Site icon Vistara News

Self Harming : ಖಾಸಗಿ ಲಾಡ್ಜ್‌ನಲ್ಲಿ ನೇಣು ಬಿಗಿದುಕೊಂಡು ಟೆಕ್ಕಿ ಆತ್ಮಹತ್ಯೆ; ಕಾರಣ ನಿಗೂಢ

Madikeri Suicide Bangalore techie

ಮಡಿಕೇರಿ: ಬೆಂಗಳೂರು ಮೂಲದ ಸಾಫ್ಟ್‌ ವೇರ್‌ ಎಂಜಿನಿಯರ್‌ (Software Engineer) ಒಬ್ಬರು ಮಡಿಕೇರಿಯ ಹೋಟೆಲ್‌ನಲ್ಲಿ (Lodge in Madikeri) ನೇಣು ಬಿಗಿದುಕೊಂಡು ಪ್ರಾಣಬಿಟ್ಟಿದ್ದಾರೆ (Self Harming). ಬೆಂಗಳೂರಿನ ಸಂದೇಶ್ (35) ಅತ್ಮಹತ್ಯೆಗೆ ಶರಣಾದವರು.

ಕಳೆದ 2 ದಿನಗಳಿಂದ ಹೊಟೆಲ್‌ನಲ್ಲಿ ತಂಗಿದ್ದ ಸಂದೇಶ್ ಅವರು ಕಿಟಕಿಯ ಸರಳಿಗೆ ಬಟ್ಟೆಯನ್ನೇ ನೇಣಾಗಿ ಮಾಡಿಕೊಂಡು ಮೃತಪಟ್ಟಿದ್ದಾರೆ. ಮಂಗಳವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದ್ದು, ಕೋಣೆಯಲ್ಲಿ ಡೆತ್‌ ನೋಟ್‌ ಕೂಡಾ ಸಿಕ್ಕಿದೆ. ಅದರಲ್ಲಿ ನನ್ನ ಸಾವಿಗೆ ಯಾರೂ ಕಾರಣರಲ್ಲ, ಎಲ್ಲರಿಗೂ ಗುಡ್‌ ಬೈ, ಯಾರೂ ಬೇಸರ ಮಾಡಬಾರದು ಎಂದು ಬರೆದುಕೊಂಡಿದ್ದಾರೆ ಎಂಬ ಮಾಹಿತಿ ಇದೆ.

ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಯುವಕನ ಮನೆಯವರಿಗೆ ಮಾಹಿತಿ ನೀಡಲಾಗಿದ್ದು, ಶವವನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಮಕ್ಕಳಾಗಲಿಲ್ಲ ಎಂಬ ಬೇಸರದಲ್ಲಿ ಮಹಿಳೆ ಸಾವಿಗೆ ಶರಣು

ಕಲಬುರಗಿ: ಮಕ್ಕಳಾಗಲಿಲ್ಲ ಎಂಬ ಕೊರಗಿನಿಂದ 48 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಶರಣನಗರದಲ್ಲಿ‌ ಘಟನೆ ನಡೆದಿದ್ದು, ಶರಣಮ್ಮ ಶಿವಲಿಂಗಪ್ಪಾ ಖೇಡ್(48) ಅವರು ಬಾವಿಗೆ ಹಾರಿ ಜೀವನವನ್ನು ಅಂತ್ಯ ಮಾಡಿಕೊಂಡಿದ್ದಾರೆ. ಮಕ್ಕಳಾಗಲಿ ಎಂದು ನೂರು ದೇವರಿಗೆ ಹರಕೆ ಹೊತ್ತಿದ್ದ ಅವರ ಯಾವ ಪ್ರಯತ್ನವೂ ಫಲಿಸಿರಲಿಲ್ಲ. ಇದರಿಂದ ಜಿಗುಪ್ಸೆಗೊಂಡು ಅವರು ಪ್ರಾಣತ್ಯಾಗದ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಆಳಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಯಾರೂ ಹೆಣ್ಣು ಕೊಡುತ್ತಿಲ್ಲ ಎಂಬ ಬೇಸರ; ವಿಷ ಸೇವಿಸಿ ಪ್ರಾಣಬಿಟ್ಟ ಯುವಕ

ವಿಜಯನಗರ: ಮದುವೆಯಾಗಲು ಯಾರೂ ಹೆಣ್ಣು ಕೊಡುತ್ತಿಲ್ಲ (No one giving bride) ಎಂಬ ಬೇಸರದಿಂದ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ (Self Harming) ಮಾಡಿಕೊಂಡ ಘಟನೆ ವಿಜಯನಗರ ಜಿಲ್ಲೆಯಲ್ಲಿ (Vijaya Nagara News) ನಡೆದಿದೆ. ಕಳೆದ ಜನವರಿ 5ರಂದೇ ಆತ ವಿಷ ಸೇವಿಸಿದ್ದು, ಜನವರಿ 15ರಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಪ್ರಾಣ ಬಿಟ್ಟಿದ್ದಾನೆ. ಆತ ಮೃತಪಟ್ಟ ಬಳಿಕವಷ್ಟೇ ಆತನ ಸಾವಿನ ನಿಜ ಕಾರಣ ಬೆಳಕಿಗೆ ಬಂದಿದೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ನಿವಾಸಿಯಾಗಿರುವ ಬಿ.ಮಧುಸೂಧನ (26) ಎಂಬಾತನೇ ವಿಷ ಸೇವಿಸಿ ಮೃತಪಟ್ಟ ಯುವಕ. ಮದುವೆ ವಯಸ್ಸಾಗಿದ್ದರೂ ನನಗೆ ಯಾರೂ ಹೆಣ್ಣು ಕೊಡುತ್ತಿಲ್ಲ ಎಂಬ ಬೇಸರದಿಂದ ಇದ್ದ ಆತ ಕೊನೆಗೆ ಜೀವವನ್ನೇ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದ.

Man ends life for not getting bride

ಆತನಿಗೆ ಮದುವೆಗೆ ಹುಡುಗಿ ಸಿಗದೆ ಇರಲು ಅನ್ಯ ಕಾರಣಗಳು ಏನಿದ್ದವೋ ಗೊತ್ತಿಲ್ಲ. ಆದರೆ, ಪ್ರಮುಖವಾಗಿ ಆತನ ತಂದೆ ಮಾನಸಿಕ ಅಸ್ವಸ್ಥರಾಗಿದ್ದು ಒಂದು ಪ್ರಮುಖ ಕಾರಣವಾಗಿದೆ. ಮಾನಸಿಕ ಅಸ್ವಸ್ಥರಾಗಿರುವ ತನ್ನ ತಂದೆಯನ್ನು ನೋಡಿಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೆ ಯಾರೂ ಹೆಣ್ಣು ಕೊಡುತ್ತಿಲ್ಲ ಎಂದು ಆತ ಬೇಸರಿಸಿಕೊಂಡಿದ್ದ.

ಈತನನ್ನು ಮೇಲ್ನೋಟಕ್ಕೆ ನೋಡಿದ ಕೆಲವರು ಹುಡುಗಿ ಕೊಡಲು ಒಪ್ಪಿದ್ದರೂ ಬಳಿಕ ಮನೆಗೆ ಬಂದಾಗ ಅಲ್ಲಿ ತಂದೆಯ ಮಾನಸಿಕ ಅಸ್ವಸ್ಥತೆಯನ್ನು ಕಂಡು ನಿರಾಕರಿಸಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಮಧುಸೂದನ ಗ್ರಾಮದ ಹೊರವಲಯದ ವೇಣಿ ಈರಪ್ಪನ ಮಠದ ಬಳಿ ಹೋಗಿ ವಿಷ ಸೇವಿಸಿದ್ದಾನೆ.

ವಿಷಯ ತಿಳಿದ ತಕ್ಷಣ ಆತನನ್ನು ಗುಡೇಕೋಟೆಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೇ ಸಾವು ಸಂಭವಿಸಿದೆ. ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Road Accident : ಯಮನಂತೆ ಬಂದ ಲಾರಿ; ಬಸ್ಸಿಗೆ ಕಾಯುತ್ತಿದ್ದ ಕಾಲೇಜು ವಿದ್ಯಾರ್ಥಿನಿ ದಾರುಣ ಸಾವು

Exit mobile version