ಕೋಲಾರ: ಬೆಮೆಲ್ ಕಾರ್ಖಾನೆಯ (BEML Factory KGF) ನೇಮಕಾತಿಯಲ್ಲಿ (Employments) ಸ್ಥಳೀಯರಿಗೆ ಅನ್ಯಾಯವಾಗಿದೆ. ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಸಾವಿರಾರು ಕನ್ನಡಿಗ ಕಾರ್ಮಿಕರು (labourers) ಧರಣಿ ಪ್ರತಿಭಟನೆ (Workers protest) ನಡೆಸಿದ್ದಾರೆ. ಸುಮಾರು 2500 ಕಾರ್ಮಿಕರಿಂದ ಪ್ರತಿಭಟನೆ ಮುಂದುವರಿದಿದೆ.
ಕೋಲಾರ (Kolar news) ಜಿಲ್ಲೆಯ ಕೆಜಿಎಫ್ ನಗರದಲ್ಲಿರುವ ಬೆಮೆಲ್ ಸಂಸ್ಥೆಯಲ್ಲಿ ಸ್ಥಳೀಯರಿಗೆ ಅನ್ಯಾಯ ಮಾಡಿ ಉತ್ತರ ಭಾರತದವರಿಗೆ ಉದ್ಯೋಗ ನೀಡಲಾಗುತ್ತಿದೆ ಎಂದು ಬೆಮೆಲ್ ಆಡಳಿತ ಮಂಡಳಿ ವಿರುದ್ಧ ನಿನ್ನೆ ಮಧ್ಯಾಹ್ನ ಕನ್ನಡದ ಕಾರ್ಮಿಕರು ಬಂಡೆದ್ದಿದ್ದರು. ಧರಣಿ ಪ್ರತಿಭಟನೆ ಕೈಗೊಂಡಿದ್ದಾರೆ.
ಕಾಂಟ್ರಾಕ್ಟ್ ಆಪರೇಟರ್ಸ್ ಸೇರಿ ವಿವಿಧ ಗುತ್ತಿಗೆ ನೌಕರರಿಂದ ಪ್ರತಿಭಟನೆ ನಡೆಯುತ್ತಿದೆ. ಬೆಮೆಲ್ ಕಾರ್ಖಾನೆ ಎದುರು ಜಮಾಯಿಸಿರುವ ಸೆಕೆಂಡ್ ಶಿಫ್ಟ್ ಹಾಗೂ ರಾತ್ರಿ ಪಾಳಯದ ನೌಕರರು, ಕೆಲಸಕ್ಕೆ ಹೋಗದೆ ಮುಷ್ಕರ ನಡೆಸಿದ್ದಾರೆ. ಆಡಳಿತ ಮಂಡಳಿ ನೌಕರರ ಮನವೊಲಿಸಲು ಮುಂದಾಗಿದೆ. ಕೆಜಿಎಫ್ ಪೊಲೀಸರಿಂದ ಸಂಸ್ಥೆಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು ಸ್ಥಳದಲ್ಲಿ ನಾಲ್ಕು ಡಿಎಆರ್ ವ್ಯಾನ್, ನೂರಾರು ಪೊಲೀಸರು ಬೀಡು ಬಿಟ್ಟಿದ್ದಾರೆ.
ಈಶ್ವರ ಮಲ್ಪೆ ತಂಡಕ್ಕೂ ಸಿಗಲಿಲ್ಲ ಲಾರಿ ಸುಳಿವು; ಅರ್ಜುನನೂ ಕಣ್ಮರೆ
ಕಾರವಾರ: ಉತ್ತರ ಕನ್ನಡದ ಅಂಕೋಲಾ ಶಿರೂರು ಗುಡ್ಡಕುಸಿತ ಪ್ರಕರಣದಲ್ಲಿ ಜಲಸಮಾಧಿಯಾಗಿರುವ ಲಾರಿ ಹಾಗೂ ಅದರ ಚಾಲಕ ಅರ್ಜುನ ಶೋಧ ಕಾರ್ಯ ನಿನ್ನೆ ವಿಫಲಗೊಂಡಿದೆ. ಮುಳುಗುತಜ್ಞ ಈಶ್ವರ ಮಲ್ಪೆ ತಂಡಕ್ಕೂ ಇವರ ಪತ್ತೆ ಹಿಡಿಯುವುದು ಸಾಧ್ಯವಾಗಿಲ್ಲ.
ಮುಳುಗುತಜ್ಞರ ಕಾರ್ಯಾಚರಣೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ನಿನ್ನೆ ಸಂಜೆ ಮಾಹಿತಿ ನೀಡಿದ್ದಾರೆ. ನೌಕಾಪಡೆ, ಸೇನೆ ಹಾಗೂ ದೆಹಲಿ ತಂಡ ನೀಡಿದ್ದ 4 ಜಾಗಗಳಲ್ಲಿ 3 ಜಾಗದಲ್ಲಿ ಮಲ್ಪೆಯ ಮುಳುಗುತಜ್ಞ ಈಶ್ವರ ತಂಡದಿಂದ ಕಾರ್ಯಾಚರಣೆ ನಡೆಸಲಾಗಿದೆ. NDRF, SDRF, ಸ್ಥಳೀಯ ಮೀನುಗಾರರ ಸಹಾಯದಿಂದ ಕಾರ್ಯಾಚರಣೆ ನಡೆದಿದೆ. ಇನ್ನೊಂದು ಜಾಗದ ಪರಿಶೀಲನೆ ಬಾಕಿ ಇದೆ. ಸಂಜೆಯಾದ ಹಿನ್ನಲೆ ನಾಳೆ ಉಳಿದ ಒಂದು ಪ್ರದೇಶದ ಪರಿಶೀಲನೆ ನಡೆಯಲಿದೆ ಎಂದಿದ್ದಾರೆ.
ಮೂರು ಜಾಗಗಳಲ್ಲಿ ಪರಿಶೀಲಿಸಿದಾಗ ಕಲ್ಲು, ಮಣ್ಣು, ಮರದ ತುಂಡು ಹೆಚ್ಚಾಗಿ ಪತ್ತೆಯಾಗಿದೆ. ಇವುಗಳನ್ನ ತೆರವುಗೊಳಿಸಿ ಆಳದಲ್ಲಿ ಪರಿಶೀಲನೆ ನಡೆಸಬೇಕಿದೆ. ನೀರಿನ ಹರಿವು 10 ನಾಟ್ಸ್‌ಗಿಂತ ಹೆಚ್ಚಾಗಿದ್ದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ನಾಳೆ ಒಮ್ಮೆ ಕೊನೆಯ ಪ್ರಯತ್ನವನ್ನ ಮಾಡುತ್ತೇವೆ. ಇದುವರೆಗೆ ಪರಿಶೀಲಿಸಿದ ಜಾಗದಲ್ಲಿ ಯಾವುದೇ ಮೆಟಲ್ ಡಿಟೆಕ್ಟ್ ಆಗಿಲ್ಲ. ನಾಳೆ ಪ್ರಮುಖ ಒಂದು ಸ್ಥಳದ ಪರಿಶೀಲನೆ ಇದೆ. ಇದರೊಂದಿಗೆ ನೌಕಾಪಡೆ, ಸೇನೆಯವರು ಸೋನಾರ್ ಡಿಟೆಕ್ಷನ್ ಕೂಡಾ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಕಲ್ಲು, ಮಣ್ಣು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಲಾರಿ ಇದೆ ಎನ್ನಲಾದ ಸ್ಥಳದಲ್ಲಿ ಬೃಹತ್ ಗಾತ್ರದ ಬಂಡೆಗಲ್ಲು ಕಂಡುಬಂದಿದೆ. ಬಂಡೆಗಲ್ಲಿನ ಕೆಳಗೆ ಲಾರಿ ಇರುವ ಸಾಧ್ಯತೆ ಇದೆ. ಈ ಕುರಿತು ಮತ್ತೊಮ್ಮೆ ಸಭೆ ನಡೆಸಿ ನಾಳೆ ಕಾರ್ಯಾಚರಣೆ ಮುಂದುವರೆಸುತ್ತೇವೆ. ನಾವು ಇದುವರೆಗೂ ಇನ್ನೂ ಮೂವರು ನಾಪತ್ತೆಯಾಗಿದ್ದಾರೆ ಎಂದೇ ಶೋಧ ನಡೆಸುತ್ತಿದ್ದೇವೆ. ಯಾರೂ ಸಹ ಮೃತಪಟ್ಟಿದ್ದಾರೆ ಎಂದು ನಾವು ಪರಿಗಣನೆ ಮಾಡಿಲ್ಲ. ಸಾಧ್ಯವಾದ ಎಲ್ಲ ಕಡೆ ಕಣ್ಮರೆಯಾಗಿರುವವರಿಗೆ ಶೋಧ ನಡೆಸಲಾಗುತ್ತಿದೆ. ಸಾರ್ವಜನಿಕರು ಸಹ ಯಾವುದೇ ಮಾಹಿತಿ ಸಿಕ್ಕಲ್ಲಿ ಜಿಲ್ಲಾಡಳಿತಕ್ಕೆ ತಿಳಿಸಿ ಎಂದು ಶಿರೂರಿನಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Tomato Price: ದಿಢೀರ್ ಕುಸಿದ ಟೊಮೆಟೊ ಬೆಲೆ, ಕೋಲಾರ ಎಪಿಎಂಸಿಯಲ್ಲಿ ತಳಮಳ