ಮಡಿಕೇರಿ : ಒಂದು ಬಿನ್ನಹ ಹುಲಿಯೆ ಕೇಳು/ ಕಂದನಿರುವನು ದೊಡ್ಡಿಯೊಳಗೆ/ ಒಂದು ನಿಮಿಷದಿ ಮೊಲೆಯ ಕೊಟ್ಟು/ ಬಂದು ಸೇರುವೆನಿಲ್ಲಿಗೆ : ಚಂಡ ವ್ಯಾಘ್ರನ ಬಾಯಿಗೆ ಸಿಲುಕಿದ ಹೊತ್ತಿನಲ್ಲಿ ಪುಣ್ಯಕೋಟಿ ಹೇಳುವ ಈ ಮಾತನ್ನು ಪ್ರತಿಯೊಬ್ಬರೂ ಕೇಳಿದ್ದೇವೆ, ಕಣ್ಣೀರು ಹಾಕಿದ್ದೇವೆ. ಹುಲಿಯ ಬಾಯಿಗೆ ಸಿಲುಕುವ ಹಂತದಲ್ಲೂ (Tiger Attack) ತಾಯಿ ಪ್ರೀತಿಯನ್ನು ಮರೆಯದ, ತಾಯ್ತನದ ಪ್ರೀತಿಯ ನಡುವೆಯೂ ಕೊಟ್ಟ ಮಾತನ್ನು ಉಳಿಸಿಕೊಂಡು ಜಗತ್ತಿನ ಚರಿತ್ರೆಯಲ್ಲಿ ಶಾಶ್ವತ ಸ್ಥಾನವನ್ನು ಉಳಿಸಿಕೊಂಡವಳು ಪುಣ್ಯಕೋಟಿ (Punyakoti cow). ಅಂಥಹುದೇ ಒಂದು ಪುಣ್ಯ ಕೋಟಿಯ ಕಥೆ (Story of tiger and cow) ಈಗ ಕೊಡಗಿನ (Kodagu news) ಒಂದು ಪುಟ್ಟ ಊರಿನಲ್ಲಿ ನಡೆಯುತ್ತಿದೆ.
ಇದು ಹುಲಿಯ ಬಾಯನ್ನು ಹೊಗಲು ಹೊರಟ ಹೊತ್ತಿನಲ್ಲಿ ಮಗುವನ್ನು ನೆನಪಿಸಿಕೊಂಡ ಪುಣ್ಯಕೋಟಿಯಲ್ಲ. ಹುಲಿಯ ಬಾಯಿಯಿಂದ ತಪ್ಪಿಸಿಕೊಂಡು ಬಂದು ಜೀವಚ್ಛವವಾಗಿ ಮಲಗಿದ್ದರೂ ತಾಯಿ ಪ್ರೀತಿಯನ್ನು ಮರೆಯದೆ ಹಾಲೂಡಿಸುತ್ತಿರುವ ಗೋಮಾತೆಯ ಕಥೆ (Story of Gomata).
ದಕ್ಷಿಣ ಕೊಡಗಿನಲ್ಲಿ ಹುಲಿಗಳ ಅಟ್ಟಹಾಸ ಮೇರೆ ಮೀರಿದೆ. ಜಾನುವಾರುಗಳನ್ನು ದಾರಿ ಮಧ್ಯೆ ತಡೆದು ದಾಳಿ ನಡೆಸುವುದು ಹೆಚ್ಚಾಗಿದೆ. ಹೀಗೆ ಮೇಯಲು ಬಿಟ್ಟಿದ್ದ ಹಸುವೊಂದು ಹುಲಿಯ ದಾಳಿಗೆ ಸಿಲುಕಿ ಗಂಭೀರ ಗಾಯಗೊಂಡು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿರುವ ಮನಕಲಕುವ ಘಟನೆ ನಡೆಯುತ್ತಿರುವುದು ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾವಳಗೇರಿಯಲ್ಲಿ.
ಜ. 30ರಂದು ಟಿ. ಶೆಟ್ಟಿಗೇರಿ ಪಂಚಾಯಿತಿ ವ್ಯಾಪ್ತಿಯ ತಾವಳಗೇರಿ ಗ್ರಾಮದ ಸಿ.ಕೆ. ಗಿರೀಶ್ ಎಂಬವರ ಹಾಲು ಕರೆಯುವ ಹಸು ಮನೆಯ ಸಮೀಪ ಗದ್ದೆಯಲ್ಲಿ ಮೇಯುತ್ತಿತ್ತು. ಗದ್ದೆ ಬಯಲಲ್ಲಿ ಓಡಾಡುತ್ತ ಹುಲ್ಲು ತಿನ್ನುತ್ತಿದ್ದ ಹಸು ಇನ್ನು ಸ್ವಲ್ಪ ಹೊತ್ತು ಕಳೆದಿದ್ದರೆ, ತನ್ನ ಮನೆಯನ್ನು ಸೇರಿಕೊಳ್ಳುತ್ತಿತ್ತು. ಯಾಕೆಂದರೆ ಅಲ್ಲಿ ಅದರ ಕರು ಕಾಯುತ್ತಿತ್ತು.
ಆದರೆ, ಅಂದು ಮಧ್ಯಾಹ್ನ ಸುಮಾರು ಮೂರು ಗಂಟೆ ಸಮಯದಲ್ಲಿ, ಗದ್ದೆ ಬದಿಯಲ್ಲಿ ಅಡಗಿ ಕುಳಿತಿದ್ದ ಹುಲಿಯೊಂದು ಹಸುವಿನ ಬೆನ್ನಿನ ಮೇಲೆ ಕುಳಿತು, ಕುತ್ತಿಗೆಯ ಭಾಗಕ್ಕೆ ಬಲವಾಗಿ ಕಚ್ಚಿ ರಕ್ತ ಹೀರಲು ಪ್ರಯತ್ನಿಸಿದೆ.
ಹಗಲು ಹೊತ್ತು ಆಗಿರುವ ಕಾರಣ ಹಾಗೂ ದೊಡ್ಡದಾದ ಗಾತ್ರ ಹೊಂದಿ ಬಲಿಷ್ಠವಾಗಿದ್ದ ಹಸು ಮೈ ಕೊಡವಿ ಹುಲಿಯನ್ನು ಬೆನ್ನ ಮೇಲಿಂದ ಬೀಳಿಸುವ ಪ್ರಯತ್ನ ಮಾಡಿದಾಗ ಹುಲಿ ಹಸುವನ್ನು ಬಿಟ್ಟು ಹೋಗಿದೆ. ಆದರೆ ಹುಲಿಯು ಬೆನ್ನಿನ ಮೇಲೆ ನೆಗೆದ ರಭಸಕ್ಕೆ ಬೆನ್ನು ಹಾಗೂ ಸೊಂಟದ ಮೂಳೆ ಹಾಗೂ ಕುತ್ತಿಗೆಯ ಭಾಗಕ್ಕೆ ತೀವ್ರ ಪೆಟ್ಟಾಗಿರುವ ಕಾರಣ ಹಸುವು ಅಲ್ಲೇ ಸಮೀಪದಲ್ಲಿದ್ದ ಸಣ್ಣ ಗುಂಡಿಯೊಳಗೆ ಕುಸಿದು ಬಿದ್ದಿದೆ.
ಸ್ವಲ್ಪ ಸಮಯದ ನಂತರ ಮನೆಯಿಂದ ಹಸು ಮೇಯಲು ಬಿಟ್ಟಿದ್ದ ಕಡೆ ಗಮನಿಸಿದಾಗ ಹಸುವು ಒಂದೇ ಜಾಗದಲ್ಲಿ ತುಂಬಾ ಹೊತ್ತಿನಿಂದ ಮಲಗಿರುವುದನ್ನು ನೋಡಿದ ಅಲ್ಲಿನ ಕೆಲಸದ ಮಹಿಳೆಯೊಬ್ಬರು ಹತ್ತಿರ ಹೋಗಿ ನೋಡಿದಾಗ ಹಸು ಹುಲಿ ದಾಳಿಗೆ ಒಳಗಾಗಿ ನರಳುತ್ತಿರುವುದು ಕಂಡು ಬಂದಿದೆ. ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಪೊನ್ನಂಪೇಟೆ ಅರಣ್ಯ ವಲಯದ ಹುದಿಕೇರಿ ಶಾಖೆಯ ಉಪ ಅರಣ್ಯಾಧಿಕಾರಿ ಗಣೇಶ್ ಶೇಟ್ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ನಂತರ ಜೆಸಿಬಿ ಸಹಾಯದಿಂದ ಹಸುವನ್ನು ಮನೆಗೆ ಸಾಗಿಸಿ ಆರೈಕೆ ಮಾಡಲಾಗುತ್ತಿದೆ.
Tiger attack : ಮನೆಯಲ್ಲಿ ಮನಕಲಕುವ ದೃಶ್ಯ
ಗಾಯಗೊಂಡಿರುವ ಹಸುವು ಒಂದು ತಿಂಗಳ ಹಿಂದೆಯಷ್ಟೇ ಕರುವಿಗೆ ಜನ್ಮ ನೀಡಿತ್ತು. ತನ್ನ ತಾಯಿ, ಹುಲಿಯ ದಾಳಿಗೆ ಒಳಗಾಗಿ ಸಾವು ಬದುಕಿನ ಮಧ್ಯೆ ಹೋರಾಡುತ್ತ ಸಂಕಟಪಡುತ್ತ ಮಲಗಿದ್ದಾಳೆ ಎಂಬುದರ ಪರಿವೆಯೇ ಇಲ್ಲದೆ, ಹಸುವಿನ ಸುತ್ತ ಓಡಾಡುತ್ತಾ, ಹಸಿವು ಆದಾಗ ತನ್ನ ತಾಯಿಯ ಕೆಚ್ಚಲಿಗೆ ಬಾಯಿ ಹಾಕಿ ಕರು ಹಾಲು ಕುಡಿಯುವ ದೃಶ್ಯ ಕಲ್ಲು ಹೃದಯವನ್ನೂ ಕರಗಿಸುತ್ತದೆ.
ಇದನ್ನೂ ಓದಿ: Tiger Attack : ಕರುವಿನ ಹೊಟ್ಟೆ ಬಗೆದು ತಿಂದ ವ್ಯಾಘ್ರ; ಕಾರವಾರದಲ್ಲಿ ಹುಲಿ ಭೀತಿ ಶುರು
ಕಳೆದ ಒಂದು ವಾರದಿಂದ ಮಲಗಿದಲ್ಲೆ ಮಲಗಿರುವ ಕಾರಣ ಹಸುವು ನಿತ್ರಾಣಗೊಂಡಿದ್ದು ಹಾಲಿಲ್ಲದೆ ಕೆಚ್ಚಲು ಕೂಡ ಬತ್ತಿ ಹೋಗಿದೆ. ಮಲಗಿದಲ್ಲೇ ತನ್ನ ಕರುವನ್ನು ನೋಡುತ್ತಾ ಕಣ್ಣೀರಿಡುತ್ತಾ ಹಸುವು ಯಾತನೆ ಅನುಭವಿಸುತ್ತಿರುವ ದೃಶ್ಯ ಮನ ಕಲಕುವಂತಿದೆ.
ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಾ ಮಲಗಿರುವ ಹಸುವಿಗೆ ಪಶುವೈದ್ಯ ಡಾ. ಗಿರೀಶ್. ಬಿ.ಜಿ. ಚಿಕಿತ್ಸೆ ನೀಡುತ್ತಿದ್ದಾರೆ. ಎಡಿಸನ್ ಎಂಬವರು ಹಸುವಿನ ಪಾಲನೆ ಮಾಡುತ್ತಿದ್ದಾರೆ. ಹಸುವಿಗೆ ಕಾಲಿನಲ್ಲಿ ಬಲವಿಲ್ಲ. ಅದರ ಬಾಯಿಗೆ ಏನಾದರೂ ಕೊಟ್ಟರಷ್ಟೇ ತಿನ್ನುತ್ತಿದೆ. ಅದು ಕೂಡಾ ತಿನ್ನುವಾಗಲೂ ಸುಸ್ತಾಗುತ್ತಿದೆ.