ಕೊಡಗು: ಮಲೆನಾಡಿನ ಕೊಡಗಿನಲ್ಲಿ ಆನೆ- ಮಾನವ ಸಂಘರ್ಷ (Wild Animals Attack) ಮುಂದುವರಿದಿದೆ. ಬೆಳ್ಳಂಬೆಳ್ಳಗೆ ಕಾಡಾನೆ ದಾಳಿಗೆ (Elephant attack) ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಕೊಡಗಿನ ಸಿದ್ದಾಪುರ ಸಮೀಪದ ಚನ್ನಯ್ಯನಕೋಟೆ ಗ್ರಾಮದಲ್ಲಿ ಘಟನೆ ನಡೆದಿದೆ.
ಮನೆಯ ಸಮೀಪವೇ ಮಹಿಳೆ ಮೇಲೆ ದಾಳಿ ನಡೆಸಿ ಕಾಡಾನೆ ಕೊಂದು ಹಾಕಿದೆ. ಚನ್ನಯ್ಯನಕೋಟೆ ನಿವಾಸಿ ಕಾತಯಿ (72) ಮೃತ ದುರ್ದೈವಿ. ಮಗನ ಮನೆಯಿಂದ ಹೊರ ಬರುತ್ತಿದ್ದ ವೇಳೆ ರೊಚ್ಚಿಗೆದ್ದ ಕಾಡಾನೆಯೂ ದಾಳಿ ಮಾಡಿದೆ. ವೃದ್ಧೆಯಾಗಿರುವುದರಿಂದ ಆನೆಯಿಂದ ತಪ್ಪಿಸಿಕೊಳ್ಳಲು ಆಗದೆ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಆನೆ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಚನ್ನಯ್ಯನಕೋಟೆ ಘಟನೆ ನಡೆದಿದೆ. ಸ್ಥಳಕ್ಕೆ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಭೇಟಿ ನೀಡಿ ಅರಣ್ಯಾಧಿಕಾರಿಗಳಿಂದ ಮಾಹಿತಿ ಪಡೆದರು.
ಇದನ್ನೂ ಓದಿ: Karnataka Weather : 8 ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಮೀನುಗಾರರಿಗೂ ಇನ್ನೆರಡು ದಿನ ಅಲರ್ಟ್
ಕೆಸರಿನಲ್ಲಿ ಸಿಲುಕಿ ಕಾಡಾನೆ ಸಾವು
ಕೆರೆಯ ಕೆಸರಿನಲ್ಲಿ ಸಿಲುಕಿ ಕಾಡಾನೆಯೊಂದು ಮೃತಪಟ್ಟಿದೆ. ಕೊಡಗು ಜಿಲ್ಲೆಯ ಅಮ್ಮತ್ತಿ ಬಳಿ ಘಟನೆ ನಡೆದಿದೆ. ಕನ್ನಡ ಮಠಕ್ಕೆ ಸೇರಿದ ಕೆರೆಯಲ್ಲಿ ಹತ್ತು ವರ್ಷದ ಆನೆ ಮೃತಪಟ್ಟಿದೆ. ಅರಣ್ಯ ಇಲಾಖೆಯು ಜೆಸಿಬಿ ಬಳಿಸಿ ಆನೆಯನ್ನು ಮೇಲೆತ್ತಿ ಅದೇ ಸ್ಥಳದಲ್ಲಿಯೇ ಅಂತ್ಯಕ್ರಿಯೆ ನಡೆಸಿದೆ. ಡಾ. ಚಿಟ್ಟಿಯಪ್ಪ ಅವರಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕಾಡಾನೆಯು ನೀರು ಕುಡಿಯಲು ಬಂದಾಗ ಸಿಲುಕಿಕೊಂಡಿದೆ.
ಮೈಸೂರಿನಲ್ಲಿ ಉಡ ಮಾರಾಟಕ್ಕೆ ಯತ್ನ
ಅಕ್ರಮವಾಗಿ ಜೀವಂತ ಉಡ ಮಾರಾಟಕ್ಕೆ ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಚಿಕ್ಕಹುಣಸೂರಿನಲ್ಲಿ ಘಟನೆ ನಡೆದಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯಧಿಕಾರಿಗಳು ಉಡ ರಕ್ಷಿಸಿ, ದೇವಕಾರಿ (54) ಎಂಬಾತನನ್ನು ಬಂಧಿಸಿದ್ದಾರೆ. ದೇವಕಾರಿ ಹುಣಸೂರು ತಾಲ್ಲೂಕಿನ ಪಕ್ಷಿರಾಜಪುರ ನಿವಾಸಿಯಾಗಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ