ಕೋಲಾರ: ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಜಾರಿಯಾಗಿದ್ದ ರೈತರ ಸಾಲಮನ್ನಾ ಯೋಜನೆಯ ಪ್ರಯೋಜನ ಪಡೆದಿದ್ದ ಯುವ ರೈತನೊಬ್ಬರು, ಜಿಲ್ಲೆಯಲ್ಲಿ ನಡೆಯುತ್ತಿರುವ ಜೆಡಿಎಸ್ ಪಂಚರತ್ನ ಯಾತ್ರೆಯಲ್ಲಿ(JDS Pancharatna) ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಧನ್ಯವಾದ ಹೇಳಿ, ಜೆಡಿಎಸ್ ಪಕ್ಷದ ನಿಧಿಗೆ 25 ಸಾವಿರ ರೂಪಾಯಿ ದೇಣಿಗೆ ನೀಡಿದ್ದಾರೆ. ಯುವಕನ ಪ್ರೀತಿಗೆ ಕರಗಿದ ಎಚ್‌ಡಿಕೆ, ಇಂತಹ ರೈತರಿಂದಲೇ ರಾಜ್ಯದಲ್ಲಿ ಜನತಾ ದಳ ಇನ್ನೂ ಉಳಿದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೋಲಾರ ಕ್ಷೇತ್ರದ ಛತ್ರ ಕೋಡಿಹಳ್ಳಿ ಗ್ರಾಮದ ಮುನಿಯಪ್ಪ ಎಂಬುವವರ ಪುತ್ರ ಅಶ್ವಿನ್ ಕುಮಾರ್, ಎಚ್.ಡಿ.ಕುಮಾರಸ್ವಾಮಿ ಅವರನ್ನು ಸೋಮವಾರ ಭೇಟಿಯಾಗಿ, ನಮ್ಮ ಕುಟುಂಬಕ್ಕೆ 1 ಲಕ್ಷ ರೂಪಾಯಿ ಕೃಷಿ ಸಾಲ ಮನ್ನಾ ಆಗಿತ್ತು, ಇದರಿಂದ ಕುಟುಂಬ ಆರ್ಥಿಕವಾಗಿ ಚೇತರಿಸಿಕೊಳ್ಳಲು ಸಾಧ್ಯವಾಯಿತು ಎಂದು ಧನ್ಯವಾದ ಹೇಳಿ, ಜೆಡಿಎಸ್ ಪಕ್ಷಕ್ಕೆ ದೇಣಿಗೆಯಾಗಿ 25 ಸಾವಿರ ರೂಪಾಯಿ ಚೆಕ್ ಅನ್ನು ಎಚ್.ಡಿ.ಕುಮಾರಸ್ವಾಮಿಗೆ ಹಸ್ತಾಂತರಿಸಿದ್ದಾರೆ.
ಇದನ್ನೂ ಓದಿ | HD Kumaraswamy | ಹೆಣ್ಣು ಮಕ್ಕಳು ಅದೇ ಜಿಲ್ಲೆಯ ಗಂಡನ್ನೇ ವರಿಸುವ ಹೊಸ ಕಾನೂನು ಜಾರಿಗೆ ತನ್ನಿ; ಎಚ್‌ಡಿಕೆಗೆ ಯುವ ರೈತನ ಪತ್ರ
ಈ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಸಾಲಮನ್ನಾ ಯೋಜನೆಯ ಅನುಕೂಲ ಪಡೆದಿದ್ದ ಯುವಕ, ಇವತ್ತು ಪಕ್ಷಕ್ಕೆ 25 ಸಾವಿರ ರೂಪಾಯಿ ದೇಣಿಗೆ ನೀಡಿದ್ದಾನೆ. ಅದೇ ರೀತಿ ಹಲವರು ದೇಣಿಗೆ ನೀಡಿದ್ದಾರೆ. ಇಂತಹ ರೈತರಿಂದಲೇ ಇಂದು ರಾಜ್ಯದಲ್ಲಿ ಜನತಾದಳ ಉಳಿದುಕೊಂಡಿದೆ ಎಂದು ಹೇಳಿದರು.
ಅಪಘಾತದಲ್ಲಿ ಗಾಯವಾಗಿ ಕಾಲಿಗೆ ಆಪರೇಷನ್ ಮಾಡಿಸಿಕೊಂಡಿದ್ದ ಮಾಲೂರು ತಾಲೂಕಿನ ವ್ಯಕ್ತಿಯೊಬ್ಬರ ಕುಟುಂಬ ಭಾನುವಾರ ನನಗೆ 5 ಸಾವಿರ ರೂಪಾಯಿ ದೇಣಿಗೆ ಕೊಟ್ಟಿದೆ. ತುರುವೇಕೆರೆಯ ವ್ಯಕ್ತಿಯೊಬ್ಬರು 1 ಲಕ್ಷ ರೂಪಾಯಿ ರೂ.ಗಳನ್ನು ಮನೆಯ ಹತ್ತಿರ ಬಂದು ನೀಡಿ, ನೀವು ಕಷ್ಟ ಪಡುತ್ತಿದ್ದೀರಿ, ನಿಮ್ಮ ಹೋರಾಟಕ್ಕೆ ನನ್ನ ದೇಣಿಗೆ ಕೊಟ್ಟಿದ್ದೇನೆ ಎಂದು ಹೇಳಿರುವುದಾಗಿ ತಿಳಿಸಿದರು.
ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟದ ಬಗ್ಗೆ ಸ್ಪಂದಿಸಿದ ಕುಮಾರಸ್ವಾಮಿ, ಈ ಪ್ರಕರಣದಲ್ಲಿ ಗೃಹ ಇಲಾಖೆ ಮತ್ತು ಗುಪ್ತಚರ ಇಲಾಖೆ ವಿಫಲವಾಗಿವೆ. ಕುಕ್ಕರ್ ಬಾಂಬ್ ಸಿಡಿದು ಇಬ್ಬರು ಸುಟ್ಟಗಾಯಗಳಿಂದ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಮೊದಲೇ ಕರಾವಳಿ ಪ್ರದೇಶ ಕೋಮುಗಲಭೆಗೆ ಪ್ರಸಿದ್ಧವಾಗಿದೆ. ಅಲ್ಲಿ ಇಂತಹ ವಾತಾವರಣ ನಿರ್ಮಾಣವಾಗಲುಕಾಂಗ್ರೆಸ್ ಹಾಗೂ ಬಿಜೆಪಿ ಎಂದು ಕಿಡಿಕಾರಿದರು.
ಈ ರೀತಿಯ ಚಟುವಟಿಕೆಗಳಿಂದ ಆ ಭಾಗದ ವಾಣಿಜ್ಯ ವ್ಯವಹಾರ, ಅಭಿವೃದ್ಧಿಗೆ ತೊಂದರೆ ಆಗುತ್ತಿದೆ. ಇಂತಹ ಘಟನೆಗಳು ರಾಜ್ಯದಲ್ಲಿ ಆಗಬಾರದು. ಶಾಂತಿಯುತವಾದ ರಾಜ್ಯದಲ್ಲಿ ಪದೇಪದೆ ಜವಾಬ್ದಾರಿಯುತ ಸ್ಥಾನದಲ್ಲಿರುವವರಿಂದ ಕೋಮು ದಳ್ಳುರಿಗೆ ಪ್ರಚೋದನೆಯಾಗುತ್ತಿದೆ. ಇದರ ಹಿಂದೆ ಯಾರೆ ಇದ್ದರೂ ಅವರ ವಿರುದ್ಧ ಕಠಿಣ ಕ್ರಮ ಆಗಲೇಬೇಕು. ಕೃತ್ಯದ ಹಿಂದೆ ಗಾಯಾಳು ಯುವಕ ಒಬ್ಬನೇ ಇರಲ್ಲ, ಅವರ ಹಿಂದೆ ಯಾರಿದ್ದಾರೆ ಎಂಬುವುದನ್ನು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ | Election 2023 | ಕೊನೆಗೂ ಕಾಂಗ್ರೆಸ್ ಟಿಕೆಟ್ ಪಡೆಯಲು ಅರ್ಜಿ ಸಲ್ಲಿಸಿದ ಸಿದ್ದರಾಮಯ್ಯ: ಒಂದೇ ಕ್ಷೇತ್ರದಿಂದ ಸ್ಪರ್ಧೆ