Site icon Vistara News

JDS Pancharatna | ಶಾಲೆಯ ಕೊಠಡಿ ಕಟ್ಟಿಸಿಕೊಡಿ ಸಾರ್‌; ರಸ್ತೆ ಮಧ್ಯೆಯೇ ಎಚ್‌ಡಿಕೆ ಅಡ್ಡಗಟ್ಟಿ ಮಕ್ಕಳ ಮನವಿ

JDS Pancharatna

ಕೋಲಾರ: ಜಿಲ್ಲೆಯಲ್ಲಿ ಜೆಡಿಎಸ್ ಪಂಚಯಾತ್ರೆಯ (JDS Pancharatna) ಕೊನೆಯ ದಿನವಾದ ಮಂಗಳವಾರ (ಐದನೇ ದಿನ) ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧೆಡೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ವಿಭಿನ್ನವಾಗಿ ಸ್ವಾಗತ ಎದುರಾಯಿತು. ಈ ನಡುವೆ ಮಾಸ್ತೇನಹಳ್ಳಿ ಹಾಗೂ ಬಂಗವಾದಿ ಗ್ರಾಮಗಳ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ರಸ್ತೆಯಲ್ಲಿ ಧರಣಿ ನಡೆಸಿ, ಮಾಜಿ ಮುಖ್ಯಮಂತ್ರಿಯನ್ನು ಅಡ್ಡಗಟ್ಟಿ, ಶಾಲೆಯ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರ ಸಲ್ಲಿಸಿದ್ದು ಕಂಡುಬಂತು.

ಮೊದಲಿಗೆ ಮಾಸ್ತೇನಹಳ್ಳಿಯಲ್ಲಿ ರಸ್ತೆಯಲ್ಲಿ ಮಕ್ಕಳು ಧರಣಿ ಕುಳಿತಿದ್ದರು. ಸ್ಥಳಕ್ಕೆ ಎಚ್‌.ಡಿ.ಕುಮಾರಸ್ವಾಮಿ ಆಗಮಿಸಿದಾಗ ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ನೂತನ ಕಟ್ಟಡ ನಿರ್ಮಿಸಲು ಕ್ರಮಕೈಗೊಳ್ಳಬೇಕು. ಕೊಠಡಿಗಳು ಸೋರುತ್ತಿರುವ ಹಿನ್ನೆಲೆಯಲ್ಲಿ ತರಗತಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಶಿಥಿಲವಾದ ಶಾಲಾ ಕಟ್ಟಡ ತೋರಿಸಿ ಮಾಜಿ ಸಿಎಂ ಮುಂದೆ ಮಕ್ಕಳು ಅಳಲು ತೋಡಿಕೊಂಡರು.

ಇದನ್ನೂ ಓದಿ | ಜನಸಂಕಲ್ಪ ಯಾತ್ರೆ | ಹಿಂದು-ಮುಸ್ಲಿಂ ಏಕತೆಯೇ ಮೋದಿ ಅಪೇಕ್ಷೆ: ಮುಸ್ಲಿಮರು BJP ಬೆಂಬಲಿಸಿ ಎಂದ ಯಡಿಯೂರಪ್ಪ

ರಸ್ತೆಯಲ್ಲೇ ತಬ್ಬಿಕೊಂಡು ಮಕ್ಕಳು ಗೋಳಿಟ್ಟ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಮಕ್ಕಳ ಜತೆ ಶಾಲೆಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದರು. ಎಷ್ಟೇ ಮನವಿ ಕೊಟ್ಟರೂ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಬಾಲಕನೊಬ್ಬ ಕಣ್ಣೀರಿಡುತ್ತಾ ಹೇಳಿದಾಗ, ಮನವಿ ಪತ್ರ ಸ್ವೀಕರಿಸಿದ ಕುಮಾರಸ್ವಾಮಿ, ಎಷ್ಟು ಕೊಠಡಿ ಬೇಕಾಗಿದೆ? ಮಾಡಿಕೊಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ನಂತರ ಆ ಬಾಲಕನಿಗೆ, “ನೀನು ಏನು ಪೊಲೀಸ್ ಆಗುತ್ತೀಯಾ..?” ಎಂದು ಎಚ್‌ಡಿಕೆ ಪ್ರಶ್ನೆ ಮಾಡಿದಾಗ, ಆ ಬಾಲಕ, “ಹುಂ..” ಎಂದು ಉತ್ತರಿಸಿದ.

ನಂತರ ಬಂಗವಾದಿ ಗ್ರಾಮದಲ್ಲಿ ಎಚ್‌ಡಿಕೆ ಕಾರಿಗೆ ಅಡ್ಡಲಾಗಿ ಧರಣಿ ಕುಳಿತು, ಶಾಲಾ ಕಟ್ಟಡ ಬೇಕು ಎಂದು ಮಕ್ಕಳು ಪ್ರತಿಭಟನೆ ನಡೆಸಿದರು. ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದರೂ ಯಾರೂ ತಲೆಕೆಡಿಸಿಕೊಂಡಿಲ್ಲ ಎಂದು ಅಳಲು ತೋಡಿಕೊಂಡಾಗ, ಶಾಲಾ ಕಟ್ಟಡವನ್ನು ಕುಮಾರಸ್ವಾಮಿ ವೀಕ್ಷಿಸಿದರು.

ಶಿಕ್ಷಣ ಸಚಿವರಿಗೆ ಕರೆ ಮಾಡಿದ ಎಚ್‌ಡಿಕೆ
ಸೂಕ್ತ ಕಟ್ಟಡ ಇಲ್ಲದೆ ಅಶ್ವತ್ಥಕಟ್ಟೆ ಮೇಲೆ ಕಳೆದ 3 ವರ್ಷದಿಂದ ಪಾಠ ನಡೆಯುತ್ತಿದೆ ಎಂದು ಹೇಳಿದಾಗ ಮಕ್ಕಳನ್ನು ಕಂಡು ಕುಮಾರಸ್ವಾಮಿ ಭಾವುಕರಾಗಿ, ಸ್ಥಳದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರಿಗೆ ಕರೆ ಮಾಡಿ ಮನವಿ ಮಾಡಿದರು. ಈ ವೇಳೆ ತಕ್ಷಣವೇ ಸಮಸ್ಯೆ ಬಗೆಹರಿಸುತ್ತೇವೆ ಎಂದು ಸಚಿವ ನಾಗೇಶ್ ಸ್ಪಂದಿಸಿದರು. ಬಳಿಕ ಕೋಲಾರದ ಡಿಡಿಪಿಐ ಅವರಿಗೂ ಎಚ್‌ಡಿಕೆ ಕರೆ ಮಾಡಿ, ಶ್ರೀಘವಾಗಿ ಸಮಸ್ಯೆ ಬಗೆಹರಿಸಿ ಎಂದು ಸೂಚಿಸಿದರು.

ಇದನ್ನೂ ಓದಿ | JDS Pancharatna | ಜೆಡಿಎಸ್‌ ಅಧಿಕಾರಕ್ಕೆ ಬಂದರೆ ದಲಿತ ಸಮಾಜಕ್ಕೆ ಉಪ ಮುಖ್ಯಮಂತ್ರಿ ಸ್ಥಾನ: ಎಚ್‌ಡಿಕೆ

Exit mobile version