Site icon Vistara News

Kolar Politics | ಗುತ್ತಿಗೆದಾರನ ಹಿಂದೆ ಗಿರಕಿ ಹೊಡೆದ ಗಿರಾಕಿ ಯಾರು?: ಕೃಷ್ಣ ಬೈರೇಗೌಡ ವಿರುದ್ಧ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ

kolar-politics-hd-kumarasweamy-lashes-out-on-krishna-byre-gowda-over-kaveri-water-issue

ಬೆಂಗಳೂರು: ರಾಜ್ಯದ ವಿವಿಧೆಡೆ ಸಂಚರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಈ ಬಾರಿ ಕೋಲಾರದಲ್ಲಿಯೇ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ ನಂತರ ಕ್ಷೇತ್ರದಲ್ಲಿ ರಾಜಕೀಯ ವಾತಾವರಣ ಕಾವೇರಿದೆ. ಕೋಲಾರದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಜೆಡಿಎಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದ ಮಾಜಿ ಸಚಿವ ಕೃಷ್ಣ ಬೈರೇಗೌಡ ವಿರುದ್ಧ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ತಮ್ಮ ಮನೆಗಾಗಿ ರಾಝಕಾರಣ ಮಾಡಿದವರು ಈಗ ಮಾತನಾಡುತ್ತಿದ್ದಾರೆ. ಅವರದೇ ಕುಟುಂಬದಿಂದ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಆಗಿದ್ದಾಗ ಏಕೆ ಕೋಲಾರ ಜಿಲ್ಲೆಗೆ ಕಾವೇರಿ ನೀರು ನೀಡಲಿಲ್ಲ? ಎಂದು ಜೆಡಿಎಸ್‌ ಕುರಿತು ಸೋಮವಾರ ಕೋಲಾರದಲ್ಲಿ ಕೃಷ್ಣ ಬೈರೇಗೌಡ ವಾಗ್ದಾಳಿ ನಡೆಸಿದ್ದರು. ಈ ಕುರಿತು ಕುಮಾರಸ್ವಾಮಿ ಸರಣಿ ಟ್ವೀಟ್‌ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.

“ಕೃಷ್ಣ ಬೈರೇಗೌಡ ಅವರು ಬಹಳ ತಿಳುವಳಿಕೆ ಉಳ್ಳವರು ಎಂದು ಭಾವಿಸಿದ್ದೆ. ನನ್ನಂತೆ ಅವರು ಹಳ್ಳಿಯಲ್ಲಿ ಕಲಿಯದೆ ವಿದೇಶದಲ್ಲಿ ಕಲಿತವರು. ಅವರ ಜ್ಞಾನದ ಪರಿಧಿ ದೊಡ್ಡದು ಎಂದು ತಿಳಿದಿದ್ದೆ. ಕೋಲಾರದಲ್ಲಿ ನಿನ್ನೆ ಅವರು ಕೊಟ್ಟ ಹೇಳಿಕೆ ಗಮನಿಸಿದ ಮೇಲೆ ಅವರ ಕುರಿತ ನನ್ನ ಅಭಿಪ್ರಾಯ ತಪ್ಪೆಂದು ಎನಿಸಿತು”

“ಮಾನ್ಯ ಕೃಷ್ಣಭೈರೇಗೌಡರೇ, ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ನಿಮ್ಮ ಅಜ್ಞಾನಕ್ಕೆ ಏನೆಂದು ಹೇಳಬೇಕೋ ಗೊತ್ತಾಗುತ್ತಿಲ್ಲ. ಕಾವೇರಿ ನ್ಯಾಯಾಧಿಕರಣ ರಚನೆ ಆಗಿದ್ದು ಯಾವಾಗ? ರಾಜ್ಯಕ್ಕೆ ಕಾವೇರಿ ನೀರಿನ ಹಕ್ಕು ಸಾಧಿಸಲು ಮಾಜಿ ಪ್ರಧಾನಿಗಳಾದ ಎಚ್‌.ಡಿ. ದೇವೇಗೌಡ ಅವರ ಪಾತ್ರ ಏನು? ಎಂಬುದರ ಬಗ್ಗೆ ದಯಮಾಡಿ ಮಾಹಿತಿ ಪಡೆದುಕೊಳ್ಳಿ. ನಿಮ್ಮ ತಂದೆಯವರಾದ ಶ್ರೀ ಸಿ.ಭೈರೇಗೌಡರ ಬಗ್ಗೆ ನನಗೂ ಅಪಾರ ಗೌರವ ಇದೆ. ಶ್ರೀ ದೇವೇಗೌಡರ ಸಂಪುಟದಲ್ಲಿ ಪ್ರಭಾವೀ ಮಂತ್ರಿಗಳಾಗಿದ್ದ ನಿಮ್ಮ ತಂದೆಯವರು ಅಂದೇ ಕೋಲಾರಕ್ಕೆ ಕಾವೇರಿ ನೀರು ಹರಿಸುವ ಬಗ್ಗೆ ದನಿ ಎತ್ತಬಹುದಿತ್ತು. ಕೊನೆಗೆ ನೀವಾದರೂ ಹೋರಾಟ ನಡೆಸಬೇಕಿತ್ತು”.

“ನೀರೇ ಬರದಿರುವ ಎತ್ತಿನಹೊಳೆ ಹೆಸರಿನಲ್ಲಿ ಎತ್ತಿದ ಎತ್ತುವಳಿ ಸಾಲದೆಂದು ಕೆಸಿ ವ್ಯಾಲಿಯಲ್ಲಿ ಪರ್ಸಂಟೇಜ್ ಜೇಬಿಗಿಳಿಸಿದ್ದು ಯಾರು? ಹಣದ ದುರಾಸೆಗೆ ವಿಷನೀರು ಹರಿಸಿ ಕೋಲಾರ ಜಿಲ್ಲೆ ಜನರನ್ನು ಸಾವಿನಕೂಪಕ್ಕೆ ತಳ್ಳಿದವರು ಯಾರು? ಆ ಗುತ್ತಿಗೆದಾರನ ಹಿಂದೆ ಅನುದಿನ ಗಿರಕಿ ಹೊಡೆದ ಗಿರಾಕಿ ಯಾರು ಎಂದು ನಿಮಗೆ ಗೊತ್ತಿಲ್ಲವೆ ಕೃಷ್ಣಭೈರೇಗೌಡರೇ? ನೈಟ್ರೇಟ್,ಪಾಸ್ಪರಸ್,ಸೀಸ ಸೇರಿ ಬೆಂಗಳೂರು ಜನರ ಮಲಮೂತ್ರಗಳೇ ತುಂಬಿರುವ ಕೊಳಚೆ ನೀರನ್ನು 3ನೇ ಹಂತದಲ್ಲಿ ಸಂಸ್ಕರಿಸದೆ ಕೋಲಾರಕ್ಕೆ ಹರಿಸಿದ್ದೇ ಮಹಾಪಾಪ.ಇಷ್ಟು ದಿನ ಅದನ್ನೇ ಪುಣ್ಯತೀರ್ಥ ಎಂದು ಡಂಗುರ ಹೊಡೆದವರು ನಿನ್ನೆ ಕೋಲಾರದಲ್ಲಿ 3ನೇ ಹಂತದ ಸಂಸ್ಕರಣೆ ಬಗ್ಗೆ ಹೇಳಿ ಕಾವೇರಿ ಬಗ್ಗೆ ಬೊಗಳೆ ಬಿಡುತ್ತೀರಲ್ಲ,ಸ್ವಲ್ಪವಾದರೂ ಸಂಕೋಚ ಬೇಡವೇ?”

“5 ವರ್ಷ ಸರಕಾರ ಮಾಡಿ ಎತ್ತಿನಹೊಳೆ ಹೆಸರಿನಲ್ಲಿ ಕೊಳ್ಳೆ ಹೊಡೆದ ಗಿರಾಕಿಗಳು, ಆ ನಂತರ ಕೆಸಿ ವ್ಯಾಲಿಯ ವಿಷನೀರು ಹರಿಸಿ, ಈಗ ಚುನಾವಣೆ ಹೊತ್ತಿನಲ್ಲಿ ಕಾವೇರಿ ಎಂದು ಸುಳ್ಳು ಹೇಳುವುದು ಎಷ್ಟು ಸರಿ? ಒಮ್ಮೆ ಯೋಚನೆ ಮಾಡಿ ಕೃಷ್ಣಭೈರೇಗೌಡರೇ? ಮತ ಬೇಕಾದಾಗ ಮನಃಸಾಕ್ಷಿಯನ್ನು ಮಾರಿಕೊಳ್ಳುವುದು ನಿಮಗೆ ಶೋಭೆಯಲ್ಲ” ಎಂದಿದ್ದಾರೆ.

ಇದನ್ನೂ ಓದಿ | Karnataka Election | ಪುತ್ರ ವ್ಯಾಮೋಹದಲ್ಲಿ ರಿಸ್ಕ್‌ ತೆಗೆದುಕೊಂಡ ಸಿದ್ದರಾಮಯ್ಯ; ಬಾದಾಮಿಯಂತೆಯೇ ʼಲಾಕ್‌ʼ ಆಗುತ್ತಾರೆಯೇ ಮಾಜಿ ಸಿಎಂ?

Exit mobile version