Site icon Vistara News

ಸೆ.26ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ʼದಶಹರʼ ದಸರಾ ವೈಭವ ನೃತ್ಯ ರೂಪಕ

ಬೆಂಗಳೂರು: ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಚಿಕ್ಕತಿರುಪತಿಯ ನೃತ್ಯಲೋಕ ಸ್ಕೂಲ್ ಆಫ್ ಡ್ಯಾನ್ಸ್ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಜೆ.ಸಿ.ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ಸೆಪ್ಟೆಂಬರ್ 26ರಂದು ಸಂಜೆ 6 ಗಂಟೆಗೆ ʼದಶಹರʼ ದಸರಾ ವೈಭವ ನೃತ್ಯ ರೂಪಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ದೇಶದ ವಿವಿಧ ಭಾಗಗಳಲ್ಲಿ ಆಚರಿಸುವ ನವರಾತ್ರಿ ಉತ್ಸವ ಪದ್ಧತಿಗಳು ಮತ್ತು ಗೊಂಬೆ ಹಬ್ಬದ ವೈಶಿಷ್ಟ್ಯಗಳನ್ನು ವಿದ್ಯಾರ್ಥಿಗಳು ಕಾರ್ಯಕ್ರಮದ ವೇದಿಕೆಯಲ್ಲಿ ಪ್ರದರ್ಶಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ ಆರೂರು ಅನಂತ ಕೃಷ್ಣಶರ್ಮ ಅವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಎನ್. ಚಲವಾದಿ ಮತ್ತು ಅಂತಾರಾಷ್ಟ್ರೀಯ ಪ್ರಸಿದ್ಧ ಜಾನಪದ ಗಾಯಕಿ ಸವಿತಕ್ಕ ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಡಾ. ಎಂ.ಆರ್‌ ವೆಂಕಟೇಶ್, ಬಿಜೆಪಿ ಹಿರಿಯ ಮುಖಂಡ ಹೂಡಿ ವಿಜಯಕುಮಾರ್ ಉಪಸ್ಥಿತರಿರಲಿದ್ದಾರೆ.

ಗ್ರಾಮೀಣ ಭಾಗದ ಮಕ್ಕಳನ್ನು ಪ್ರೋತ್ಸಾಹಿಸಿ ಸಾಂಪ್ರದಾಯಿಕ ವಿವಿಧ ನೃತ್ಯ ಪ್ರಕಾರಗಳನ್ನು ಉಳಿಸಿ ಬೆಳಸುವಂತಹ ನಿಟ್ಟಿನಲ್ಲಿ ಚಿಕ್ಕತಿರುಪತಿಯಲ್ಲಿ ನೃತ್ಯಲೋಕ ಸ್ಕೂಲ್ ಆಫ್ ಡ್ಯಾನ್ಸ್ ಸಂಸ್ಥೆಯ ಶಾಖೆಯನ್ನು ಪ್ರಾರಂಭಿಸಿ ಭರತನಾಟ್ಯದ ಜತೆ ವಿವಿಧ ಸಾಂಪ್ರದಾಯಿಕ ನೃತ್ಯ ಪ್ರಕಾರಗಳನ್ನು ಗ್ರಾಮೀಣ ಭಾಗಕ್ಕೆ ಆಳವಾಗಿ ಪರಿಚಯಿಸುವ ಕಾರ್ಯಕ್ಕೆ ವಿದುಷಿ ಬಿಂದು ಹರ್ಷಿತ್ ಮುಂದಾಗಿದ್ದಾರೆ. ಈ ಬಾರಿಯ ನವರಾತ್ರಿ ಉತ್ಸವ ನಿಮಿತ್ತ ವಿದುಷಿ ಬಿಂದು ಹರ್ಷಿತ್ ಸಾರಥ್ಯದಲ್ಲಿ ಶಾಲೆಯ ಮಕ್ಕಳೇ ಭಾಗವಹಿಸಿ ರೂಪಿಸಿರುವ “ದಶಹರ” ದಸರಾ ವೈಭವ ನೃತ್ಯ ರೂಪಕವನ್ನು ಪ್ರದರ್ಶಿಸಲಾಗುತ್ತದೆ.

ಇದನ್ನೂ ಓದಿ | ಸಪ್ತಕ ಸಂಸ್ಥೆಯಿಂದ ಅ.29ರಂದು ʼಲಲಿತಾ ನಮನʼ ವಿಶೇಷ ಸಂಗೀತ ಕಾರ್ಯಕ್ರಮ

Exit mobile version