ಕೊಡಗು: ಪ್ರತಿ ವರ್ಷದಂತೆ ಈ ಬಾರಿ ಕೂಡ ಮುಂಗಾರು ಆಗಮನಕ್ಕೂ ಮೊದಲೇ ಜಿಲ್ಲೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್.ಡಿ.ಆರ್.ಎಫ್) ಆಗಮಿಸಿದ್ದು, ಎಂತಹ ಪರಿಸ್ಥಿತಿಯನ್ನಾದರೂ ಎದುರಿಸಲು ಸಿದ್ಧತೆ ಮಾಡಿಕೊಂಡಿದೆ.
ಆಂಧ್ರಪ್ರದೇಶದ ವಿಜಯವಾಡದಿಂದ ಅಗತ್ಯ ಸಲಕರಣೆಗಳೊಂದಿಗೆ ಈ ಪಡೆ ಆಗಮಿಸಿದ್ದು, ಶೀಘ್ರದಲ್ಲಿಯೇ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಲಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಮೂಲಗಳು ತಿಳಿಸಿವೆ.
ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಮಳೆಗಾಲದಲ್ಲಿ ನಿರಂತವಾಗಿ ಒಂದಲ್ಲಾ ಒಂದು ಅವಘಡ ಸಂಭವಿಸುತ್ತಲೇ ಬಂದಿದೆ. ಇದರಿಂದಾಗಿ ಜಿಲ್ಲೆಯ ಜನತೆ ಅಕ್ಷರಶಃ ನಲುಗಿ ಹೋಗಿದ್ದಾರೆ. ಒಂದು ಕಾಲದಲ್ಲಿ ಎಂತ ಮಳೆಯಾದ್ರು ಜಿಲ್ಲೆಯ ಜನತೆ ಭಯಪಡುತ್ತಿರಲಿಲ್ಲ. ಆದರೆ ಈಗ ಒಂದು ಸಣ್ಣ ಮಳೆ ಬಂದ್ರೂ ಸಾಕು ಜೀವವನ್ನೆ ಕೈಯಲ್ಲಿ ಹಿಡಿದುಕೊಂಡು ಜೀವನ ಸಾಗಿಸೋ ದುಸ್ಥಿತಿಯಲ್ಲಿದ್ದಾರೆ. ಹೀಗಾಗಿ ವಿಪತ್ತು ನಿರ್ವಹಣಾ ಪಡೆ ಆಗಮಿಸಿರುವುದು ಜಿಲ್ಲೆಯ ಜನತೆಯಲ್ಲಿ ಒಂದಿಷ್ಟು ಧೈರ್ಯ ಮೂಡಿಸಲಿದೆ.
2018 ರ ಆಗಸ್ಟ್ ನಲ್ಲಿ ಮೊದಲ ಬಾರಿಗೆ ಜಿಲ್ಲೆಯ ಹಲವು ಕಡೆ ಭೂ ಕುಸಿತ ಉಂಟಾಗಿ ಅಪಾರ ಹಾನಿ ಸಂಭವಿಸಿತ್ತು. ನಂತರ ಜಿಲ್ಲೆಯಲ್ಲಿ ಸತತ ಮೂರು ವರ್ಷಗಳು ಕೂಡ ಪ್ರಕೃತಿ ವಿಕೋಪದಿಂದಾಗಿ ಜಲ ಪ್ರಳಯ, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಮುಂಗಾರು ಎಂದೊಡನೆ ಇದೆಲ್ಲವೂ ನೆನನಪಿಗೆ ಬರುತ್ತದೆ. ಈ ಅನುಭವದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೂಡ ಮುಂದೆ ಉದ್ಭವಿಸುವ ಪರಿಸ್ಥಿತಿಯನ್ನು ಎದುರಿಸಲು ಈ ಪಡೆಯೊಂದಿಗೆ ಸಿದ್ಧತೆ ನಡೆಸುತ್ತಿದೆ.
ಎನ್.ಡಿ.ಆರ್.ಎಫ್ ತಂಡದಲ್ಲಿ 24 ಮಂದಿ ಪರಿಣಿತರಿದ್ದು, ಸಾಕಷ್ಟು ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ವಹಿಸಿದ ಅನುಭವ ಅವರಿಗಿದೆ. ಕಳೆದ ಬಾರಿ ಕೂಡ ಜಿಲ್ಲೆಗೆ ಆಗಮಿಸಿದ್ದ ಕೆಲ ಪರಿಣಿತರು ಈ ಬಾರಿ ಕೂಡ ಬಂದಿದ್ದಾರೆ.
ಪ್ರವಾಹ ಪರಿಸ್ಥಿತಿ ಎದುರಾದಾಗ ಜನರನ್ನ ರಕ್ಷಿಸಲು ಬೇಕಾದ, ಓಪಿ, ಬೋಟ್‌ಗಳು, ಸ್ಟ್ರಚರ್‌ಗಳು ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಪಡೆಯು ತಂದಿದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ಈ ಪಡೆ ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಲಿದೆ.
ಜಿಲ್ಲಾಡಳಿತ ಈಗಾಗಲೆ ಕೆಲವೊಂದು ಪ್ರವಾಹ ಪ್ರವಾಹ ಪೀಡಿತ ಪ್ರದೇಶಗಳನ್ನ ಗುರುತು ಮಾಡಿದೆ. ಒಟ್ಟಾರೆಯಾಗಿ ಜಿಲ್ಲೆಯ 44 ಪ್ರದೇಶಗಳನ್ನು ಪ್ರವಾಹ ಪೀಡಿತ ಹಾಗೂ 43 ಪ್ರದೇಶಗಳನ್ನು ಭೂಕುಸಿತದ ಅಪಾಯವಿರುವ ಪ್ರದೇಶಗಳೆಂದು ಗುರುತಿಸಲಾಗಿದ್ದು, ಅಂತಹ ಸೂಕ್ಷ್ಮ ಪ್ರದೇಶಗಳಿಗೆ ಎನ್‌ಡಿಆರ್‌ಎಫ್ ತಂಡವು ತೆರಳಿ ಪರಿಶೀಲನೆ ನಡೆಸಲಿದೆ.
ಮಡಿಕೇರಿಯ ಮೈತ್ರಿ ಹಾಲ್‌ನಲ್ಲಿ ಈ ಪಡೆಗೆ ಉಳಿದುಕೊಳ್ಳಲು ಮತ್ತು ಸಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಮಳೆಗಾಲ ಮುಗಿಯುವವರೆಗೂ ಹಾಗೂ ಜಿಲ್ಲಾಡಳಿತದ ಆದೇಶದವರೆಗೂ ಜಿಲ್ಲೆಯಲ್ಲಿ ಇರುವುದಾಗಿ ತಂಡದ ಸದಸ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಎಲ್ಲ ಕಡೆ ಬಿಸಿಲು, ಆ ಮರದ ಕೆಳಗೆ ಮಾತ್ರ ಮಳೆ ಹನಿ: ಮಡಿಕೇರಿಯಲ್ಲಿ ಏನೀ ವಿಸ್ಮಯ?