದು ಸದ್ಯ ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ಹೊರ ದೇಶದಿಂದ ಕರೆ ಮಾಡಿದವರ ತನಿಖೆಗೆ ವಿಶ್ವ ಹಿಂದು ಪರಿಷತ್ ಆಗ್ರಹಿಸಿದೆ. ವಿದೇಶದಿಂದ ಕರೆ ಬಂದಿರುವುದರ ಕುರಿತು ತನಿಖೆ ನಡೆಸಬೇಕು ಎಂದು ವಿಎಚ್‌ಪಿ ಜಿಲ್ಲಾ ಅಧ್ಯಕ್ಷ ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ | ಬಜರಂಗದಳ ಶಸ್ತ್ರಾಸ್ತ್ರ ತರಬೇತಿ ಖಂಡಿಸಿದ ಎಸ್‌ಡಿಪಿಐ